ಸುಳ್ಯ:ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಖಾಸಗಿ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ನಿಯಮಬಾಹಿರವಾಗಿ ಹೇರಿಕೊಂಡು ಹೋದರೆ ಅಂತಹ ವಾಹನಗಳ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲಾ ಎಸ್.ಡಿ.ಎಂ.ಸಿ, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು. ಕಳೆದ ಒಂದು ತಿಂಗಳಿನಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಅಟೋ ರಿಕ್ಷಾ ಮುಂತಾದ ಖಾಸಗಿ ವಾಹನಗಳ ಮೇಲೆ ತಪಾಸಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಅಲ್ಲದೇ ತಾಲೂಕಿನ ಖಾಸಗೀ ಶಾಲೆಗಳಿಗೆ ಈ ಬಗ್ಗೆ ನೋಟಿಸ್ ಕೂಡ ನೀಡಿದ್ದೇವೆ. ನಿಮ್ಮ ಶಾಲೆಗಳಿಗೆ ಬರುವ ಮಕ್ಕಳು ಯಾವ ವಾಹನದಲ್ಲಿ ಬರುತ್ತಾರೆ ಎಂಬುದು ಆಡಳಿತ ಮಂಡಳಿಯವರಿಗೆ ತಿಳಿಯಬೇಕು. ಖಾಸಗಿ ಶಾಲೆಗಳಲ್ಲಿ ಪೋಷಕರ ಸಭೆ ಕರೆದು ಕೂಡಲೇ ಮಾಹಿತಿ ನೀಡಬೇಕು. ಮಕ್ಕಳನ್ನು ಕರೆದು ಕೊಂಡು ಹೋಗುವ ಅಟೋದವರನ್ನು ಕರೆಸಿ ಸೂಕ್ತ ನಿರ್ದೇಶನ ನೀಡಬೇಕು. ಅಲ್ಲದೇ ಶಾಲಾ ಕಾಲೇಜುಗಳಲ್ಲಿ ಮಕ್ಕಳು ಮೊಬೈಲ್ ಫೊನ್‍ಗಳನ್ನು ಬಳಕೆ ಮಾಡುವುದರ ಮೇಲೆ ಕಠಿಣ ನಿಗಾ ವಹಿಸಿ ಎಂದು ಹೇಳಿದರು.
ಸುಳ್ಯ ಗ್ರಾಮೀಣ ಪ್ರದೇಶವಾದ ಕಾರಣ ಗ್ರಾಮೀಣ ಭಾಗದ ಮಕ್ಕಳಿಗೆ ಸರಕಾರಿ ಬಸ್ಸಿನ ಕೊರತೆ ಉಂಟಾಗಿದೆ. ಒಂದು ಬಸ್ಸಿನಲ್ಲಿ 100 ರಷ್ಟು ಮಕ್ಕಳನ್ನು ತುಂಬಿಸಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಮಕ್ಕಳಿಗೆ ತೊಂದರೆ ಆಗುವ ಕಡೆ ಹೆಚ್ಚುವರಿ ಬಸ್ಸುಗಳನ್ನು ಹಾಕಬೇಕು ಬೆಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜುಗಳು ಬಿಡುವ ಸಮಯದಲ್ಲಿ ಕೆಲವು ಕಡೆ ಒಂದೇ ಬಸ್ಸಿನ ವ್ಯವಸ್ಥೆ ಇದೆ. ಇದರಿಂದ ಮಕ್ಕಳು ಮನೆಗೆ ತಲುಪುವಾಗ ತಡವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸುಳ್ಯದ ಕೊಡಿಯಾಲಬೈಲು ಪದವಿ ಕಾಲೇಜಿನಿಂದ ವಿದ್ಯಾರ್ಥಿಗಳು ನಡೆದುಕೊಂಡೆ ಬರುತ್ತಾರೆ. ಅಲ್ಲಿಗೆ ಕೂಡಲೇ ಬಸ್ಸಿವ ವ್ಯವಸ್ಥೆ ಹಾಕಬೇಕು ಎಂದು ಪಿ.ಎಸ್. ಗಂಗಾಧರ ಹೇಳಿದರು. ಇದಕ್ಕೆ ಉತ್ತರಿಸಿದ ಡಿಪೊ ಮೆನೇಜರ್ ಸುಂದರ್‍ರಾಜ್ ಮಕ್ಕಳಿಗೆ ತೊಂದರೆ ಆಗುವ ಕಡೆ ಹೆಚ್ಚುವರಿ ಬಸ್ಸುಗಳನ್ನು ಹಾಕಲು ಪ್ರಯತ್ನಿಸಲಾಗುವುದು. ಅಲ್ಲದೇ ಈಗಾಗಲೇ ಹಲವು ಕಡೆ ಹೋಸ ರೂಟ್‍ಗಳ ಬಗ್ಗೆ ಸರ್ವೇ ನಡೆಸಿದ್ದೇವೆ. ಯಾವ ಪ್ರದೇಶಗಳಿಗೆ ಅವಶ್ಯಕತೆ ಇದೆ ಎಂಬುದನ್ನು ಮೇಲಾಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದರು.
ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಸುರಕ್ಷತೆ ಕಡೆ ವಿದ್ಯಾರ್ಥಿಗಳು ಗಮನ ನೀಡಬೇಕು ಎಂದು ಸೂಚನೆ ನೀಡಲಾಯಿತು. ಬಸ್ಸು ಚಲಿಸುವಾಗ ಬಸ್ಸುಗಳ ಬಾಗಿಲನ್ನು ಲಾಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸುಂದರ್ ರಾಜ್ ಹೇಳಿದರು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬಸ್ಸು ಪಾಸನ್ನು ತೋರಿಸುವಾಗ ವಿದ್ಯಾರ್ಥಿಗಳನ್ನು ಕೀಳಾಗಿ ನೋಡುವ ನಿರ್ವಾಹಕರು ಇದ್ದಾರೆ. ಇಂತಹ ಘಟನೆಗಳು ನಡೆಯಬಾರದು ಎಂದು ಶಿಕ್ಷಣಾಧಿಕಾರಿ ಮಹಾದೇವ ಹೇಳಿದರು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸುವಂತೆ ಸುಳ್ಯ ವ್ಯಾಪ್ತಿಯಿಂದ ಹೋಗುವ ಎಲ್ಲಾ ಬಸ್ಸು ಚಾಲಕ, ನಿರ್ವಾಹಕರಿಗೆ ಸೂಚಿಸಿದ್ದೇನೆ ಎಂದು ಡಿಪೋ ವ್ಯವಸ್ಥಾಪಕರು ಹೇಳಿದರು.
ಎಲಿಮಲೆ ಪೇಟೆಯಲ್ಲಿ ಶಾಲೆಗಳ ವಿದ್ಯಾರ್ಥಿಗಳು ರಸ್ತೆ ದಾಟುವುದು, ರಸ್ತೆ ಬದಿ ನಿಂತಿರುತ್ತಾರೆ. ಈ ಸಂದರ್ಭದಲ್ಲಿ ವಾಹನ ಸವಾರರು ವೇಗವಾಗಿ ಚಲಾಯಿಸುತ್ತಾರೆ. ಈಗಾಗಲೇ ಅಪಘಾತಗಳು ಸಂಭವಿಸಿದೆ. ಇಲ್ಲಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು ಎಂದು ಎಲಿಮಲೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಹೇಳಿದರು.
ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಜಲ ಸಂರಕ್ಷಣೆ ಮಾಹಿತಿಗಳನ್ನು ಶಾಲೆಗಳಲ್ಲಿ ನೀಡಬೇಕು. ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ಡೆಂಗ್ಯೂ ಜ್ವರದ ಬಗ್ಗೆ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ಮಾಹಿತಿ ನೀಡಬೇಕು ಎಂದು ಶಿಕ್ಷಣಾಧಿಕಾರಿ ಹೇಳಿದರು. ಎಲ್ಲಾ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ರೂಪಿಸಬೇಕು ಎಂದು ಎಸ್‍ಡಿಎಂಸಿ ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ ಹೇಳಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಾಲೂಕು ಶಿಕ್ಷಣಾಧಿಕಾರಿ ಮಹಾದೇವ, ತಾ.ಪಂ ಸದಸ್ಯೆ ಜಾಹ್ನವಿ ಕಾಂಚೋಡು, ಸುಳ್ಯ ಎಸ್.ಐ ಹರೀಶ್ ಕುಮಾರ್, ಬೆಳ್ಳಾರೆ ಠಾಣಾ ಎಸ್.ಐ ಈರಯ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಶಾಲೆಯ ಎಸ್.ಡಿಎಂ.ಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಯರು, ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಹಿತಿ ಇಲ್ಲದೆ ರಹಸ್ಯ ಸಭೆ:
ಶಾಲಾ ಮಕ್ಕಳ ಸುರಕ್ಷತೆಯ ಕುರಿತು ನಡೆದ ಮಹತ್ವದ ಸಭೆಯಾಗಿದ್ದರೂ ಈ ಬಗ್ಗೆ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ತಾಲೂಕು ಪಂಚಾಯತ್ ನಲ್ಲಿ ಸಭೆ ನಡೆದಿದ್ದರೂ ಎರಡೂ ಇಲಾಖೆಗಳೂ ಯಾವುದೇ ಮಾಹಿತಿ ನೀಡದೆ ಸಭೆ ಏರ್ಪಡಿಸಲಾಗಿತ್ತು. ತಾಲೂಕು ಪಂಚಾಯತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳಿಗೂ ಸಭೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ. ತಾಲೂಕು ಪಂಚಾಯತ್ ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ ಹಲವು ಸಭೆ, ಸಮಾರಂಭಗಳಿಗೆ ಈ ಹಿಂದೆಯೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳಿವೆ. ರಹಸ್ಯ ಸಭೆಗೆ ಒತ್ತು ನೀಡುವ ತಾಲೂಕು ಪಂಚಾಯತ್ ನಡವಳಿಕೆಗೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹಿರಂಗವಾಗಿ ಎಲ್ಲಾ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಇಯಬೇಕಾದ ಮಾಹಿತಿ, ಸಭೆಯನ್ನು ಗುಟ್ಟಾಗಿ ನಡೆಸುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
Advertisement