ಸುಳ್ಯ: ಇಂದು ಜೂನ್.1 . ಹಿಂದಿನ ಮಾತುಗಳು, ಅನುಭವ ನೋಡಿದರೆ ಜೂನ್.1 ಕ್ಕೆ ಮಳೆಗಾಲ ಆರಂಭ. ಶಾಲೆ ಶುರುವಾಗುವುದು ಮಳೆ ಬರುವುದು ಎರಡೂ ಒಂದೇ ದಿನ. ಆದರೆ ಈಗ ಕಾಲ ಬದಲಾಗಿದೆ. ಜೂನ್.1 ಕ್ಕೆ ಮಳೆಗಾಲ ಶುರುವಾಗುವ ದಿನವಿಲ್ಲ. ಕಾರಣ ಹವಾಮಾನದ ಏರಿಳಿತ. ಹಾಗಿದ್ದರೆ ಈ ಬಾರಿಯ ಮಳೆಗಾಲ ಹೇಗಿರುತ್ತದೆ ?
ಕಳೆದ ವರ್ಷ ಮೇ.29 ರಂದು ಮಳೆಗಾಲ ಅಂದರೆ ಮಾನ್ಸೂನ್ ಬ್ರೇಕ್ ಆಗಿ ಹನಿ ಮಳೆ ನಮ್ಮಲ್ಲೂ ಶುರುವಾಗಿತ್ತು. ಕಳೆದ ವರ್ಷ ಮೇ.29 ರಂದು ಅತ್ಯಧಿಕ ಮಳೆ ಬಂದಿತ್ತು. ಬಾಳಿಲದಲ್ಲಿ 109 ಮಿಮೀ ಮಳೆ ದಾಖಲಾಗಿತ್ತು ಎಂದು ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಹೇಳುತ್ತಾರೆ. ಆದರೆ ಈ ಬಾರಿ ಅಂಡಮಾನ್ ಮತ್ತು ನಿಕೋಬಾರ್ ನಿಂದ ಈ ಕಡೆಗೆ ನಿಧಾನವಾಗಿ ಪಸರಿಸುತ್ತಿದೆ. ಅದಿನ್ನು ಕೇರಳ ಪ್ರವೇಶಿಸಿ ಆ ಬಳಿಕ ನಮಗೆ ಮಳೆ ಬರುವಾಗ ಕನಿಷ್ಠ 4 ರಿಂದ 5 ದಿನ ಬೇಕಾಗಬಹುದು. ಈಗಿನ ಪ್ರಕಾರ ಜೂನ್ 4 ನೇ ತಾರೀಕಿಗೆ ಮುಂಗಾರು ಕೇರಳ ಪ್ರವೇಶಿಸಲಿದೆ. ಜೂನ್ 7 ರ ನಂತರ ಕರಾವಳಿಗೆ ಬರಬಹುದು ಎಂಬ ನಿರೀಕ್ಷೆ ಇದೆ. ನಂತರ ರಾಜ್ಯಕ್ಕೆ ಮಳೆಗಾಲ.
ಆದರೆ ಇತ್ತೀಚೆಗಿನ ಹವಾಮಾನದ ಯಾವ ವರದಿಗಳೂ ಶೇ.100 ರಷ್ಟು ಸರಿಯಾಗುತ್ತಿಲ್ಲ. ಉಪಗ್ರಹಗಳ ಚಿತ್ರವನ್ನು ಗಮನಿಸುತ್ತಿದ್ದರೆ ಗಂಟೆಗೊಮ್ಮೆ ಬದಲಾಗುತ್ತಿರುತ್ತದೆ. ಮೋಡ ಕವಿದ ವಾತಾವರಣ ಇರುವುದು ಗಾಳಿಯ ಕಾರಣಕ್ಕೆ ದೂರಕ್ಕೆ ಸಾಗುತ್ತದೆ. ಎಲ್ಲೋ ಬರಬೇಕಾದ ಮಳೆ ಇನ್ನೆಲ್ಲೋ ಬೀಳುತ್ತದೆ.
ಇದು ಈ ಬಾರಿಯ ಮಳೆಗಾಲದಲ್ಲೂ ಕಾಡಲಿದೆ. ವಿವಿಧ ವೆದರ್ ರಿಪೋರ್ಟ್ ನೀಡುವ ಏಜೆನ್ಸಿಗಳು ಇದನ್ನೇ ಹೇಳುತ್ತವೆ. ಈ ಬಾರಿಯ ಮಳೆಗಾಲದಲ್ಲಿ ಸಾಕಷ್ಟು ಏರಿಳಿತ ಕಾಣಲಿದೆ. ಜೂನ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆ ಬರುವುದಿಲ್ಲ ಎಂದಿದೆ. ಇದಕ್ಕೆ ಕಾರಣ ಪ್ರಾಕೃತಿಕ ಏರುಪೇರು. ಆದರೆ ಸರಕಾರದ ಹವಾಮಾನ ಇಲಾಖೆ ಜೂ.5 ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಹೇಳಿದೆ. ಹಾಗೊಂದು ವೇಳೆ ಮಳೆ ಸುರಿದರೂ ಅಲ್ಲಲ್ಲಿ ತುಂತುರು ಮಳೆಯಷ್ಟೇ ಇರಬಹುದು ಎಂದು ಇನ್ನೊಂದು ಏಜೆನ್ಸಿ ಹೇಳುತ್ತದೆ. ಕಳೆದ ವರ್ಷ ಮಂಗಳೂರಿನಲ್ಲಿ ಮೇ. 29 ಕ್ಕೇ ಭಾರೀ ಮಳೆ ಇದ್ದರೂ ಎಲ್ಲಾ ಕಡೆ ಈ ಮಳೆ ಇದ್ದಿರಲಿಲ್ಲ. ಜೂನ್.6 ರ ನಂತರವೇ ಆರಂಭವಾದ್ದು ಮಳೆಗಾಲ.
ಇನ್ನೊಂದು ಏಜೆನ್ಸಿಯ ಪ್ರಕಾರ ಜೂ.9 ರನಂತರವೇ ಮಳೆಗಾಲ ಆರಂಭವಾಗುತತದೆ. ಅಲ್ಲಿಯವರೆಗೆ ಗುಡುಗು ಸಹಿತ ತುಂತುರು ಮಳೆ ಇರುತ್ತದೆ ಎಂದು ಹೇಳಿದೆ. ಏಕೆಂದರೆ ವಾತಾವರಣದ ಉಷ್ಣತೆ ಕಡಿಮೆ ಇದೆ. ಒಂದೆರಡು ಮಳೆ ಬಂದು ತಂಪಾಗಿದೆ ಜೂ.9 ರ ನಂತರವೇ ಮಳೆ ಅರಂಭವಾಗುತ್ತದೆ ಎಂದು ಹೇಳಿದೆ.
ಇನ್ನೊಂದು ಮಳೆ ಮಾಹಿತಿ ನೀಡುವ ಸಂಸ್ಥೆ ಹೇಳುತ್ತದೆ, ಈ ಬಾರಿಯ ಜೂನ್ ನಲ್ಲಿ ಸಾಕಷ್ಟು ಮಳೆಯಾಗುವುದಿಲ್ಲ, ಇದರ ಬದಲಾಗಿ ಜುಲೈ ಅಥವಾ ಆಗಸ್ಟ್ ನಲ್ಲಿ ಸಾಕಷ್ಟು ಮಳೆಯಾಗಬಹುದು ಎಂದು ಹೇಳಿದೆ.
ಮಳೆ ಬಗ್ಗೆ ಆಗಾಗ ಮಾಹಿತಿ ನೀಡುವ ಕರಿಕಳದ ಸಾಯಿಶೇಖರ್ ಪ್ರಕಾರ ಈಗಿನ ಜೂನ್ 4ನೇ ತಾರೀಕಿಗೆ ಮುಂಗಾರು ಕೇರಳ ಪ್ರವೇಶಿಸಲಿದೆ. 6ಕ್ಕೆ ಮಂಗಳೂರು ಮೂಲಕ ರಾಜ್ಯ ಪ್ರವೇಶಿಸಲಿದೆ ಎನ್ನುತ್ತಾರೆ.
ಸುಳ್ಯ ತಾಲೂಕಿನ ಗುತ್ತಿಗಾರಿನ ಹಾಲೆಮಜಲಿನಲ್ಲಿ ಈ ವರ್ಷ ಸುರಿದ ಬೇಸಿಗೆ ಕಾಲದ ಮಳೆ 237 ಮಿಮೀ ಅಂದರೆ ಜನವರಿ 1 ರಿಂದ ಮೇ.31 ರೆವರೆಗೆ. ಅದೇ ಕಳೆದ ವರ್ಷ 1009 ಮಿಮೀ ಮಳೆಯಾಗಿತ್ತು ಎಂದು ಮಳೆ ದಾಖಲು ಮಾಡುವ ಉಣ್ಣಿಕೃಷ್ಣ ಹೇಳುತ್ತಾರೆ.
ಅಂತೂ ಜೂ.6 ನಂತರ ನಂತರ ಮಳೆಗಾಲಕ್ಕೆ ಸಿದ್ದವಾಗುತ್ತಾ ಜುಲೈ, ಆಗಸ್ಟ್ ತಿಂಗಳಲ್ಲಿ ವಿಪರೀತ ಮಳೆಯ ಮುನ್ಸೂಚನೆ ಇರಿಸಿಕೊಂಡು ಕೃಷಿ ಕಾರ್ಯಗಳಿಗೆ , ಮಳೆಹಾನಿಗಳ ಮುಂಜಾಗ್ರತಾ ಕ್ರಮಗಳಿಗೆ ತೊಡಗುವುದು ಉತ್ತಮವಾಗಿದೆ.