ಮುಕ್ಕೂರು: ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಇತ್ತೀಚೆಗೆ ಅಗಲಿದ ಮುಕ್ಕೂರು- ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಪುರುಷೋತ್ತಮ ಗೌಡ ಅಡ್ಯತಕಂಡ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಿತು.
ನುಡಿನಮನ ಸಲ್ಲಿಸಿದ ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಪ್ರಗತಿಪರ ಕೃಷಿಕನಾಗಿ ಹಂತ-ಹಂತವಾಗಿ ಜೀವನದಲ್ಲಿ ಯಶಸ್ಸು ಕಂಡಿದ್ದ
ಪುರುಷೋತ್ತಮ ಗೌಡ ಅವರು ಹಲವು ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಶಾರದೋತ್ಸವ ಸಮಿತಿ ಹುಟ್ಟು ಹಾಕಿದಲ್ಲದೆ ನಿರಂತರ ಕಾರ್ಯಚಟುವಟಿಕೆ ಮೂಲಕ ಸಮಿತಿಯ ಯಶಸ್ಸಿಗೆ ಶ್ರಮಿಸಿದ್ದರು. ಅವರ ಅಗಲಿಕೆ ಊರಿಗೆ ತುಂಬಲಾರದ ನಷ್ಟ ಎಂದರು.
ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಕಾನಾವು, ಅನಿರೀಕ್ಷಿತವಾಗಿ ಅಗಲಿದ ಪುರುಷೋತ್ತಮ ಗೌಡ ಅವರ ಅಗಲಿಕೆ ನಮಗೆಲ್ಲರಿಗೂ ದುಃಖ ತಂದಿದೆ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಬಾಳಿ ಬದುಕಬೇಕಿದ್ದ ವಯಸ್ಸಿನಲ್ಲಿ ಪುರುಷೋತ್ತಮ ಅವರನ್ನು ವಿಧಿ ತನ್ನತ್ತ ಸೆಳೆದುಕೊಂಡಿದೆ. ಅವರ ಸಾಮಾಜಿಕ ಕಾರ್ಯವನ್ನು ಮುನ್ನಡೆಸುವ ಮೂಲಕ ಅವರ ನೆನೆಪು ಶಾಶ್ವತವನ್ನಾಗಿಸುವ ಪ್ರಯತ್ನ ನಾವು ಮಾಡೋಣ ಎಂದರು.
ಗ್ರಾ.ಪಂ.ಸದಸ್ಯ ಉಮೇಶ್ ಕೆ.ಎಂ.ಬಿ ಮಾತನಾಡಿ, ಎಲ್ಲ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಎಲ್ಲರೊಂದಿಗೆ ಒಡನಾಡಿಯಾಗಿ ಬೆರೆತವರು ಎಂದು ಅವರನ್ನು ಸ್ಮರಿಸಿದರು.
ಶಾರದೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಗೌಡ ಬೈಲಂಗಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಕಾನಾವು, ಎಸ್ .ಡಿ.ಎಂ.ಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ, ಚೆನ್ನಾವರ ಅಭ್ಯುದಯ ಯುವಕ ಮಂಡಲ ಅಧ್ಯಕ್ಷ ದೀಕ್ಷಿತ್ ಜೈನ್, ಜ್ಯೋತಿ ಯುವಕ ಮಂಡಲ ಕಾರ್ಯದರ್ಶಿ ಸತ್ಯಪ್ರಸಾದ್ ಕಂಡಿಪ್ಪಾಡಿ, ಸುಬ್ರಾಯ ಭಟ್ ನೀರ್ಕಜೆ, ಕುಶಾಲಪ್ಪ ಗೌಡ ಪೆರುವಾಜೆ, ತಿರುಮಲೇಶ್ವರ ಭಟ್ ಕಾನಾವು ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಶಾರದೋತ್ಸವ ಸಮಿತಿ ಕಾರ್ಯದರ್ಶಿ ಕಿರಣ್ ಚಾಮುಂಡಿಮೂಲೆ ಸ್ವಾಗತಿಸಿ, ಕುಂಡಡ್ಕ-ಮುಕ್ಕೂರು
ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಎನ್.ಕೆ.ವಂದಿಸಿದರು. ಜ್ಯೋತಿ ಯುವಕ ಮಂಡಲ ಕಾರ್ಯದರ್ಶಿ ನಾರಾಯಣ ಕೊಂಡೆಪ್ಪಾಡಿ ನಿರೂಪಿಸಿದರು. ದಿವಾಕರ ಬೀರುಸಾಗು, ರೂಪಾನಂದ ಸಹಕರಿಸಿದರು.