# ಸ್ಪೆಶಲ್ ಕರೆಸ್ಪಾಂಡೆಂಡ್ , ಸುಳ್ಯನ್ಯೂಸ್.ಕಾಂ
ಸುಳ್ಯ: ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್‍ನ ಚುನಾವಣೆಯಲ್ಲಿ ಸುಳ್ಯ ತಾಲೂಕಿನ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಪ್ರತಿನಿಧಿಗಳಾಗಿ ಮತದಾನ ಮಾಡಿದ್ದ 17 ಮಂದಿಯೂ ರಾಜೀನಾಮೆ ನೀಡಲು ಬಿಜೆಪಿ, ಸಹಕಾರ ಭಾರತಿ ಹಾಗೂ ಸಂಘಪರಿವಾರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಈ ಮೂಲಕ ಅಡ್ಡಮತದಾನದ ಕಗ್ಗಂಟು ಬಿಡಿಸಲು ಈಗ ಪ್ರಯತ್ನ ಶುರುವಾಗಿದೆ.
ಎಸ್‍ಸಿಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಅಭ್ಯರ್ಥಿಯಾಗಿ ವೆಂಕಟ್ ದಂಬೆಕೋಡಿ ಮತ್ತು ಎಂ.ಎನ್.ರಾಜೇಂದ್ರಕುಮಾರ್ ನೇತೃತ್ವದ ಸಹಕಾರ ಬಳಗದ ಅಭ್ಯರ್ಥಿಯಾಗಿ ಕೆ.ಎಸ್.ದೇವರಾಜ್ ಸ್ಪರ್ಧಿಸಿದ್ದರು. ಸುಳ್ಯ ತಾಲೂಕಿನ 23 ಸಹಕಾರ ಸಂಘಗಳ ಪ್ರತಿನಿಧಿಗಳು ಮತದಾರರಾಗಿದ್ದರು. ಇದರಲ್ಲಿ 17 ಸಂಘಗಳು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕೈಯಲ್ಲಿ ಮತ್ತು ಆರು ಸಂಘಗಳು ಕಾಂಗ್ರೆಸ್ ಕೈಯಲ್ಲಿತ್ತು. ಆದುದರಿಂದ ಚುನಾವಣೆಯಲ್ಲಿ ವೆಂಕಟ್ ದಂಬೆಕೋಡಿ ಗೆಲುವು ನಿಶ್ಚಿತ ಎಂದು ಹೇಳಲಾಗಿತ್ತು. ಆದರೆ ಚುನಾವಣಾ ಫಲಿತಾಂಶ ಬಂದಾಗ 13 ಮತ ಪಡೆದ ಕೆ.ಎಸ್.ದೇವರಾಜ್ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾದರು. 7 ಮಂದಿ ಬಿಜೆಪಿ ಬೆಂಬಲಿತರು ಅಡ್ಡಮತದಾನ ಮಾಡಿದ ಕಾರಣ ಕೇವಲ 10 ಮತ ಪಡೆದ ಸಹಕಾರ ಭಾರತಿ ಅಭ್ಯರ್ಥಿಗೆ ಸೋಲಾಯಿತು.ಇದು ಸುಳ್ಯದ ಬಿಜೆಪಿ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್‍ನ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಈಗ ಮತ್ತಷ್ಟು ಸುದ್ದಿಯಾಗುತ್ತಿದೆ. ಕಳೆದ ವಾರವಷ್ಟೇ ಕಾನತ್ತೂರು ನಾಲ್ವರ್ ದೈವಸ್ಥಾನದ ಸನ್ನಿಧಿಯಲ್ಲಿ ಪ್ರಮಾಣದ ಬಳಿಕವೂ ಅಡ್ಡ ಮತದಾನದ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾರಣ ಇದೀಗ ಮತದಾನ ಮಾಡಿದ 17 ಮಂದಿಯೂ ರಾಜೀನಾಮೆ ನೀಡಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಈಗಾಗಲೇ ಎಲ್ಲಾ ಸಹಕಾರಿ ಸಂಘದಿಂದ ಪ್ರತಿನಿಧಿಯಾಗಿ ತೆರಳಿದ ಮಂದಿಗೆ ಸೂಚನೆ ನೀಡಲಾಗಿದೆ ಎಂದು ಖಚಿತ ಮೂಲಗಳು ತಿಳಿಸಿವೆ. ಅಡ್ಡಮತದಾನ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು. ಲೋಕಸಭಾ ಚುನಾವಣೆ ಮುಗಿದ ಮರುದಿನ ಅಡ್ಡಮತದಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ನಾಯಕರು ಹೇಳಿದ್ದರು. ಚುನಾವಣೆ ಮುಗಿದ ಬಳಿಕ ಬಿಜೆಪಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದರೂ ಪರಿಹಾರ ಸಿಗಲಿಲ್ಲ. ಇದೀಗ ಅಡ್ಡಮತದಾನದ ಕಗ್ಗಂಟು ಬಿಡಿಸುವ ಪ್ರಯತ್ನ ನಡೆದಿದೆ.
ಸುಳ್ಯ ತಾಲೂಕಿನ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಪ್ರತಿನಿಧಿಗಳಾಗಿ ಮತದಾನ ಮಾಡಿದ್ದ 17 ಜನರ ಪೈಕಿ 15 ಮಂದಿ ಕಾನತ್ತೂರು ನಾಲ್ವರ್ ದೈವಸ್ಥಾನದ ಸನ್ನಿಧಿಯಲ್ಲಿ ಪಕ್ಷದ ಹಾಗೂ ಸಂಘಟನೆ ಸೂಚಿಸಿದ ಅಭ್ಯರ್ಥಿಗೇ ಮತ ನೀಡಿದ್ದೇವೆ ಎಂದ ಬಳಿಕವೂ ಇದೀಗ ರಾಜೀನಾಮೆ ಏಕೆ ಎಂಬುದು ಚರ್ಚೆಯಾಗುತ್ತಿದ್ದು , ಇನ್ನು ರಾಜೀನಾಮೆಯೂ ಬಿಜೆಪಿಗೆ ಸಮಸ್ಯೆಯ ವಿಷಯವಾಗುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ ಈ ಚುನಾವಣೆ ನಿರ್ವಹಣೆ ಮಾಡಿದವರು ಹಾಗೂ ಈ ಬಗ್ಗೆ ಬಿಜೆಪಿ ಹಾಗೂ ಸಹಕಾರ ಭಾರತಿಯಿಂದ ಮುಂದಾಳುತ್ವ ವಹಿಸಿದವರೂ ರಾಜೀನಾಮೆ ನೀಡಬೇಕು ಎಂಬುದು ಇನ್ನೊಂದು ಚರ್ಚೆ.
ಈಗಾಗಲೇ ಸಹಕಾರ ಭಾರತಿಯ ಅಭ್ಯರ್ಥಿಯಾಗಿದ್ದ ವೆಂಕಟ್ ದಂಬೆಕೋಡಿ ಅವರು ನಿರ್ದೇಶಕರಾಗಿರುವ ಗುತ್ತಿಗಾರು ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಕೆ ಎಂ ಎಫ್ ಚುನಾವಣೆಯಲ್ಲಿ ಎಂ.ಎನ್.ರಾಜೇಂದ್ರಕುಮಾರ್ ನೇತೃತ್ವದ ಸಹಕಾರ ಬಳಗ ಹಾಗೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ನಡುವೆ ಮಾತುಕತೆ ನಡೆಯುತ್ತಿದೆ, ಅವಿರೋಧ ಆಯ್ಕೆಗೆ ಪ್ರಯತ್ನ ನಡೆಯುತ್ತಿದೆ ಎಂಬುದೂ ಈಗ ಚರ್ಚೆಯ ವಿಷಯವಾಗಿದೆ.
30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…