ಸುಳ್ಯ: ಕಳೆದ ಕೆಲವು ಸಮಯಗಳಿಂದ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಬಗ್ಗೆ ಚರ್ಚೆಯಾಗುತ್ತಿದೆ. ಗುಣಮಟ್ಟದ ವಿದ್ಯುತ್ ಬೇಕು ಎಂದು ಒಂದು ಕಡೆಯಾದರೆ ನಿರಂತರ ವಿದ್ಯುತ್ ಬೇಕು ಎಂದು ಮತ್ತೊಂದು ಕಡೆ ಚರ್ಚೆ. ಅದರ ಜೊತೆಗೆ ಸುಳ್ಯಕ್ಕೆ 110 ಕೆವಿ ವಿದ್ಯುತ್ ಲೈನ್ ಬರಬೇಕು ಎಂಬ ಇನ್ನೊಂದು ಕಡೆ ಬೇಡಿಕೆ. ಆದರೆ ಸುಳ್ಯದ ಮೆಸ್ಕಾಂ ಜನರ ಈ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಇದಕ್ಕೆ ಕಾರಣ ಇದೆ, ಸುಳ್ಯ – ಗುತ್ತಿಗಾರು ವಿದ್ಯುತ್ ಲೈನ್ ಮಧ್ಯೆ ಆಗಾಗ ಟ್ರಿಪ್ ಆಗುವ ಬಗ್ಗೆ ದೂರುಗಳು ಬರುತ್ತವೆ. ಸಣ್ಣ ಮಳೆ , ಗಾಳಿ ಬಂದರೂ ಟ್ರಿಪ್ ಆಗುವ ಬಗ್ಗೆ ಮೆಸ್ಕಾಂಗೆ ಕರೆ ಮಾಡಿದಾಗ ಮಾಹಿತಿ ಸಿಗುತ್ತದೆ. ಇದು ಏಕೆ ಎಂದು ಸುಳ್ಯನ್ಯೂಸ್.ಕಾಂ ಪರಿಶೀಲನೆ ಮಾಡಿತು. ಖುದ್ದು ಮೆಸ್ಕಾಂ ಸಿಬಂದಿಯೋರ್ವರಲ್ಲಿ ಮಾತುಕತೆ ನಡೆಸಿತು. ಈ ಸಂದರ್ಭ ಬೆಳಕಿಗೆ ಬಂದ ವಿಷಯ ಕಳೆದ 6 ವರ್ಷಗಳಿಂದ ಉಬರಡ್ಕದಲ್ಲಿ ವಿದ್ಯುತ್ ತಂತಿಗೆ ಬಿದಿರು ತಾಗುತ್ತಿದೆ, ಅದರ ಜೊತೆಗೆ ತುಂಡಾದ ಕಂಬದಲ್ಲಿ ತಂತಿ ನೇತಾಡುತ್ತಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಸ್ಥಳಕ್ಕೆ ಹೋಗಿ ನೋಡಿದಾಗ ವಾಸ್ತವಾಂಶ ತಿಳಿದಿದೆ.
ಸುಳ್ಯ ಹಾಗೂ ಗುತ್ತಿಗಾರು ನಡುವಿನ ಈ 33 ಕೆವಿ ತಂತಿ ಅತ್ಯಂತ ಪ್ರಮುಖವಾದ್ದು. ಗುತ್ತಿಗಾರು, ಸುಬ್ರಹ್ಮಣ್ಯ ಕಡೆಗೆ ವಿದ್ಯುತ್ ಸಂಪರ್ಕ ನೀಡಲು ಹಾಗೂ ಗುಣಮಟ್ಟದ ವಿದ್ಯುತ್ ನೀಡಲು ಈ ತಂತಿ ಅಗತ್ಯ. ಆದರೆ ತುಂಡಾದ ಕಂಬಲ್ಲಿ ಬಿದಿರು ತಾಗುವ ಸ್ಥಿತಿಯಲ್ಲಿರುವ ಈ ತಂತಿ ಹಾಗೂ ಕಂಬ ಬದಲಾಯಿಸಲು ಇಲಾಖೆ ಮುಂದಾಗಿಲ್ಲ ಎಂದರೆ ಇಲಾಖೆಗೆ ಇರುವ ಕಾಳಜಿ ತಿಳಿಯುತ್ತದೆ. ಅದೂ ಅಲ್ಲದೆ ಸ್ಥಳಿಯರು ಕಳೆದ 6 ವರ್ಷಗಳಿಂದ ಲಿಖಿತ ಮನವಿ ಮಾಡಿದ್ದಾರೆ, ಮತ್ತೆ ಮತ್ತೆ ಮನವಿ ಮಾಡಿದ್ದಾರೆ ಶಾಸಕರ ಮೂಲಕವೂ ಹೇಳಿದ್ದಾರೆ. ಹೀಗಾದರೂ ಕಂಬ ಬದಲಾಗಲಿಲ್ಲ. ಇದೇ ತಂತಿಯಲ್ಲಿ ವಿದ್ಯುತ್ ಬರುತ್ತಿದೆ. ಶಾಸಕರ , ಜನಪ್ರತಿನಿಧಿಗಳ ಸಲಹೆ, ಸೂಚನೆಯನ್ನೂ ಸುಳ್ಯದಲ್ಲಿ ಇಲಾಖೆ ಕೇಳುವುದಿಲ್ಲವೇ ?.
ಮಳೆಗಾಲ ಸಣ್ಣ ಮಳೆಗೇ ಟ್ರಿಪ್ ಆಗುತ್ತದೆ. ಗುತ್ತಿಗಾರು ಕಡೆಗೆ ವಿದ್ಯುತ್ ಸರಬರಾಜು ನಿಲ್ಲುತ್ತದೆ. ಇದು ಇಲಾಖೆಗೆ ಸಣ್ಣ ವಿಷಯ ಆದರೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈಕೊಟ್ಟರೆ ಮೊಬೈಲ್ ನಿಲ್ಲುತ್ತದೆ ಮನೆಗಳಲ್ಲಿ ದೀಪವಿಲ್ಲದೆ ಸಂಕಷ್ಟ ಎದುರಿಸಬೇಕಾಗುತ್ತದೆ. ನಗರದಲ್ಲಿರುವ ಅಧಿಕಾರಿಗಳಿಗೆ ಗ್ರಾಮೀಣ ಜನರ ಈ ಸಂಕಷ್ಟ ತಿಳಿಯುವುದು ಹೇಗೆ. ಹೀಗಾಗಿ ಇಲಾಖೆಗೆ ಜನರ ಮೇಲೆ , ಸೇವೆಯ ಮೇಲೆ ಎಷ್ಟು ಆಸಕ್ತಿ ಇದೆ ಎಂಬುದು ಇಲ್ಲಿ ತಿಳಿಯುತ್ತದೆ. ಇಲಾಖೆಗಳಿಗೆ ನಿಜವಾಗಿಯೂ ಸೇವಾ ಕಾಳಜಿ ಇದ್ದರೆ ಈ ಕಂಬವನ್ನು ಯಾವಾಗಲೋ ಬದಲಾಯಿಸಬೇಕಿತ್ತು.
ಈ ಕಾರಣದಿಂದಾಗಿಯೇ ಸುಳ್ಯನ್ಯೂಸ್.ಕಾಂ ಇಲಾಖೆಯ ಸ್ಪಷ್ಟೀಕರಣ ಬಯಸಿಲ್ಲ.ಇದಕ್ಕೆ ಕೆಲಸವೇ ಉತ್ತರವಾಗಿದೆ.