ಆಲಿಕಲ್ಲು ಮತ್ತು ಗುಡುಗು ಸಹಿತ ಅತ್ಯಂತ ಕಡಿಮೆ ಅವಧಿಯಲ್ಲಿ ಸುರಿಯುವ ತೀವ್ರ ಸ್ವರೂಪದ ಮಳೆಯನ್ನು “ಮೇಘಸ್ಫೋಟ” (Cloud Burst) ಅಂತ ಕರೆಯುತ್ತಾರೆ. ಇದರ ಆರ್ಭಟ ಕೆಲವೇ ನಿಮಿಷಗಳಾದರೂ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣ ವಾಗುತ್ತದೆ.
ಇದಕ್ಕೇನು ಕಾರಣ ?
ಆಕಾಶದಲ್ಲಿ ಹೆಚ್ಚಿನ ಮೋಡಗಳು ಸಂಕುಚಿತಗೊಳ್ಳುವುದರಿಂದ ಮೇಘ ಸ್ಫೋಟ ಸಂಭವಿಸುತ್ತದೆ. ಬಕೆಟ್ ನಿಂದ ರಭಸವಾಗಿ ನೀರನ್ನು ಸುರಿದಂತೆ ಮೇಘಸ್ಪೋಟದಿಂದ ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ಅಧಿಕ ಮಳೆಯಾಗುತ್ತದೆ. ಕೆಲವು ಸಲ 15 ಕಿ.ಮೀ.ಎತ್ತರದಿಂದ ಮಳೆ ಸುರಿಯುತ್ತದೆ. ಅದರ ಪ್ರಮಾಣ ಗಂಟೆಗೆ 100 ಮಿ.ಮೀ.ಗೂ (3.94 ಇಂಚು) ಅಧಿಕ. ಮೇಘಸ್ಪೋಟದಿಂದ ಕೆಲವೇ ನಿಮಿಷಗಳಲ್ಲಿ 20 ಮಿ.ಮೀ.ಗೂ ಅಧಿಕ ಮಳೆ ಸುರಿಯುತ್ತದೆ. ಅವಧಿ ಕಡಿಮೆಯಾದರೂ ಹಾನಿ ಅಪಾರ.
ಎಲ್ಲೆಲ್ಲಿ… ಯಾವಾಗ ?1906 ಆಗಸ್ಟ್ 24 ರಂದು ಅಮೇರಿಕಾದ ವರ್ಜೀನಿಯಾದಲ್ಲಿ 40 ನಿಮಿಷಗಳ ಮೇಘಸ್ಫೋಟ ಸಂಭವಿಸಿತ್ತು. ಆ ಪರಿಣಾಮ 234.95 ಮಿ.ಮೀ.ಮಳೆ ದಾಖಲಾಗಿತ್ತು. ರುಮೇನಿಯಾ, ಜಮೈಕಾ, ಪನಾಮಾ, ಹಾಗೂ ನಮ್ಮ ದೇಶದಲ್ಲೂ ಮೇಘಸ್ಫೋಟಗಳ ಅಬ್ಬರ ಇದ್ದೇ ಇದೆ. ಹಿಮಾಚಲ ಪ್ರದೇಶದ ಬರೋತ್ ನಲ್ಲಿ 1970 ರ ನವಂಬರ್ 26 ರಂದು ಒಂದು ನಿಮಿಷದಲ್ಲಿ ಅವಧಿಯಲ್ಲಿ 38.10 ಮಿ.ಮೀ.ಮಳೆ ಸುರಿದಿತ್ತು.! ಉತ್ತರಾಂಚಲದಲ್ಲಿ 2002 ರಲ್ಲಿ ಮೇಘಸ್ಫೋಟ 28 ಮಂದಿಯನ್ನು ಬಲಿ ಪಡೆದಿತ್ತು.
ಮೇಘಸ್ಫೋಟದಿಂದಾಗಿಯೇ 2005 ರ ಜುಲೈ 26 ರಂದು ಮುಂಬಯಿ ಅಕ್ಷರಷಹ ದ್ವೀಪವಾಗಿ ಪರಿವರ್ತಿತವಾಗಿತ್ತು. ವಾಣಿಜ್ಯ ನಗರಿ ಯಲ್ಲಿ ಅಂದು 8 ರಿಂದ ಹತ್ತು ಗಂಟೆಗಳಲ್ಲಿ ಸುರಿದ ಮಳೆ 950 ಮಿ.ಮೀ.! 500 ಕ್ಕೂ ಅಧಿಕ ಮಂದಿ ಪ್ರವಾಹಕ್ಕೆ ಬಲಿಯಾಗಿದ್ದರು.
1910 ಜುಲೈ 12 ರಂದು ಚಿರಾಪುಂಜಿಯಲ್ಲಿ ಒಂದು ದಿನದ ಅವಧಿಯಲ್ಲಿ ದಾಖಲಾದ 83.82 ಮಿ.ಮೀ.ಮಳೆ ಆವರೆಗಿನ ದಾಖಲೆಯಾಗಿತ್ತು. ಮುಂಗಾರಿನ ಮಳೆಯ ಸಮಯದಲ್ಲಿ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟಗಳು ಸಾಮಾನ್ಯ. ಪರ್ವತ ಪ್ರದೇಶಗಳಲ್ಲಿ ಮೇಘಸ್ಫೋಟದ ಪ್ರಮಾಣ ಹೆಚ್ಚು. ಬಹುಶಃ ಕಳೆದ ವರ್ಷದ ಕೊಡಗಿನ ಮಳೆ, ಈ ವರ್ಷ ಚಾರ್ಮಾಡಿ ಘಾಟ್ ಪ್ರದೇಶ, ನಿನ್ನೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಅಪಾರ ಪ್ರಮಾಣದ ಮಳೆ ಮೇಘಸ್ಪೋಟದ ಪರಿಣಾಮವೇ ಇರಬಹುದು. ದಟ್ಟ ಕಾನನದ ನಡುವೆ ಸುರಿಯುವ ಮಳೆ ನಮ್ಮ ಲೆಕ್ಕಕ್ಕೆ ಸಿಗದು
ಈ ಸಂದರ್ಭದಲ್ಲಿ ವರಕವಿ ದ.ರಾ.ಬೇಂದ್ರೆಯವರ ಕವನದ ಸಾಲುಗಳು ನೆನಪಿಗೆ ಬಂದವು…
ಗುಡ್ಡ ಗುಡ್ಡ ಸ್ಥಾವರ ಲಿಂಗ
ಅದಕಭ್ಯಂಗ ಎರಿತಾವನ್ನೋ ಹಂಗ
ಕೂಡ್ಯಾವ ಮೋಡ ಸುತ್ತಲೂ ನೋಡ ನೋಡ…
– ಪಿ ಜಿ ಎಸ್ ಎನ್ ಪ್ರಸಾದ್ , ಬಾಳಿಲ