ಸುಳ್ಯ: ಸುಳ್ಯದ ಶ್ರೀಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ ಒಂದು ತಿಂಗಳ ಕಾಲ ನಡೆದ ವೇದ ಯೋಗ ಮತ್ತು ಕಲಾ ಶಿಬಿರದ ಸಮಾರೋಪ ಸಮಾರಂಭ ಮತ್ತು ಕೇಶವ ಸ್ಮøತಿ ಪ್ರಶಸ್ತಿ ಪ್ರದಾನ ಮೇ.21ರಂದು ಅಹರಾಹ್ನ ಮೂರಕ್ಕೆ ನಡೆಯಲಿದೆ.
ಪ್ರತಿಷ್ಠಾನದ ವತಿಯಿಂದ ವೇದ, ಯೋಗ ಮತ್ತು ಕಲಾ ಕ್ಷೇತ್ರದಿಂದ ಮೂವರು ಸಾಧಕರಿಗೆ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದ್ದು ಈ ಬಾರಿ ವೈದಿಕ ಕ್ಷೇತ್ರದಿಂದ ಪುರುಷೋತ್ತಮ ಭಟ್ ದೇರ್ಕಜೆ, ಯೋಗ ಕ್ಷೇತ್ರದಿಂದ ಪ್ರಕಾಶ್ ಮೂಡಿತ್ತಾಯ, ಕಲಾ ಕ್ಷೇತ್ರದಿಂದ ಸ್ಯಾಕ್ಸೋಫೋನ್ ವಾದಕ ಬಾಲಚಂದ್ರ ಪೆರಾಜೆ ಇವರಿಗೆ ಪ್ರಶಸ್ತಿ ನೀಡಲಾಗುವುದು.
ಕೇಶವಸ್ಮೃತಿ ಸಾಧಕರ ಪರಿಚಯ:
ಪುರುಷೋತ್ತಮ ಭಟ್ ದೇರ್ಕಜೆ:
ಮಂಡೆಕೋಲು ಗ್ರಾಮದ ಮಾವಂಜಿ ವಿಠಲ ಭಟ್ಟ ಮತ್ತು ಮೀನಾಕ್ಷಿ ದಂಪತಿಗಳ ಪುತ್ರನಾಗಿ ಜನಿಸಿದ ಪುರುಷೋತ್ತಮ ಭಟ್ ಇವರು ಇಂಟರ್ ಮೀಡಿಯೆಟ್ ಮತ್ತು ಬಿ.ಎ ಪದವೀಧರರಾಗಿದ್ದು ವೈದಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದಿರುತ್ತಾರೆ. 23 ವರ್ಷಗಳಿಂದ ಸಾರಸ್ವತ ಸೌರಭ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ಪ್ರಕಾಶ್ ಮೂಡಿತ್ತಾಯ:
ಕಾಸರಗೋಡಿನ ಕಯ್ಯಾರು ಗ್ರಾಮದ ಪಾಂಡ್ಯಡ್ಕ ಎಂಬಲ್ಲಿ ಸುಬ್ರಮಣ್ಯ ಮೂಡಿತ್ತಾಯ ಮತ್ತು ಲಕ್ಷ್ಮೀ ದಂಪತಿಗಳ ಪುತ್ರರಾಗಿ ಜನಿಸಿದ ಇವರು ಸ್ನಾತಕೋತ್ತರ ಪದವೀಧರರಾಗಿದ್ದು ಬಿ.ಎಡ್ ನಲ್ಲಿ ಸ್ವರ್ಣ ಪದಕ ಪಡೆದಿರುತ್ತಾರೆ. ಬ್ರಹ್ಮಾವರ, ಮೂಲ್ಕಿ, ಮೈಸೂರು, ಎಲಿಮಲೆ, ಸುಳ್ಯ, ಪಾಪೆಮಜಲು ಮುಂತಾದ ಕಡೆ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ. ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ಗಣಿತ, ವಿಜ್ಞಾನ ಮತ್ತು ಯೋಗ ವಿಷಯಗಳ ರಾಜ್ಯ ಸಂಪನ್ಮೂಲ ವ್ಯಕ್ತಿ, ಕರ್ನಾಟಕ ಪಠ್ಯಪುಸ್ತಕ ಸಂಘದ ಗಣಿತ, ವಿಜ್ಞಾನ, ಯೋಗ, ಯಕ್ಷಗಾನ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿದ್ದಾರೆ. ವಿವಿಧ ಕಡೆಗಳಲ್ಲಿ ಯೋಗ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವತಃ ಯಕ್ಷಗಾನ ಕಲಾವಿದರಾಗಿರುವ ಇವರು ಶಿಕ್ಷಕರ ಯಕ್ಷಗಾನ ಒಕ್ಕೂಟ ಸುಳ್ಯ ಇದರ ಸ್ಥಾಪಕಾಧ್ಯಕ್ಷ. ಧಾರ್ಮಿಕ ಉಪನ್ಯಾಸ, ಹರಟೆ ಇನ್ನಿತರ ಕ್ಷೇತ್ರದಲ್ಲೂ ಸಕ್ರೀಯರು.
ಶ್ರೀ ಬಾಲಚಂದ್ರ ಪೆರಾಜೆ:
ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ರಾಮಯ್ಯ ಮತ್ತು ಜಾನಕಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಎಳವೆಯಲ್ಲೇ ತಂದೆಯ ಮೂಲಕ ಸ್ಯಾಕ್ಸೋಫೋನ್ ಕಲಿಕೆ ಆರಂಭಿಸಿದ್ದು, ಆ ನಂತರ ಬೆಳ್ಳಾರೆಯ ಸತ್ಯಭಾಮಾ ಟೀಚರ್ ಬಳಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ ಸಿ ಜ್ಯೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಮೈಸೂರಿನ ಆರ್. ಪ್ರಭಾಕರ್ ಅವರಿಂದ ಸ್ಯಾಕ್ಸೋಫೋನ್ ವಿದ್ವತ್ ಪಾಠವನ್ನು ಪಡೆದ ಇವರು ಕಾಂಚನ ಈಶ್ವರ ಭಟ್ ಇವರ ಬಳಿಯೂ ಸಂಗೀತಾಭ್ಯಾಸ ಮಾಡಿರುತ್ತಾರೆ. ಕರ್ನಾಟಕ ಕೇರಳ ಮತ್ತು ತಮಿಳುನಾಡಿನ ಹಲವಾರು ದೇವಾಲಯಗಳ ಉತ್ಸವಗಳಲ್ಲಿ ಮತ್ತು ಶುಭ ಸಮಾರಂಭಗಳಲ್ಲಿ ಸ್ಯಾಕ್ಸೋಫೋನ್ ನುಡಿಸಿರುವ ಇವರು ಮೈಸೂರು ದಸರಾ ವೇದಿಕೆಯಲ್ಲೂ ಸ್ಯಾಕ್ಸೋಫೋನ್ ಕಛೇರಿ ನಡೆಸಿಕೊಟ್ಟಿರುತ್ತಾರೆ.
ಸಮಾರೋಪ:
ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜೀಯವರು ಆಶೀರ್ವಚನ ನೀಡಲಿದ್ದಾರೆ. ರಾಜಗೋಪಾಲ ಭಟ್ ಉಂಡೆಮನೆ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಪುತ್ತೂರಿನ ಸ್ವರ್ಣೋದ್ಯಮಿಗಳಾದ ಬಲರಾಮ ಆಚಾರ್ಯ ಇವರು ಸಾಧಕರನ್ನು ಸನ್ಮಾನಿಸುವರು. ಶಿಬಿರದ ಸಂಚಾಲಕ ಎಂ.ಎಸ್. ನಾಗರಾಜ ರಾವ್ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ