ಇದುವರೆಗೆ ಸಂಗೀತ , ಭರತನಾಟ್ಯದಲ್ಲಿ ಪರೀಕ್ಷೆಗಳು ಇದ್ದವು. ಇದೀಗ ಯಕ್ಷಗಾನಕ್ಕೂ ಪಠ್ಯ ಬಂದಿದೆ. ಯಕ್ಷಗಾನಕ್ಕೂ ಈಗ ಗೌರವ ಸಿಕ್ಕಿದೆ. ಪಠ್ಯದ ಮೂಲಕ ಕರಾವಳಿಯ ಗಂಡು ಮೆಟ್ಟಿನ ಕಲೆ ನಾಡಿನಾದ್ಯಂತ ಇನ್ನಷ್ಟು ಹೆಮ್ಮೆಯಿಂದ ಕಾಣಲಿದೆ. ಇದಕ್ಕಾಗಿ 10 ವರ್ಷಗಳ ಪರಿಶ್ರಮ ಫಲ ನೀಡಿದೆ. ಈ ಕಡೆಗೆ ಫೋಕಸ್……
ಸುಳ್ಯ: ಪ್ರಪ್ರಥಮ ಯಕ್ಷಗಾನ ಪಠ್ಯಪುಸ್ತಕ ಸಿದ್ಧಗೊಂಡಿದೆ. ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಪ್ರಥಮ ಅವಧಿಯ ಮಹತ್ವಾಕಾಂಕ್ಷಿ ಯಕ್ಷ ಶಿಕ್ಷಣ ಯೋಜನೆ ದಶಕದ ಬಳಿಕ ಸಾಕಾರವಾಗಿದೆ.
ಈ ಪಠ್ಯಪುಸ್ತಕದ ಆಧಾರದಲ್ಲಿ ಖಾಸಗಿಯಾಗಿ ಗುರು ಮುಖೇನ ಯಕ್ಷಗಾನ ಮುಮ್ಮೇಳ ಕಲಿಯಬಹುದು. ಇದೇ ವರ್ಷ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ಯಕ್ಷಗಾನ ಜೂನಿಯರ್ ಸರ್ಟಿಫಿಕೆಟ್ ಪರೀಕ್ಷೆ ಆರಂಭಿಸುತ್ತಿದೆ. ಜೂನಿಯರ್ ಪರೀಕ್ಷೆ ಬರೆಯಲು ಕನಿಷ್ಠ 2 ವರ್ಷ ಕಲಿಕೆ ನಿಗದಿಪಡಿಸಲಾಗಿದೆ. ಜೂನಿಯರ್ ಪರೀಕ್ಷೆ ಮುಗಿಸುವ ಹೊತ್ತಿಗೆ ಸೀನಿಯರ್ ಪಠ್ಯ ಮುದ್ರಣಗೊಳ್ಳುವ ಸಾಧ್ಯತೆ ಇದೆ. ಸೀನಿಯರ್ ಪರೀಕ್ಷೆ ಕಲಿಕೆಗೂ 2 ವರ್ಷ ನಿಗದಿಪಡಿಸಲಾಗಿದೆ. ನಂತರ ವಿದ್ವತ್ ಎರಡು ಹಂತದಲ್ಲಿ ನಡೆಯಲಿದೆ. ಇದಕ್ಕೆ ಪಠ್ಯವಸ್ತುವಿನಿಂದ ಹಿಡಿದು ಪುಸ್ತಕ ರಚನೆ ಹಾಗೂ ಇತರ ಕಾರ್ಯಗಳು ನಡೆಯಬೇಕಾಗಿದೆ.
ಜೂನಿಯರ್ ಹಂತದ ಪಠ್ಯ ಪುಸ್ತಕ ಮುದ್ರಣಗೊಂಡು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಲವು ಎಡರು ತೊಡರು, ಏರುತಗ್ಗುಗಳನ್ನು ದಾಟಿ, ಪುಸ್ತಕ ಬೆಳಕು ಕಂಡಿದೆ. ಬೆಂಗಳೂರು, ಮೈಸೂರು ಹಾಗೂ ದೂರದ ಧಾರವಾಡ, ಗುಲ್ಬರ್ಗಾದಲ್ಲೂ ಪುಸ್ತಕ ದೊರಕುತ್ತದೆ. ಕರಾವಳಿಯಲ್ಲೂ ಸದ್ಯ ದೊರಕುವ ವ್ಯವಸ್ಥೆ ಆಗಲಿದೆ. ಸುಮಾರು 178 ಪುಟಗಳ ಈ ಪುಸ್ತಕದ ಮೂಲಕ ಆಸಕ್ತ ವಿದ್ಯಾರ್ಥಿಗಳು ಎರಡು ವರ್ಷ ಅಧ್ಯಯನ ಮಾಡಿ ಪರೀಕ್ಷೆಗೆ ಬರೆಯಬಹುದು.ಜೂನಿಯರ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಎಸ್.ಎಸ್.ಎಲ್.ಸಿ. ಬೋರ್ಡ್ ಕೊಡ ಮಾಡುವ ಈ ಸರ್ಟಿಫಿಕೇಟ್ ಮುಂದೊಂದು ದಿನ ಭರತ ನಾಟ್ಯ, ಸಂಗೀತಕ್ಕೆ ನೀಡುವ ಸರ್ಟಿಫಿಕೇಟ್ ನಷ್ಟೇ ಪ್ರಾಮುಖ್ಯ ಪಡೆಯಲಿದೆ.
ಪಠ್ಯದ ಒಳಗೇನಿದೆ?
ಪ್ರಾಥಮಿಕ ಪಠ್ಯಪುಸ್ತಕದಲ್ಲಿ ತೆಂಕು – ಬಡಗುತಿಟ್ಟು ಯಕ್ಷಗಾನದ ಕಲಿಕಾ ವಿಷಯ ಒಳಗೊಂಡಿದೆ. ಒಟ್ಟು ನಾಲ್ಕು ಪ್ರಮುಖ ಅಧ್ಯಾಯಗಳು, ಅದರೊಳಗೆ ಘಟಕಗಳಲ್ಲಿ ವಿವರಣೆ ಇದೆ. ಅಧ್ಯಾಯ ಒಂದರಲ್ಲಿ ಯಕ್ಷಗಾನ ಪರಿಚಯ, ಅದರ ಅಂಗಗಳು ಮತ್ತು ಇತಿಹಾಸ ವಿವರಿಸಲಾಗಿದೆ. ಎರಡರಲ್ಲಿ ರಂಗಸ್ಥಳ, ಚೌಕಿ, ವೇಷಭೂಷಣಗಳು, ಬಣ್ಣಗಾರಿಕೆ ಬಗ್ಗೆ ತಿಳಿಸಲಾಗಿದೆ. ಅಧ್ಯಾಯ ಮೂರರಲ್ಲಿ ಪ್ರಸಂಗಗಳು ಮತ್ತು ಅರ್ಥಗಾರಿಕೆ ಬಗ್ಗೆ ವಿವರಿಸಲಾಗಿದೆ. ಘಟಕಗಳಲ್ಲಿ ಅಭ್ಯಾಸಕ್ಕಾಗಿ ಕೆಲವು ಪ್ರಸಂಗಗಳನ್ನು ನೀಡಲಾಗಿದೆ. ಕೊನೆಯ ಹಾಗೂ ಹೆಚ್ಚು ಪ್ರಾಯೋಗಿಕ ಅಧ್ಯಾಯ ಯಕ್ಷಗಾನ ಶಿಕ್ಷಣ. ಇಲ್ಲಿ ಆರು ಘಟಕಗಳನ್ನು ರಚಿಸಲಾಗಿದೆ. ಅದರಲ್ಲಿ ಲಯ, ಕಾಲ, ತಾಳಗಳ ಪರಿಕಲ್ಪನೆ, ತೆಂಕುತಿಟ್ಟು ತಾಳಗಳು ಮತ್ತು ಹೆಜ್ಜೆಗಾರಿಕೆ, ತೆಂಕುತಿಟ್ಟಿನ ರಂಗಕ್ರಮಗಳು, ಬಡಗುತಿಟ್ಟಿನ ತಾಳಗಳು ಮತ್ತು ಹೆಜ್ಜೆಗಾರಿಕೆ, ಬಡಗುತಿಟ್ಟಿನ ರಂಗಕ್ರಮಗಳು, ಅಭಿನಯ ಮತ್ತು ರಂಗಗತಂತ್ರಗಳು ಇವುಗಳನ್ನು ಅಳವಡಿಸಿಕೊಳ್ಳಲಾಗಿದೆ.
ಎಲ್ಲ ಘಟಕಗಳ ಕೊನೆಯಲ್ಲಿ ಮೌಲ್ಯಮಾಪನಕ್ಕಾಗಿ ಅಭ್ಯಾಸ ಪ್ರಶ್ನೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಕಲಿಕೆ ಸುಲಭವಾಗಲು ಹಲವು ಸಂಕೇತಗಳನ್ನು ನೀಡಲಾಗಿದೆ. ಈ ಸಂಕೇತಗಳ ಮೂಲಕ ಯಕ್ಷಗಾನ ಅಭ್ಯಾಸ ಮೊದಲ ಪ್ರಯೋಗ. ಈ ಪ್ರಯೋಗಕ್ಕೆ ಹೆಚ್ಚಿನ ಕಾಲಾವಕಾಶ ಹಾಗೂ ಪರಿಶ್ರಮ ಹಾಕಲಾಗಿದೆ ಎಂದು ಡಾ.ಸುಂದರ ಕೇನಾಜೆ ತಿಳಿಸಿದರು.
ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಪ್ರಥಮ ಅವಧಿಯ ಮಹತ್ವಾಕಾಂಕ್ಷೀ ‘ಯಕ್ಷ ಶಿಕ್ಷಣ’ ಯೋಜನೆಯ ಸಾಕಾರ ರೂಪ ಇದಾಗಿರುತ್ತದೆ. ಆ ಮೂಲಕ 10 ವರ್ಷಗಳ ಸುದೀರ್ಘ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, ತೆಂಕು ಮತ್ತು ಬಡಗಿನ ಯಕ್ಷಗಾನ ಕಲಿಕೆಗೆ ಹೊಸ ಆಯಾಮ ದೊರಕಿದಂತಾಗಿದೆ. ಕರ್ನಾಟಕ ಪಠ್ಯಪುಸ್ತಕ ಸಂಘ (ರಿ) ಇದರ ವತಿಯಿಂದ ತಯಾರಿಸಲಾದ ಈ ಪಠ್ಯಪುಸ್ತಕದ ಪ್ರಾಥಮಿಕ ವಿಭಾಗ ಮುದ್ರಣಗೊಂಡಿದ್ದು ಕಲಿಕಾರ್ಥಿಗಳಿಗೆ ಲಭ್ಯವಾಗಿದೆ. ಕರಾವಳಿ ಯಕ್ಷಗಾನ ಚರಿತ್ರೆಯ ಪ್ರಥಮ ಯಕ್ಷಗಾನ ಪಠ್ಯಪುಸ್ತಕ ಎನ್ನುವ ದಾಖಲೆಗೆ ಪಾತ್ರವಾಗಿದೆ.
ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ 2009ರ ಪ್ರಥಮ ಅವಧಿಯಲ್ಲಿ, ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ನಡೆಸುವ ಇತರ ಪರೀಕ್ಷೆಗಳಲ್ಲಿ ಯಕ್ಷಗಾನಕ್ಕೂ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳನ್ನು ನಡೆಸಬೇಕೆಂದು ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಕಾರ್ಯಕ್ಕಾಗಿ ಅಕಾಡೆಮಿಯ ಅಂದಿನ ಸದಸ್ಯರಾಗಿದ್ದ ಡಾ.ಸುಂದರ ಕೇನಾಜೆಯವರನ್ನು ಸಂಚಾಲಕರಾಗಿ ಅಕಾಡೆಮಿ ನೇಮಕ ಮಾಡಿತ್ತು. ಸರಕಾರ, ಅಕಾಡೆಮಿ ಮತ್ತು ಪಠ್ಯಪುಸ್ತಕ ಸಂಘಗಳೊಂದಿಗಿನ ಸಮನ್ವಯದಿಂದ ಪಠ್ಯಪುಸ್ತಕ ರಚನಾಕಾರ್ಯದ ಸುದೀರ್ಘ ಕೆಲಸವನ್ನು ನಿರ್ವಹಿಸಿದ್ದರು. ನೂತನ ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಯಕ್ಷ ಶಿಕ್ಷಣ ಪಠ್ಯವಸ್ತುವಿನ ರಚನಾ ಕಾರ್ಯಾಗಾರ ಇವೆರಡು ಅಂದು ಸುಳ್ಯದಲ್ಲಿ ನಡೆಸಲಾಗಿತ್ತು. ಆ ಪ್ರಕಾರ ಪಠ್ಯ ತಯಾರಿಕೆಗಾಗಿ ಕರ್ನಾಟಕ ಪಠ್ಯಪುಸ್ತಕ ಸಂಘ (ರಿ) ಬೆಂಗಳೂರು ಇವರಿಗೂ ಸರಕಾರಿ ಹಂತದಿಂದ ಸೂಚನೆ ನೀಡಲಾಗಿತ್ತು. ಅದರಂತೆ ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯವಸ್ತು ಪರಿಸ್ಕರಣೆಯನ್ನು ತಜ್ಞ ಸಮಿತಿಯಿಂದ ಮಾಡಿಸಿ, ಅದಕ್ಕೆ ಮತ್ತೆ ಸರಕಾರಿ ಹಂತದಿಂದ ಒಪ್ಪಿಗೆ ಪಡೆದುಕೊಂಡಿತು. ನಂತರ ಪ್ರಾಥಮಿಕ ಮತ್ತು ಮಾಧ್ಯಮಿಕ ಎನ್ನುವ ಎರಡು ಪ್ರತ್ಯೇಕ ಪಠ್ಯಪುಸ್ತಕ ರಚನಾ ಸಮಿತಿಯನ್ನು ರಚಿಸಿತು. ಆ ನಂತರ ಈ ಎರಡೂ ಸಮಿತಿಗಳು ಜೊತೆಯಾಗಿ ಮತ್ತು ಪ್ರತ್ಯೇಕವಾಗಿ ಹಲವು ಸಭೆಗಳನ್ನು ನಡೆಸಿ ಪಠ್ಯಪುಸ್ತಕದ ಕರಡು ತಯಾರಿಸಿತು. ಈ ಕರಡಿಗೆ ಸರಕಾರದ ಹಂತದಿಂದ ಮತ್ತೆ ಒಪ್ಪಿಗೆ ಪಡೆದು ಇದೀಗ ಅದು ಪಠ್ಯಪುಸ್ತಕವಾಗಿ ಮುದ್ರಣಗೊಂಡಿದೆ. ಕಳೆದ 10ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಇದೀಗ ಪ್ರಾಥಮಿಕ ಹಂತದ ಪುಸ್ತಕ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾಗಿರುತ್ತದೆ. ಮುಂದೆ ಇದರ ಮುಂದುವರಿದ ಭಾಗವಾದ ಮಾಧ್ಯಮಿಕ ಹಂತ ಮತ್ತು ವಿದ್ವತ್ ಹಂತ ರಚನೆಯಾಗಲಿದೆ. ಇದರಲ್ಲಿ ಮಾಧ್ಯಮಿಕ ಹಂತದ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು ಅದು ಸದ್ಯದಲ್ಲೇ ಮುದ್ರಣಗೊಳ್ಳುವ ನಿರೀಕ್ಷೆ ಇದೆ.
ಪ್ರಸ್ತುತ ಈ ಪಠ್ಯಪುಸ್ತಕದ ಬೆಲೆ ಕೇವಲ 99 ರೂಪಾಯಿ ಆಗಿರುತ್ತದೆ. ಸದ್ಯ ಇದು ಬೆಂಗಳೂರು, ಮೈಸೂರು, ಧಾರವಾಡ ಹಾಗೂ ಕಲಬುರುಗಿಯ ಸರಕಾರಿ ಮುದ್ರಣಾಲಯಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಸ್ಥಳೀಯ ಪುಸ್ತಕ ಮಳಿಗೆಯವರು ಇದನ್ನು ಈ ಮುದ್ರಣಾಲಯಗಳಿಂದ ಪಡೆದು ಈ ಭಾಗದಲ್ಲಿ ಯಕ್ಷಗಾನ ಕಲಿಕಾರ್ಥಿಗಳಿಗೆ ಮಾರಾಟ ಮಾಡಿದರೆ ಅನುಕೂಲವಾಗುತ್ತದೆ. ಈ ಪಠ್ಯಪುಸ್ತಕದ ಆಧಾರದಲ್ಲಿ ಕಲಿಕಾರ್ಥಿಗಳು ಖಾಸಗಿಯಾಗಿ ಗುರುಮುಖೇನ ಕಲಿಕೆ ನಡೆಸಬಹುದು. ನಂತರ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ನಡೆಸುವ ಇತರ ಪರೀಕ್ಷೆಗಳಲ್ಲಿ ಯಕ್ಷಗಾನ ಜೂನಿಯರ್ ಪರೀಕ್ಷೆಗೆ ಬರೆದು ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಜೂನಿಯರ್ ಪರೀಕ್ಷೆ ಬರೆಯಲು ಕನಿಷ್ಠ ಎರಡು ವರ್ಷಗಳ ಕಲಿಕೆಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಸಿದ್ಧಗೊಂಡಿರುವ ಸೀನಿಯರ್ ಪಠ್ಯ ಆ ಹೊತ್ತಿಗಾಗಲೇ ಮುದ್ರಣಗೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಕೂಡ ಎರಡು ವರ್ಷಗಳ ಕಲಿಕೆಯನ್ನು ನಿಗದಿಪಡಿಸಲಾಗಿದೆ. ನಂತರ ವಿದ್ವತ್ ಎರಡು ಹಂತದಲ್ಲಿ ನಡೆಯಲಿದೆ. ಇದಕ್ಕೆ ಪಠ್ಯವಸ್ತುವಿನಿಂದ ಹಿಡಿದು ಪುಸ್ತಕ ರಚನೆ ಹಾಗೂ ಇತರ ಕಾರ್ಯಗಳು ನಡೆಯಬೇಕಾಗಿದೆ. ಈ ಪ್ರಾಥಮಿಕ ಪಠ್ಯಪುಸ್ತಕದ ಖಾಸಗೀ ಬಿಡುಗಡೆ ಕಾರ್ಯಕ್ರಮ ಹಾಗೂ ಇದರ ಮೊದಲ ಅನುಷ್ಠಾನ ಕಾರ್ಯದ ಆರಂಭ ಸುಳ್ಯದ ಶಿಕ್ಷಕರ ಯಕ್ಷಗಾನ ಒಕ್ಕೂಟ ಹಾಗೂ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಮೂಲಕ ಇದೇ ಅಕ್ಟೋಬರ್ 12ರಂದು ನಡೆಯಲಿದೆ.