ಉಜಿರೆ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಲಸಿನ ಹಬ್ಬ ನಡೆಯಿತು. ಬೆಳ್ತಂಗಡಿಯ ರೋಟರಿ ಸಂಸ್ಥೆ, ಮುಳಿಯ ಪ್ರತಿಷ್ಥಾನ ಹಾಗೂ ಅನ್ಯಾನ್ಯ ಸಂಸ್ಥೆಗಳ ಸಹಯೋಗ. ತುಂಬಾ ವ್ಯವಸ್ಥಿತವಾಗಿ ನಡೆದ ಮೇಳವು ‘ವೀಕೆಂಡ್’ ಗೌಜಿಯಾಗಲಿಲ್ಲ! ಅಪ್ಪಟ ಹಲಸು ಪ್ರಿಯರ ಉಪಸ್ಥಿತಿ. ಹಲಸಿನ ಸವಿಯ ಪರಿಚಯವಿದ್ದ ಪಟ್ಟಣಿಗರು. ಹಲಸಿನ ಒಂದಾದರೂ ಗಿಡವನ್ನೊಯ್ಯಬೇಕೆಂಬ ಸಂಕಲ್ಪದ ಕೃಷಿಕರು.. ಹೀಗೆ.
ಕಸಿ ತಜ್ಞ ಅತ್ರಾಡಿಯ ಗುರುರಾಜ ಬಾಳ್ತಿಲ್ಲಾಯರಿಂದ ಹ ಹಬ್ಬಕ್ಕೆ ಶುಭಚಾಲನೆ. ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ ಶ್ರೀ ಪಡ್ರೆಯವರಿಂದ ಹಲಸಿನ ವಿಶ್ವ ದರ್ಶನ, ಹಲಸು ಕೃಷಿಕ ವರ್ಮುಡಿ ಶಿವಪ್ರಸಾದ್ ವರ್ಮುಡಿ ಮತ್ತು ತಳಿ ಸಂರಕ್ಷಕ ಅನಿಲ್ ಬಳೆಂಜರಿಂದ ಅನುಭವ ಗಾಥಾ, ಕೈಲಾರ್ ಆದರ್ಶ ಸುಬ್ರಾಯ, ಹರಿಶ್ಚಂದ್ರ ತೆಂಡೂಲ್ಕರ್, ಜ್ಯೂಲಿ ಜೋಸ್, ಸುಹಾಸ್ ಮರಿಕೆ, ಯತೀಶ್ ಬೊಂಡಾಲ, ಡಾ.ಪ್ರದೀಪ್ ನಾವೂರು, ಡಾ.ದಿನೇಶ್ ಸರಳಾಯ..ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಮೆದುಳಿಗೆ ಮೇವನ್ನು ನೀಡಿದರು.
ಸ್ಪರ್ಧೆಗಳಲ್ಲಿ ಗಜಗಾತ್ರದ ಹಲಸು, ಮನೆ ತಯಾರಿ ಉತ್ಪನ್ನಗಳಿಗೆ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಚಿತ್ರ ರಚನೆ ಸ್ಪರ್ಧೆ, ಸೊಳೆ ತಿನ್ನುವ ಸ್ಪರ್ಧೆ, ಕ್ವಿಜ್.. ಮೊದಲಾದ ಸ್ಪರ್ಧೆಗಳಿಗೆ ಪೈಪೋಟಿ. ಹಲಸು ಸ್ಪರ್ಧೆಗಾಗಿ ಮನೆಯಲ್ಲಿ ತಯಾರಿಸಿದ ಹಲಸಿನ ಎಳೆಯ ಎಲೆಯ ಪಲ್ಯ ಮೇಳದ ಹೈಲೈಟ್. ಇದನ್ನು ತಯಾರಿಸಿದ ವೇಂಕಟೇಶ್ವರಿಯವರು ಹೊಸ ಸಾಧ್ಯತೆಯತ್ತ ಬೆರಳು ತೋರಿದರು.
ತುಂಬಾ ಅಚ್ಚುಕಟ್ಟಾದ ಮಳಿಗೆ ವ್ಯವಸ್ಥೆ. ಎಲ್ಲಾ ಮೇಳಗಳಲ್ಲಿ ಇರುವಂತಹ ಮಳಿಗೆದಾರರು ಕಂಡುಬಂದರೂ ಸಿರಿಧಾನ್ಯಗಳ ಖಾದ್ಯಗಳ ಮಳಿಗೆ, ಹಲಸಿನ ಸಾಬೂನು, ಸ್ಥಳದಲ್ಲೇ ತಯಾರಿಸಿದ ಹಲಸಿನ ಬೀಜದ ಹೋಳಿಗೆ.. ಮೊದಲಾದುವು ಗಮನ ಸೆಳೆದುವು. ಹೊರ ಆವರಣದಲ್ಲಿ ವಿವಿಧ ನರ್ಸರಿಗಳ ಕಸಿ ಸಸಿಗಳ ಪ್ರದರ್ಶನದಲ್ಲಿ ಆಸಕ್ತರ ಗುಂಪು ಗಮನೀಯವಾಗಿತ್ತು. ಹಬ್ಬದಿಂದ ಮರಳುವಾಗ ಅನೇಕರ ಕೈಯಲ್ಲಿ ಹ ಗಿಡಗಳಿದ್ದುವು. ಮನೆಗೆ ಒಯ್ಯುವ ಖಾದ್ಯಗಳ ಪೊಟ್ಟಣಗಳಿದ್ದುವು. ಕೆಲವು ಮಳಿಗೆಗಳಲ್ಲಿ ಹ ರುಚಿಗಳನ್ನು ಅಮ್ಮಂದಿರು ಕಾಗದಕ್ಕಿಳಿಸಿಕೊಳ್ಳುತ್ತಿದ್ದರು.
ಹಲಸಿನ ಹಬ್ಬದ ಸಂಪನ್ನತೆಗೆ ಹಲವಾರು ಕೈಗಳ ಶ್ರಮ ಅಗತ್ಯ. ಕೆಲವೆಡೆ ಇಂತಹ ಶ್ರಮಿಕರ ಸಂಖ್ಯೆ ಕ್ಷೀಣಿಸಿದ್ದರಿಂದ ಮೇಳ ಸೊರಗುವುದೂ ಇದೆ. ಉಜಿರೆ ಮೇಳದಲ್ಲಿ ಸ್ವಯಂಸೇವಕರ ಸಂಖ್ಯೆ ಹಿರಿದಾಗಿತ್ತು. ಎಲ್ಲಾ ವಿಭಾಗಗಳೂ ಅಚ್ಚುಕಟ್ಟಾಗಿ ನಿರ್ವಹಿಸಲ್ಪಟ್ಟಿದ್ದುವು.
ಎರಡು ತಿಂಗಳ ಹಿಂದೆಯೇ ಹಬ್ಬದ ಸಂಘಟಕರ ವಾಟ್ಸಾಪ್ ಬಳಗ ತುಂಬಾ ಸಕ್ರಿಯವಾಗಿತ್ತು. ಕ್ಷಣಕ್ಷಣಕ್ಕೆ ಮೇಳದ ವ್ಯವಸ್ಥೆಗಳ ಅಪ್‍ಡೇಟ್ ಸಿಗುತ್ತಿದ್ದುವು. ಅವುಗಳನ್ನು ನೋಡುತ್ತಾ ಇದ್ದಂತೆ ಸಂಘಟಕರ ಕಾಳಜಿ ವ್ಯಕ್ತವಾಗುತ್ತಿತ್ತು. ಅವೆಲ್ಲಾ ಇಂದು ಮೇಳೈಸಿತು. ಹಬ್ಬ ಸಂಪನ್ನಗೊಂಡಿತು.
ಇದುವರೆಗೆ ಚಿಕ್ಕ ಚಿಕ್ಕ ಗುಂಪುಗಳಲ್ಲಿ, ಸರಕಾರಿ ವ್ಯವಸ್ಥೆ, ಸರಕಾರೇತರ ಸಂಸ್ಥೆಗಳಲ್ಲಿ ಹಬ್ಬವು ಆಯೋಜನೆಯಾಗುತ್ತಿತ್ತು. ಈ ಬಾರಿ ರೋಟರಿ ಸಂಸ್ಥೆಯು ಹಲಸಿನ ಪರಿಮಳವನ್ನು ಆಘ್ರಾಣಿಸಿಕೊಂಡಿರುವುದು ಶ್ಲಾಘನೀಯವಾದ ವಿಚಾರ.
(ಚಿತ್ರ ಕೃಪೆ : ಹಲಸು ಹಬ್ಬ ವಾಟ್ಸಾಪ್ ಬಳಗ)
.