ಶೇಣಿ ಗೋಪಾಲಕೃಷ್ಣ ಭಟ್ಟರ ‘ಶಿವ’
ಪ್ರಸಂಗ : ಗಣೇಶೋದ್ಭವ
ನಿಮಿಷ ನಿಮಿಷಕ್ಕೆ ಬದಲಾವಣೆ ಹೊಂದುತ್ತಿರುವ, ಎಲ್ಲರ ದೃಷ್ಟಿಗೆ ಸಿಕ್ಕುವ ದೃಶ್ಯರೂಪವಾದಂತಹ ಜಗತ್ತು ಕಾರ್ಯವೇ ಹೊರತು ಕಾರಣವಲ್ಲ. ಕಾರಣಕ್ಕೆ ಬದಲಾವಣೆ ಇಲ್ಲ. ಈ ತತ್ವವನ್ನು ತಿಳಿದವರೇ ವಿಜ್ಞಾನಿಗಳು ಅಥವಾ ಜ್ಞಾನಿಗಳು. ಹಾಗಾಗಿ ಕಾರ್ಯರೂಪವಾದಂತಹ ಸಕಲ ಸಚರಾಚರ ಜಗತ್ತಿಗೆ ಕಾರಣರೂಪವಾದಂತಹ ಒಂದು ಸದ್ವಸ್ತು ಇದೆ. ಅದೇ ‘ಕಾರಣಂ ಕಾರಣಾನಾಂ’ ಅಥವಾ ‘ಮಹಾ ಕಾರಣ.’ ಇದನ್ನು ಗುರುತಿಸುವುದು ಹೇಗೆ? ಗುರುತಿಸುವುದಕ್ಕೆ ಅದಕ್ಕೆ ಆಕೃತಿಯಿಲ್ಲ. ಆದರೆ ಅದರ ಗುಣ ವಿಶೇಷಗಳನ್ನು ಗುರುತಿಸುವುದಕ್ಕೆ ಬರುತ್ತದೆ. ಮೊದಲನೆಯದ್ದಾದಂತಹ ಹೆಸರು ‘ಸತ್ಯ’ವೆಂದು. ಎರಡನೆಯದ್ದು ಮಂಗಲಕಲರವಾದ ‘ಶಿವ’ನೆಂದು. ಇನ್ನೊಂದು ಎಲ್ಲರಿಗೂ ಆಪ್ಯಾಯಮಾನವಾದ ಆನಂದವನ್ನು ಒದಗಿಸಿಕೊಡುವ ‘ಆನಂದ’ವೆಂದು. ಹಾಗಾಗಿ ‘ಸತ್ಯಂ, ಶಿವಂ, ಸುಂದರಂ’, ‘ಸತ್ ಚಿತ್ ಆನಂದ’ ಹೀಗೆ ಪ್ರತಿಪಾದಿಸಲ್ಪಡುತ್ತದೆ.
ಆದ ಕಾರಣ ಒಂದೇ ಒಂದಾದಂತಹ ಯಾವತ್ತೂ ವ್ಯಕ್ತಿತ್ವ ನೂರಾರು ಕನ್ನಡಿಗಳಲ್ಲಿ ನೂರಾರು ಪ್ರತಿಬಿಂಬಗಳನ್ನು ಬಾಕಿದ್ದವರಿಗೆ ತೋರಿಸಿಕೊಡುವಂತೆ, ಕುಂಭಸಹಸ್ರ ಉದಕದೊಳಗೆ ಬಿಂಬಿಸುವ ಸೂರ್ಯನೊಬ್ಬನಂತೆ ಶಿವನಿರುತ್ತಾನೆ. ಶಿವನು ತನ್ನ ಮುಂದೆ ಇದ್ದಂತಹ ಮಾಯಾರೂಪವಾದ ಕನ್ನಡಿಯಲ್ಲಿ, ಆ ಕನ್ನಡಿಯ ಬಣ್ಣವನ್ನು ಅನುಸರಿಸಿಕೊಂಡು ಒಂದರಲ್ಲಿ ಬೆಳ್ಳಗೆ, ಒಂದರಲ್ಲಿ ಕೆಂಪು, ಇನ್ನೊಂದರಲ್ಲಿ ಕಪ್ಪು ವರ್ಣದಿಂದ ಕಾಣಿಸುತ್ತಾನೋ ಎಂಬಂತೆ ತನ್ನ ‘ಮಾಯೆ’ಯೆನ್ನುವ ಆ ಪಾರದರ್ಶಕ ಕನ್ನಡಿಯಲ್ಲಿ ‘ಸತ್ಯ ರಜ ತಮ’ ಗುಣದಿಂದ, ‘ಬ್ರಹ್ಮ, ವಿಷ್ಣು, ಮಹೇಶ್ವರ’ ಹೀಗೆ ಮೂರು ಮೂರ್ತಿಗಳಾಗಿ ಗೋಚರಿಸುತ್ತದೆ. ಇದೇ ಕಾರಣದಿಂದ ಮತ್ತೊಮ್ಮೆ ಮೈಯೊಡೆದು ಬರಬೇಕಾಗುತ್ತದೆ ಎಂಬ ತತ್ವೇಣ ವೈಕುಂಠದಲ್ಲಿ ಶ್ರೀಹರಿ, ಸತ್ಯಲೋಕದಲ್ಲಿ ಬ್ರಹ್ಮದೇವ, ರಜತಾದ್ರಿಯಲ್ಲಿ ಕೈಲಾಸವಾಸಿ ಸದಾಶಿವ. ಮಹಾದೇವ ಎಂಬುದು ನಮ್ಮ ಅಸ್ತಿತ್ವಕ್ಕೆ ವಿದ್ವಾಂಸರು ಕೊಟ್ಟಂತಹ ಚಿತ್ರಣ. ಅವರ ಭಾವಕ್ಕೆ ತಕ್ಕಂತೆ ನಾವು ಮೈಯೊಡೆದಿದ್ದೇವೆ.
ಆದರೆ ಒಂದಿದೆ. ನಿಜವಾಗಿಯೂ ನಮಗೆ ಹೆಂಡತಿ ಯಾಕೆ? ಮಕ್ಕಳು ಯಾಕೆ? ಸಂಸಾರ ಯಾಕೆ? ಶುದ್ಧನಾದಂತಹ ಶಿವನು ತಾನು ತಾನಾಗಿ ಏನೂ ಮಾಡಲಾರ. ‘ಕುಂಟ-ಕುರುಡ’ ನ್ಯಾಯದಂತೆ ಕುಂಟನಿಗೆ ಕಣ್ಣಿದೆ, ಆದರೆ ನಡೆಯುವುದಕ್ಕೆ ಕಾಲಿಲ್ಲ. ಒಬ್ಬನ ಹೆಗಲಿನಲ್ಲಿ ಮತ್ತೊಬ್ಬ ಏರಿ ಕುಳಿತಾಗ ಕಣ್ಣಿನ ಕೆಲಸ ಮೇಲಿದ್ದವರು ಮಾಡಿದರೆ, ಕಾಲಿನ ಕೆಲಸ ಕೆಳಗಿದ್ದವರು ಮಾಡುತ್ತಾರೆ ಎಂಬ ರೂಪಕದಂತೆ ನನ್ನ ಮಾಯೆಯನ್ನು ನಾನು ನನ್ನಲ್ಲಿ ಸೇರಿಸಿಕೊಂಡಿದ್ದೇನೆ. ಅಂದರೆ ಪರ್ವತ ರಾಜಕುಮಾರಿಯಾದ ಪಾರ್ವತಿಯನ್ನು ಕಾಲಿನ ಸ್ಥಾನದಲ್ಲಿ ಇಟ್ಟುಕೊಂಡು; ನಿಜವಾಗಿ ನಡೆಯದ, ನುಡಿಯದೇ ಇದ್ದ ಶಿವನಾದ ನಾನು ಲೋಕದ ಕಣ್ಣಾಗಿ ಅವಳ ಹೆಗಲನ್ನೇರಿ ಸಂಚರಿಸುವಂತೆ ಈ ರಜತಾದ್ರಿಯಲ್ಲಿ ವಾಸವಾಗಿದ್ದೇನೆ….