ದೂ ರದ ಎಲ್ಲೋ ಕೊಳವೆಬಾವಿ ಕೊರೆದು ಅದರ ಕೇಸಿಂಗ್ ಪೇಪ್ ತೆಗೆದು ಮಗು ಅದರೊಳಗೆ ಬಿದ್ದು ಲಕ್ಷಾಂತರ ಖರ್ಚು, ಮಗುವಿನ ಪ್ರಾಣ ಹೋದ ಕಹಿ ಘಟನೆ ಎಲ್ಲರಿಗೂ ನೆನಪಿದೆ. ಅದಕ್ಕಾಗಿಯೇ ಕೊಳವೆಬಾವಿ ತೆಗೆದು ನೀರು ಸಿಗದೇ ಇದ್ದರೆ ಕೇಸಿಂಗ್ ಪೈಪ್ ತೆಗೆದರೆ ಮುಚ್ಚಬೇಕು ಎಂದು ಸರಕಾರ ಕಟ್ಟುನಿಟ್ಟಾಗಿ ಆದೇಶವೂ ಮಾಡಿದೆ. ಆದರೆ ಸರಕಾರ, ಸ್ಥಳೀಯಾಡಳಿತವೇ ಹಾಗೆ ಮಾಡಿದರೆ ? ಗ್ರಾಮಸ್ಥರು ಎಚ್ಚರಿಸಿದರ ಬಳಿಕವೂ ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳದೇ ಇದ್ದರೆ ? ಇಂತಹದ್ದೊಂದು ಘಟನೆ ಇಲ್ಲಿದೆ.ಆಡಳಿತ ಇಷ್ಟೂ ನಿರ್ಲಕ್ಷ್ಯವೇ ? ತೆರೆದ ಕೊಳವೆ ಬಾವಿಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಕ್ರಮವಾಗಲಿಲ್ಲ. ಸ್ಥಳೀಯರ ಪ್ರಯತ್ನವೂ ಈಗ ಕೈಗೂಡಲಿಲ್ಲ. ಮತ್ತೆ ಕೊಳವೆಬಾವಿ ತೆರೆದಿದೆ. ಅಪಾಯಕ್ಕೆ ಮುನ್ನ ಕ್ರಮವಾಗಬೇಕಿದೆ. ನಿರ್ಲಕ್ಷ್ಯದ ವಿರುದ್ಧ ಕ್ರಮವಾಗಬೇಕಿದೆ. ತೆರೆದ ಕೊಳವೆ ಬಾವಿ ಇದ್ದರೆ ಏನು ಕ್ರಮ ? ಅದೂ ಸರಕಾರದ್ದೇ, ಅಧಿಕಾರಿಗಳದ್ದೇ ನಿರ್ಲಕ್ಷ್ಯ …!
Advertisement
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದಲ್ಲಿ ರಸ್ತೆ ಬದಿಯಲ್ಲಿ ಇಂತಹದ್ದೊಂದು ಕೊಳವೆ ಬಾವಿ ಇದೆ. ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರಿಗಾಗಿ ಕಮಿಲದ ಬಳಿ ಕೊಳವೆಬಾವಿ ತೆಗೆಸಲಾಗಿತ್ತು. ಆದರೆ ನೀರು ಸಿಗದ ಹಿನ್ನೆಲೆಯಲ್ಲಿ ಕೊಳವೆಬಾವಿಯ ಕೇಸಿಂಗ್ ಪೈಪ್ ತೆಗೆಯಲಾಗಿದೆ. ಮಳೆಗಾಲ ಇದಕ್ಕೆ ನೀರು ತುಂಬಿ ಕೊಳವೆಬಾವಿ ಗುಂಡಿಯಾಗಿದೆ. ತಕ್ಷಣವೇ ಈ ಬಗ್ಗೆ ಸಾರ್ವಜನಿಕರು ಗುತ್ತಿಗಾರು ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದರು.ಆದರೆ ಆಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರೇ ಮಳೆಗಾಲದ ಹೊತ್ತಿಗೆ ಕೊಳವೆಬಾವಿ ಮುಚ್ಚಿದ್ದರು.
ಇದೀಗ ಮತ್ತೆ ಕೊಳವೆಬಾವಿ ಬಾಯಿ ತೆರೆದಿದೆ. ಅಪಾಯ ಆಗುತ್ತೋ ಇಲ್ಲವೇ ಯಾರಿಗೂ ಗೊತ್ತಿಲ್ಲ. ರಸ್ತೆ ಬದಿ ಈ ಕೊಳವೆ ಬಾವಿ ಇದೆ. ಹತ್ತಾರು ಜನರು ಇಲ್ಲೇ ಓಡಾಡುತ್ತಾರೆ. ಈಗ ಕೊಳವೆಬಾವಿ ಮತ್ತೆ ಗುಂಡಿಯಾಗಿದೆ. ಶಾಲೆಗೆ ರಜೆ ಇದೆ. ಮಕ್ಕಳು ಆಟವಾಡುತ್ತಾ ರಸ್ತೆ ಬದಿ ಇರುವ ಇಂತಹ ಕೊಳವೆ ಬಾವಿ ಬಳಿ ಹೋದರೆ ಮುಂದಾಗುವ ಅಪಾಯಕ್ಕೆ ಯಾರು ಹೊಣೆ. ಪ್ರತಿಯೊಂದಕ್ಕೂ ಕಾನೂನು ಮಾತನಾಡುವ ಆಡಳಿತವು ಇಂತಹ ನಿರ್ಲಕ್ಷ್ಯದ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಅಪಾಯ ಅರಿತು ಸಾರ್ವಜನಿಕರು ಪಂಚಾಯತ್ ಗೆ ಮಾಹಿತಿ ನೀಡಿ ಮುಚ್ಚಿದ್ದರು. ಇದೀಗ ಮತ್ತೆ ಗುಂಡಿಯಾಗಿದೆ. ಇದೂ ಒಂದು ಪಾಠವಾಗಿದೆ ಕಾಳಜಿಯಿಂದ ಸಾರ್ವಜನಿಕರು ಮಾಡುವ ಕೆಲಸವೂ ಆಡಳಿತ ಉದಾಸೀನಕ್ಕೆ ಕಾರಣವಾಗುತ್ತದೆ….!
ಗುತ್ತಿಗಾರು ಕಮಿಲ ಬಳ್ಪ ರಸ್ತೆಯ ಬಗ್ಗೆಯೂ ಆಡಳಿತ , ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ, ಈಗ ಕೊಳವೆಬಾವಿ ತೆರೆದು ಇರಿಸಿ ಇಲ್ಲೂ ನಿರ್ಲಕ್ಷ್ಯ ಏಕೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ.