ಮಡಿಕೇರಿ :ಕೊಡಗಿನ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಚತುಷ್ಪಥ ರಸ್ತೆಗಳು ನಿರ್ಮಾಣಗೊಳ್ಳಲಿವೆ. ವಿಶ್ವ ವಿಖ್ಯಾತ ಪ್ರವಾಸಿ ತಾಣ ಮೈಸೂರು ಗಮನ ಸೆಳೆದಿದ್ದರೆ, ಕೊಡಗು ಭಕ್ತಿ ಮತ್ತು ಬದುಕಿಗೆ ಹತ್ತಿರವಾದ ಕಾವೇರಿಯ ನಾಡಾಗಿದೆ. ಇದು ಹೆಚ್ಚು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭ್ಯುದಯವನ್ನು ಕಾಣಬೇಕಾದರೆ ರಸ್ತೆ ಸಂಪರ್ಕ ಪ್ರಮುಖವಾಗಿ ಆಗಬೇಕಾಗಿದೆ. ಇದೇ ಕಾರಣಕ್ಕೆ ಈ ಎರಡು ಜಿಲ್ಲೆಗಳಲ್ಲಿ ರೈಲು ಮತ್ತು ರಸ್ತೆ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಚತುಷ್ಪಥ ರಸ್ತೆಗಳು ನಿರ್ಮಾಣವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಭೂ ಸ್ವಾಧೀನ ಪ್ರಕ್ರಿಯೆ ಸಂದರ್ಭ ಮೈಸೂರು ವಿಭಾಗದಲ್ಲಿ ಯಾರೂ ಕೂಡ ವಿರೋಧ ವ್ಯಕ್ತಪಡಿಸಿಲ್ಲ. ಕಾರಣ ಕೇಂದ್ರ ಸರ್ಕಾರ ಭೂಮಿಗಾಗಿ ಅತೀ ಹೆಚ್ಚು ಪರಿಹಾರವನ್ನು ನೀಡುತ್ತಿದೆ. ಒಂದು ಏಕರೆಗೆ 1.50 ಕೋಟಿ ರೂ.ಪರಿಹಾರ ನೀಡಿದ ಉದಾಹರಣೆಯೂ ಇದೆ ಎಂದ ಅವರು, ಕೊಡಗಿನಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಯಾವುದೇ ವಿರೋಧ ವ್ಯಕ್ತವಾಗುವುದಿಲ್ಲವೆನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು, ಕೊಡಗು ಸೇರಿದಂತೆ ಆರು ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 7,550 ಕೋಟಿ ರೂ.ಗಳನ್ನು ಕೇಂದ್ರ್ರ ಸರಕಾರ ಖರ್ಚು ಮಾಡುತ್ತಿದ್ದು, ಏಳು ಪೈಸೆಯನ್ನು ಕೂಡ ರಾಜ್ಯ ಸರಕಾರದಿಂದ ಪಡೆಯುತ್ತಿಲ್ಲ. ಈ ಮಹತ್ವಾಕಾಂಕ್ಷಿ ಯೋಜನೆ 2021ರ ದಸರಾ ವೇಳೆಗೆ ಸಂಪೂರ್ಣ ಗೊಳ್ಳಲಿದೆ ಎಂದು ಪ್ರತಾಪಸಿಂಹ ಹೇಳಿದರು.