ಸುಳ್ಯ: ಸುಳ್ಯದಲ್ಲಿ ಪ್ರಾಮಾಣಿಕ ಮತ್ತು ಜನಪರ ಅಧಿಕಾರಿ ಎಂದು ಹೆಸರು ಗಳಿಸಿದ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರ ವರ್ಗಾವಣೆ ಹಿಂದೆ ರಾಜಕೀಯ ಒತ್ತಡ ಕೆಲಸ ಮಾಡಿದೆಯೇ ಎಂಬ ಗುಮಾನಿ ಹಬ್ಬಿದೆ.
ಅಧಿಕಾರಿಗಳು ಕನಿಷ್ಟ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುವುದು ಸಾಮಾನ್ಯವಾದರೂ ಕುಂಞಿ ಅಹಮ್ಮದ್ ಅವರನ್ನು ಒಂದು ವರ್ಷ ಆಗುವ ಮುನ್ನ ಎರಡು ಬಾರಿ ವರ್ಗಾವಣೆ ಮಾಡಿಸುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದೆ ಎಂಬ ಗುಸು ಗುಸು ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಹಲವಾರು ಸಮಸ್ಯೆಗಳಿಂದ ಬಳಲಿರುವ ಸುಳ್ಯದಲ್ಲಿ ಪದೇ ಪದೇ ತಹಶೀಲ್ದಾರ್ ಬದಲಿಸಿ ಅತಂತ್ರ ಪರಿಸ್ಥಿತಿ ನಿರ್ಮಾಣ ಮಾಡುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಹಶೀಲ್ದಾರ್ ವರ್ಗಾವಣೆಯ ಬಗ್ಗೆ ಹಲವು ವಿಧದ ಚರ್ಚೆಗಳು ಆರಂಭವಾಗಿದೆ.
ಕಳೆದ ಫೆಬ್ರುವರಿ ತಿಂಗಳಲ್ಲಿ ಸುಳ್ಯ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ಕುಂಞಿ ಅಹಮ್ಮದ್ ರಿಗೆ ಕೇವಲ ಐದು ತಿಂಗಳಲ್ಲಿ ಕಳೆದ ಜುಲೈ ತಿಂಗಳಲ್ಲಿ ಇವರಿಗೆ ಒಮ್ಮೆ ವರ್ಗಾವಣೆ ಆದೇಶ ಬಂದಿತ್ತು. ಇದಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಬಳಿಕ ಸರಕಾರ ಬದಲಾದ ಕಾರಣ ಇವರ ವರ್ಗಾವಣೆ ಆದೇಶಕ್ಕೆ ತಡೆ ಬಿದ್ದಿತ್ತು. ಇದೀಗ 5 ತಿಂಗಳ ಬಳಿಕ ಮತ್ತೆ ವರ್ಗಾವಣೆ ಆಗಿದೆ ಎಂಬ ಮಾಹಿತಿ ಬಂದಿದೆ.
ರೈತ ಸಂಘ ಖಂಡನೆ: ತಹಶೀಲ್ದಾರ್ ವರ್ಗಾವಣೆಗೆ ಕರ್ನಾಟಕ ರೈತ ಸಂಘ ಖಂಡಿಸಿದೆ. ಜನರ ಪರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ನಿಡಿಂಜಿ, ತೀರ್ಥರಾಮ ಉಳುವಾರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.