ಮಂಗಳೂರು: ಕೋವಿಡ್-19 ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಶನಿವಾರ 4 ಹೊಸ ಪ್ರಕರಣ ಬೆಳಕಿಗೆ ಬರುವ ಮೂಲಕ ಒಟ್ಟು 19 ಮಂದಿ ಈಗ ಬಾಧಿತರಾಗಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಮೂರು ಹೊಸ ಪ್ರಕರಣ ಹಾಗೂ ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಒಂದು ಪ್ರಕರಣ ದೃಢವಾಗಿರುವುದು ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 19ಕ್ಕೇ ಏರಿದೆ. ದೇಶದಲ್ಲಿ ಒಟ್ಟು 271 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ.
ದಕ್ಷಿಣ ಕನ್ನಡದಲ್ಲಿ ಈವರೆಗೆ ಕೋವಿಡ್-19 ಪಾಸಿಟಿವ್ ಪ್ರಕರಣ ದೃಢ ಪಟ್ಟಿಲ್ಲ. 89 ಜನರನ್ನು ಪರೀಕ್ಷಿಸಲಾಗಿದೆ, ಇದರಲ್ಲಿ 79 ಜನರಲ್ಲಿ ಕೋವಿಡ್-19 ನೆಗೆಟಿವ್ ಇದ್ದರೆ 10 ಜನರ ವರದಿ ಕಾಯಲಾಗುತ್ತಿದೆ. ಈಗ ಜನರು ಭಯಗೊಳ್ಳುವುದಕ್ಕಿಂತಲೂ ಜಾಗ್ರತೆ ವಹಿಸಬೇಕಿದೆ. ಮುಂಜಾಗ್ರತಾ ಕ್ರಮಗಳಿಂದ ಕೋವಿಡ್-19 ಮುಕ್ತ ಜಿಲ್ಲೆಯಾಗಿಸಬಹುದಾಗಿದೆ.
ಕೊರೋನ(ಕೋವಿಡ್-19) ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.21 ರಿಂದ ಮಾ.31ರ ಮಧ್ಯರಾತ್ರಿವರೆಗೆ ಕೇರಳದ ಗಡಿಭಾಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ 6 ಕೊರೋನಾ ಪ್ರಕರಣಗಳು ವೈದ್ಯಕೀಯ ತಪಾಸಣೆಯಿಂದ ವರದಿಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ – ಕೇರಳ ರಾಜ್ಯದ ಕಾಸರಗೋಡು ಗಡಿ ಭಾಗದಲ್ಲಿ ಸಂಚರಿಸುವ ಎಲ್ಲಾರೀತಿಯ ವಾಹನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.