ಮಂಗಳೂರು: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 29ನೇ ವಾರದ ಶ್ರಮದಾನದ ಕುಲಶೇಖರದಲ್ಲಿ ಕೈಗೊಳ್ಳಲಾಯಿತು. ಕೊರ್ಡೆಲ್ ಹೋಲಿ ಚರ್ಚ್ ಮುಂಭಾಗದಲ್ಲಿ ಫಾದರ್ ವಿಕ್ಟರ್ ಮಚಾದೋ ಶ್ರಮದಾನಕ್ಕೆ ಹಸಿರು ಬಾವುಟ ತೋರಿ ಚಾಲನೆ ನೀಡಿದರು.
ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ “ಯಾವುದೇ ಮಹಾನ್ ಕಾರ್ಯವಾಗಬೇಕಿದ್ದರೆ ಅದರ ಹಿಂದೆ ಶಕ್ತಿಯೊಂದು ಇರಲೇಬೇಕು. ಮಂಗಳೂರಿನ ಬೀದಿಗಳು ಇಂದು ಸ್ವಚ್ಛ ಸುಂದರವಾಗಿ ಕಂಗೊಳಿಸುತ್ತಿದ್ದರೆ ಅದಕ್ಕೆ ರಾಮಕೃಷ್ಣ ಮಿಷನ್ ಕಾರ್ಯಕರ್ತರ ಶಕ್ತಿಯೇ ಕಾರಣವಾಗಿದೆ. ಮಳೆಗಾಲದ ಭಾನುವಾರದ ಈ ಮುಂಜಾವಿನ ಸಮಯದಲ್ಲೂ ಇಷ್ಟೊಂದು ಕಾರ್ಯಕರ್ತರು ಜಾತಿ-ಮತ, ಮೇಲು-ಕೀಳು ಬಡವ-ಬಲ್ಲಿದ ಎಂಬ ಯಾವುದೇ ಭಾವವಿಲ್ಲದೇ ಕೇವಲ ಸ್ವಚ್ಛತೆಗಾಗಿ ಕಂಕಣಬದ್ಧರಾಗಿರುವುದನ್ನು ನೋಡಿದಾಗ ಇದು ಭಾರತ ಬದಲಾಗುತ್ತಿರುವ ಸಂಕೇತದಂತೆ ತೋರುತ್ತದೆ. ಇದಕ್ಕೆ ಕಾರಣೀಕರ್ತರಾದ ಹಾಗೂ ಕಾರ್ಯಕರ್ತರಿಗೆ ನಿರಂತರವಾಗಿ ಸ್ಥೂರ್ತಿಯನ್ನು ನೀಡುತ್ತಿರುವ ರಾಮಕೃಷ್ಣ ಮಠದ ಸ್ವಾಮಿಜಿಗಳ ಶ್ರಮಕ್ಕೆ ಮಂಗಳೂರಿನ ನಾಗರಿಕ ಸಮಾಜದ ಪರವಾಗಿ ಅಭಿನಂದನೆ ಸಲ್ಲಬೇಕು.” ಎಂದು ತಿಳಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿದರು.
ನಂತರ ಮಾತನಾಡಿದ ಫಾದರ್ ವಿಕ್ಟರ್ ಮಚಾದೋ “ಸಮಾಜದಲ್ಲಿರುವ ಜನರ ಭಾವನೆಗಳು ಸ್ವಚ್ಛವಾಗಬೇಕು. ಭಾವಶುದ್ಧಿಯಾದರೇ ಬಾಹ್ಯ ಸಮಾಜದ ಶುದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಕಸದ ವಿಚಾರದಲ್ಲಿ ಜನರ ಮನಸ್ಸುಗಳಲ್ಲಿ ಜಾಗೃತಿಯನ್ನುಂಟುಮಾಡುವಲ್ಲಿ ಸಫಲರಾದರೆ ನಮ್ಮ ಪರಿಸರ ತನ್ನಿಂದತಾನೇ ಸ್ವಚ್ಛವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಪರಿಸರ ಶುಚಿಯಾಗಿದ್ದರೆ ಆರೋಗ್ಯವಂತ ಬದುಕು ನಮ್ಮದಾಗುತ್ತದೆ ಎಂದರು.
ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಶುಭೋದಯ ಆಳ್ವ , ಸತೀಶ್ ಭಟ್ , ರಂಜನ್ ಬೆಳ್ಳರ್ಪಾಡಿ, ಮೆಹಬೂಬ್ ಖಾನ್, ಸತ್ಯನಾರಾಯಣ ಭಟ್, ತಾರಾನಾಥ್ ಆಳ್ವ, ಶಿವರಾಜ್ ಪೂಜಾರಿ, ಲೋಕೇಶ್ ಕೊಟ್ಟಾರ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಲಶೇಖರ್ ಪ್ರದೇಶದ ಹೆದ್ದಾರಿಯ ಬದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಅಭಿಯಾನದ ಪ್ರಧಾನ ಸಂಯೊಜಕ ಉಮಾನಾಥ್ ಕೋಟೆಕಾರ್ ನೇತೃತ್ವದಲ್ಲಿ ನಾಲ್ಕು ತಂಡಗಳು ಶ್ರಮದಾನವನ್ನು ಕೈಗೊಂಡವು. ಕೊರ್ಡೆಲ್ ಚರ್ಚ್ ಮುಂಭಾದಲ್ಲಿರುವ ಬಸ್ ತಂಗುದಾಣದ ಬಳಿ ಇದ್ದ ತ್ಯಾಜ್ಯಗಳ ರಾಶಿಯನ್ನು ಸಚಿನ್ ಕಾಮತ್ ಹಾಗೂ ಕಾರ್ಯಕರ್ತರು ತೆರವುಗೊಳಿಸಿ ಅಲ್ಲಿ ಹೂಗಿಡಗಳನ್ನಿಟ್ಟರು.
ಮತ್ತೊಂದೆಡೆ ಅದೇ ಮಾರ್ಗದಲ್ಲಿದ್ದ ಕಟ್ಟಡತ್ಯಾಜ್ಯ ಹಾಗೂ ತೋಡುಗಳ ತ್ಯಾಜ್ಯದ ರಾಶಿಗಳನ್ನು ಶೇಷಪ್ಪ ಅಮೀನ್ ಹಾಗೂ ಕಾರ್ಯಕರ್ತರು ಜೆಸಿಬಿ ಬಳಸಿಕೊಂಡು ಸ್ವಚ್ಛಗೊಳಿಸಿದರು.
ಮೂರನೇ ತಂಡ ಶಕ್ತಿನಗರಕ್ಕೆ ಹೋಗುವ ಅಡ್ಡರಸ್ತೆಯಲ್ಲಿ ಬಸ್ ತಂಗುದಾಣದ ಬಳಿಯಿರುವ ತ್ಯಾಜ್ಯವನ್ನು ತೆಗೆದು ಶುದ್ಧಗೊಳಿಸಿದರು.ಹಿರಿಯರಾದ ಕಮಲಾಕ್ಷ ಪೈ ನೇತೃತ್ವ ವಹಿಸಿದ್ದರು.
ಕುಲಶೇಖರ್ ಮಾರುಕಟ್ಟೆ ಬಳಿಯಿರುವ ಮರದ ಸುತ್ತಮುತ್ತಲಿನ ಪರಿಸರ ಅತ್ಯಂತ ಗಲೀಜಾಗಿ ಹೇಸಿಗೆ ಹುಟ್ಟಿಸುತ್ತಿತ್ತು. ಸುಧೀರ್ ನರೋನ್ಹ ಹಾಗೂ ಉಮಾಕಾಂತ ಮಾರ್ನಮಿಕಟ್ಟೆ ಮಾರ್ಗದರ್ಶನದಲ್ಲಿ ಸ್ವಚ್ಛಗೊಳಿಸಿ ಅಲ್ಲಿಯೂ ಅಲಂಕಾರಿಕ ಗಿಡಗಳನ್ನಿಡಲಾಗಿದೆ. ಕೊನೆಯಲ್ಲಿ ಬಿಕರ್ನಕಟ್ಟೆ, ನಂತೂರು, ಕದ್ರಿ, ಹಂಪನಕಟ್ಟೆ, ಪಾಂಡೇಶ್ವರ, ಮಂಗಳಾದೇವಿ ಪರಿಸರದಲ್ಲಿದ್ದ ಅನಧಿಕೃತ ಬ್ಯಾನರ್‍ಗಳನ್ನು ತೆರವುಗೊಳಿಸಲಾಗಿದೆ.
ತೋಡುಗಳ ಸ್ವಚ್ಛತೆ:
ಕೊರ್ಡೆಲ್ ಹಾಲ್ ಮುಂಭಾದಲ್ಲಿರುವ ತೋಡುಗಳಲ್ಲಿ ಕಸಕಡ್ಡಿ ಹಾಗೂ ತ್ಯಾಜ್ಯ ತುಂಬಿದ್ದರಿಂದ ಮಳೆಯ ನೀರು ತೋಡುಗಳಲ್ಲಿ ತುಂಬಿತ್ತು. ಇದೀಗ ಅಲ್ಲಿದ್ದ ತ್ಯಾಜ್ಯ, ಮಣ್ಣು ಹಾಗೂ ಕಸಕಡ್ಡಿಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು. ವಿಠಲದಾಸ್ ಪ್ರಭು, ಪುನೀತ್ ಕುಮಾರ್ ಶೆಟ್ಟಿ ಹಾಗೂ ಸ್ವಯಂಸೇವಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.
ಜಾಗೃತಿ ಕಾರ್ಯಕ್ರಮ: ಕುಲಶೇಖರದಲ್ಲಿರುವ ಅಂಗಡಿಮುಂಗಟ್ಟುಗಳಿಗೆ ತೆರಳಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಜೊತೆಗೆ ಸ್ವಚ್ಛ ಮಂಗಳೂರು ಜಾಗೃತಿ ಕೈಪಿಡಿಯನ್ನು ಹಂಚಲಾಯಿತು. ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಸರಿತಾ ಶೆಟ್ಟಿ ಹಾಗೂ ಸ್ಮಿತಾ ಹೆಬ್ಬಾರ್ ಮಾರ್ಗದರ್ಶನದಲ್ಲಿ ಜಾಗೃತಿ ಕಾರ್ಯವನ್ನು ನಿರ್ವಹಿಸಿದರು.
ಮತ್ತೊಂದೆಡೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕೋರಿಕೆಯ ಮೇರೆಗೆ ಅಭಿಯಾನದ ಪ್ರಮುಖರಾದ ದಿಲ್‍ರಾಜ್ ಆಳ್ವ ನೇತೃತ್ವದಲ್ಲಿ ಗೋರಕ್ಷದಂಡು ಹಾಗೂ ಅರೆಕೆರೆಬೈಲ್ ಪ್ರದೇಶದಲ್ಲಿ ಮಲೇರಿಯಾ-ಡೆಂಗ್ಯೂ ಕುರಿತಂತೆ ಜನರಿಗೆ ತಿಳುವಳಿಕೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಹೇಳಲಾಯಿತು.
ಶ್ರಮದಾನದ ಬಳಿಕ ಎಲ್ಲ ಸ್ವಯಂಸೇವಕರಿಗೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅರಣ್ಯ, ಪರಿಸರ ಸಚಿವ ಈಶ್ವರ ಬಿ.ಖಂಡ್ರೆ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024025 ನೇ ಸಾಲಿನಲ್ಲಿ ಎಫ್‌ಎಕ್ಯೂ ಗುಣಮಟ್ಟದ…
ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ,…
ಈಗಿನಂತೆ ಈ ಮಳೆಯು ನವೆಂಬರ್ 4ರ ವರೆಗೆ ಮುಂದುವರಿಯುವ ಲಕ್ಷಣಗಳಿವೆ.
ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿಗೆ ದೀಪವೇ ವಿಶೇಷ. ವಿವಿಧ ವಿನ್ಯಾಸದ ಬಣ್ಣದ ದೀಪಗಳನ್ನು…