ಬೆಂಗಳೂರು: ರಾಮಾಯಣವೊಂದರಲ್ಲೇ ಭಾರತೀಯ ವಿದ್ಯೆಯ ಸಮಗ್ರ ಚಿತ್ರಣವೂ ಸಿಗುತ್ತದೆ. ಪ್ರಯತ್ನದ ಫಲವು ಯಶಸ್ಸಿನ ಮೂಲಕ ಲಭಿಸುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ಭಾನುವಾರ ನಡೆದ ಧಾರಾರಾಮಾಯಣ ಪ್ರವಚನದ ಮಂಗಲದಲ್ಲಿ ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ರಾಮಾಯಣ ಎಂಬುದು ಕಲ್ಪನೆಯಲ್ಲ, ಅದು ಇತಿಹಾಸ. ರಾಮಾಯಣ, ಮಹಾಭಾರತ, ಭಾಗವತ ನಮ್ಮ ಸಂಸ್ಕೃತಿಯ ಮೂಲಾಧಾರವಾಗಿದ್ದು, ವಿಷ್ಣುಗುಪ್ತ ವಿಶ್ವವಿದ್ಯಾಲಯದಲ್ಲಿ ಈ ಮೂರನ್ನು ಮೂಲವಾಗಿಟ್ಟುಕೊಳ್ಳಲಾಗಿದೆ. ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಸ್ಥಾಪನೆಯ ಮಹಾತ್ಕಾರ್ಯಕ್ಕಾಗಿ ಮಾಡಿದ ಸಂಕಲ್ಪಕ್ಕೆರಾಮನ ಮಹಾನುಗ್ರಹ ಲಭಿಸಿದೆ. ಒಂದು ಕಾರ್ಯದ ಮುಕ್ತಾಯ ಎಂಬುದು ಇನ್ನೊಂದು ಕಾರ್ಯದ ಆರಂಭವಾಗಿರಬೇಕು. ಅದಕ್ಕಾಗಿ ಧಾರಾರಾಮಾಯಣದ ಮಂಗಲದ ಬಳಿಕ ವಿಷ್ಣುಸಹಸ್ರನಾಮ ಪಾರಾಯಣದ ಮೂಲಕ ಇನ್ನಷ್ಟು ಪುಣ್ಯಗಳಿಸಿ ವಿಶ್ವವಿದ್ಯಾಪೀಠ ಸದೃಢ ಮಾಡುವ ಕಾರ್ಯವಾಗಲಿ. ಭಾರತಕ್ಕೆ ಭೂಷಣವಾಗುವ ರೀತಿಯಲ್ಲಿ ಮೂಡಿಬರುವ ವಿಶ್ವ ವಿದ್ಯಾಪೀಠ ವಿಶ್ವಕ್ಕೆ ಬೆಳಕು ಹರಿಸುವಂತಾಗಲಿ ಎಂದರು.
ಶಾಶ್ವತವಾದುದಕ್ಕಾಗಿ ಅಶಾಶ್ವತವನ್ನು ತ್ಯಾಗ ಮಾಡಬೇಕು. ಅಶೋಕ ವನಗಳು ಶೋಕವನ್ನು ಕಡಿಮೆ ಮಾಡುವ ವಿಶೇಷ ಶಕ್ತಿಯನ್ನು ಹೊಂದಿದೆ. ಇಂದು ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಜೀವೋತ್ಕರ್ಷಕ್ಕೆ ಕಾರಣವಾಗುವುದು ಅತ್ಯಂತ ಪುಣ್ಯದ ಕಾರ್ಯ ಎಂದು ಅಭಿಪ್ರಾಯಪಟ್ಟರು. ಕರ್ತವ್ಯದಲ್ಲಿ ಪೂರ್ಣತಿಯನ್ನು ಕಾಣುವ ಕಾರ್ಯವಾಗಬೇಕು. ಯಾರೂ ಯಾರಿಗೂ ನೋವು ಕೊಡದ ಆಡಳಿತ ರಾಮರಾಜ್ಯದಲ್ಲಿತ್ತು. ಧನ್ಯತೆ ನಿಜವಾದ ಸಂಪತ್ತು ಸಿಕ್ಕಾಗ ಬರುತ್ತದೆ. ಕೋಪವನ್ನು ತೊರೆದು ಶ್ರದ್ಧೆಯಿಂದ ರಾಮಾಯಣ ಕೇಳಿದಾಗ ಬದುಕಿನಲ್ಲಿ ಬರುವ ವಿಘ್ನಗಳನ್ನು ತೊರೆಯುವುದರ ಜತೆಗೆ ರಾಮಾಯಣವು ಜೀವಗಳ ಪಾಪವನ್ನು ಕಳೆಯುತ್ತದೆ ಎಂದು ಹೇಳಿದರು. ಅಯ್ಯೋದ್ಯೆಗೆ ಆಗಮಿಸಿದ ರಾಜನಿಗೆ ವಸಿಷ್ಠರು ರತ್ನಖಚಿತವಾದ ಕಿರೀಟ ಧರಿಸುವ ಮೂಲಕ ಪಟ್ಟಾಭಿಷೇಕ ನಡೆಯಿತು. ರಾಮನಿಗೆ ಪಟ್ಟಾಭಿಷೇಕದ ಸಮಯ ಜಗತ್ತಿನ ಎಲ್ಲಾ ಸಸ್ಯಗಳು ತಂಪಾದವು. ರಾಮನ ಆಡಳಿತಾವಧಿಯಲ್ಲಿ ಎಲ್ಲವೂ ರಾಮಮಯವಾಗಿತ್ತು. ಧಾರಾರಾಮಯಣ ಜಗತ್ತಿಗೆ ಬೆಳಕು ಹರಿಸುವ ಕಾರ್ಯ ಮಾಡಲಿ ಎಂದು ಪ್ರವಚನದಲ್ಲಿ ಪ್ರಸ್ತುತ ಪಡಿಸಿದರು.
ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ ಭವಿಷ್ಯದ ಕಲ್ಪನೆ ಇಟ್ಟುಕೊಂಡು ಕಾರ್ಯಕ್ರಮಗಳನ್ನು ಮಾಡಬೇಕು. ಹೊಸನಗರ ಗೋವರ್ಧನದಾರಿ ಸನ್ನಿದ್ಧಿಯಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಹಾ ಅಭಿಯಾನ ನಡೆಯಬೇಕು. ದೇಶದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ರಾಮಚಂದ್ರಾಪುರ ಮಠ ಆರಂಭಿಸುತ್ತಿರುವ ವಿಶ್ವವಿದ್ಯಾಪೀಠ ಎಲ್ಲರಿಗೂ ಮಾದರಿಯಾಗಿದೆ. ಸ್ವಾಮೀಜಿಯವರ ಮಹಾ ಕಲ್ಪನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಪಟ್ಟಾಭಿಷೇಕ ಮಹೋತ್ಸವ: ವಿಶಿಷ್ಟವಾಗಿ ಅಲಂಕೃತವಾದ ಸಿಂಹಾಸನದಲ್ಲಿ ಪಟ್ಟಾಭಿಷಿಕ್ತನಾದ ಶ್ರೀರಾಮ ಹಾಗೂ ಸೀತಾಮಾತೆಗೆ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನವರತ್ನಾಭಿಷೇಕ, ಸುವರ್ಣಾಭಿಷೇಕ ರಜತಾಭಿಷೇಕ ಮಾಡಿದರು. ವಿಶೇಷ ಸೇವೆ, ಪಟ್ಟಕಾಣಿಕೆಯಾಗಿ ಶ್ರೀಮಠದ ಶಿಷ್ಯಭಕ್ತರು ನವರತ್ನ, ಆಭರಣಗಳು ಸೇರಿ 75ಕ್ಕೂ ಹೆಚ್ಚು ವಿವಿಧ ಸುವಸ್ತುಗಳು ಹಾಗೂ ಕಾಣಿಕೆಗಳನ್ನು ಸೇವಾರೂಪದಲ್ಲಿ ಶ್ರೀರಾಮದೇವರಿಗೆ ಸಮರ್ಪಿಸಿದರು. ಪಟ್ಟಾಭಿಷೇಕದ ಸಂದರ್ಭದಲ್ಲಿ ಸಂಗೀತ ಸೇವೆ, ನೃತ್ಯ ಸೇವೆ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಮಂತ್ರಗಳ ಘೋಷ ನೆರವೇರಿತು. ಇದೇ ಸಂದರ್ಭದಲ್ಲಿ ಹವ್ಯಕ ಮಹಾಸಭೆಯ ನೂತನ ಪದಾಧಿಕಾರಿಗಳು ಫಲಸಮರ್ಪಣೆ ಮಾಡಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಂದ ಆಶೀರ್ವದ ಪಡೆದರು.
ಭಾರತೀ ಪ್ರಕಾಶನದ ವತಿಯಿಂದ ಧಾರಾರಾಮಯಣದ 154 ದಿನದ ಪ್ರವಚನಧಾರೆಯ ಧ್ವನಿ ಮುದ್ರಿಕೆ ಲೋಕಾರ್ಪಣೆ ನಡೆಯಿತು. ರಾಘವೇಂದ್ರ ಭಟ್ ಕ್ಯಾದಗಿ ಪ್ರಸ್ತಾವನೆಗೈದರು. ಆಚಾರ ವಿಚಾರ ಗಜಾನನ ಭಟ್ ಅವರ ನೇತೃತ್ವದಲ್ಲಿ ರಾಮಾಯಣ ಪಟ್ಟಾಭಿಷೇಕ ಕಾರ್ಯಗಳು ನಡೆಯಿತು. ಶ್ರೀಮಠದ ಶಾಸನತಂತ್ರ ಪದಾಧಿಕಾರಿಗಳು ಹಾಜರಿದ್ದರು.