ಪುತ್ತೂರು: ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ತನ್ನ 33 ನೇ ಸಂಸ್ಥಾಪನಾ ದಿನವನ್ನು ಆಚರಿಸಿತು.
ಈ ಸಂದರ್ಭ ಕೇಂದ್ರ ಸರ್ಕಾರದಿಂದ ನಿರ್ದೇಶನಾಲಯಕ್ಕೆ ಮಂಜೂರಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕೊಡುವ ಅನುದಾನದ ಯೋಜನೆಯನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಸಂಜೀವ ಮಠಂದೂರು ಸಾಂಕೇತಿಕವಾಗಿ ಗಿಡ ಕೊಡುವುದರ ಮೂಲಕ ಚಾಲನೆ ನೀಡಿದರು ಬಳಿಕ ಮಾತನಾಡಿದ ಅವರು , ಭಾರತೀಯ ಸಮಾಜದಲ್ಲಿ ಕೃಷಿಯ ಪಾತ್ರ ಮತ್ತು ಬದಲಾಗುತ್ತಿರುವ ದೇಶದ ಕೃಷಿ ಸನ್ನಿವೇಶದ ಬಗ್ಗೆ ಮಾತನಾಡಿದರು.
ಅತಿಥಿಯಾಗಿ ಭಾಗವಹಿಸಿದ ಕೊಚ್ಚಿಯ ಕೊಕೊ ಮತ್ತು ಗೋಡಂಬಿ ಅಭಿವೃದ್ಧಿ ನಿರ್ದೇಶನಾಲಯದ (ಡಿಸಿಸಿಡಿ) ನಿರ್ದೇಶಕ ವೆಂಕಟೇಶ್ ಹುಬ್ಬಳ್ಳಿ, ಗೋಡಂಬಿ ಜನಪ್ರಿಯಗೊಳಿಸುವಿಕೆ ಮತ್ತು ಸಾಂಪ್ರದಾಯಿಕವಲ್ಲದ ಗೋಡಂಬಿ ಬೆಳೆಯುವ ಪ್ರದೇಶಗಳಿಗೆ ಅದರ ಪ್ರದೇಶ ವಿಸ್ತರಣೆಗಾಗಿ ಡಿಸಿಸಿಡಿಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು.
ಕರ್ನಾಟಕದ ಗೇರು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ನಟೇಲ್ಕರ್ ಮಾತನಾಡಿ ದೇಶದ ಗೋಡಂಬಿ ಕೃಷಿಕರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ವರ್ಷಗಳಲ್ಲಿ ಮಾಡಿದ ಸಾಧನೆಗಳಿಗಾಗಿ ನಿರ್ದೇಶನಾಲಯವನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗೋಡಂಬಿ ಕೃಷಿ ಕುರಿತು ಆರು ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು. ಕೋಲಾರ ಜಿಲ್ಲೆಯಲ್ಲಿ ಗೋಡಂಬಿ ಬೆಳೆಯುತ್ತಿರುವ ಪ್ರಗತಿಪರ ರೈತ ಕೆ.ನಾಗರಾಜ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ನಬಾರ್ಡ್ ಬ್ಯಾಂಕಿನ ಸಹಾಯಕ ಪ್ರಬಂಧಕರಾದ ಎಸ್. ರಮೇಶ್, “ರೈತ ಉತ್ಪಾದಕ ಕಂಪನಿಗಳ ರಚನೆಯಲ್ಲಿ ನಬಾರ್ಡ್ನ ಪಾತ್ರ” ಕುರಿತು ಉಪನ್ಯಾಸ ನೀಡಿದರು.
ವಿಟ್ಲದ ರೈತ ಉತ್ಪಾದಕ ಕಂಪನಿ ‘ಪಿಂಗಾರ’ದ ನಿರ್ದೇಶಕರಾದ ರಾಮ್ ಕಿಶೋರ್ ಮಂಚಿ, ಬಾಳೆಹಣ್ಣು ಮತ್ತು ಜಾಕ್ಫ್ರೂಟ್ನಂತಹ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಗಾಗಿ ರೈತ ಉತ್ಪಾದಕ ಕಂಪನಿಗಳ ರಚನೆ ಮತ್ತು ನಡೆಸುತ್ತಿರುವ ಅನುಭವಗಳನ್ನು ಹಂಚಿಕೊಂಡರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಪ್ರಕಾಶ್, ರೈತ ಉತ್ಪಾದಕ ಕಂಪನಿ (ಎಫ್ಪಿಒ)ಗಳನ್ನು ರಚಿಸುವುದಕ್ಕಾಗಿ ರೈತರಿಗೆ ನೀಡುವ ಪ್ರೋತ್ಸಾಹದ ಕುರಿತು ಮಾಹಿತಿ ಕೊಟ್ಟರು.
ಈ ಸಂದರ್ಭದಲ್ಲಿ ದೇವಿಪ್ರಸಾದ್ ಕಲ್ಲಾಜೆ, ಪುಣಚದ ಗೇರು ಕೃಷಿಕ ಅವರು ತಮ್ಮ ರೈತ ಸ್ನೇಹಿತರೊಂದಿಗೆ ಎಫ್ಪಿಒ ರಚನೆ ಮಾಡುವಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಗೇರು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಎಂ.ಜಿ.ನಾಯಕ್ ಸ್ವಾಗತಿಸಿ ನಿರ್ದೇಶನಾಲಯದ ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕಾರ್ಯಕ್ರಮವನ್ನು ಸಂಯೋಜಿಸಿದರು.