ಹುರುಳಿ ಚಟ್ನಿ:
ಬೇಕಾಗುವ ಸಾಮಾನು: 1/2 ಕಪ್ ಹುರುಳಿ, ಅರ್ಧ ಹೋಳು ತೆಂಗಿನಕಾಯಿ, ಒಣಮೆಣಸು 6, ಹುಣಿಸೆಹಣ್ಣು ಸಣ್ಣ ನೆಲ್ಲಿ ಗಾತ್ರ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಸಾಸಿವೆ, ಮೆಣಸಿನಕಾಯಿ, ಕರಿಬೇವು. ಎಣ್ಣೆ.
ಮಾಡುವ ವಿಧಾನ: ಹುರುಳಿಯನ್ನು ಎಣ್ಣೆ ಹಾಕದೆ ಹುರಿಯಿರಿ. ಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಹುರಿಯಿರಿ. ತೆಂಗಿನತುರಿ, ಹುಣಿಸೆಹಣ್ಣು, ಉಪ್ಪು, ಹುರಿದ ಮೆಣಸಿನಕಾಯಿ ಮತ್ತು ಹುರುಳಿಯನ್ನು ಗಟ್ಟಿಯಾಗಿ ರುಬ್ಬಿಕೊಂಡು ಅದಕ್ಕೆ ಸಾಸಿವೆ ಒಗ್ಗರಣೆ ಹಾಕಿದರೆ ರುಚಿಯಾದ ಹುರುಳಿ ಚಟ್ನಿ ತಯಾರು.
ಹುರುಳಿ ಸಾರು:
ಬೇಕಾಗುವ ಸಾಮಾನು: 1 ಕಪ್ ಹುರುಳಿ , ತೆಂಗಿನ ತುರಿ 1 ಟೇಬಲ್ ಚಮಚ, ಕೊತ್ತಂಬರಿ, 5 ಒಣ ಮೆಣಸಿನಕಾಯಿ, 1ಗೆಡ್ಡೆ ಬೆಳ್ಳುಳ್ಳಿ , ನೆಲ್ಲಿಕಾಯಿ ಗಾತ್ರ ಹುಣಿಸೆಹಣ್ಣು, ಬೆಲ್ಲ , ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಹುರುಳಿಯನ್ನು ಬೇಯಿಸಿ ಬಸಿದ ನೀರಿಗೆ ಹುಣಿಸೆಹಣ್ಣು, ಉಪ್ಪು,ಬೆಲ್ಲ ಹಾಕಿ ಕುದಿಸಿ. ತೆಂಗಿನ ತುರಿ, ಕೊತ್ತಂಬರಿ ಮತ್ತು ಮೆಣಸಿನ ಕಾಯಿಯನ್ನು 1ಚಮಚ ಹುರುಳಿಯನ್ನು ಸೇರಿಸಿ ರುಬ್ಬಿಕೊಂಡು ಅದನ್ನು ಕುದಿಸಿದ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಆ ನಂತರ ಬೆಳ್ಳುಳ್ಳಿ ಮತ್ತು ಕರಿಬೇವು ಒಗ್ಗರಣೆ ಹಾಕಬೇಕು.
ಹುರುಳಿ ಉಸುಲಿ:
ಬೇಕಾಗುವ ಸಾಮಾನು : ಬೇಯಿಸಿದ ಹುರುಳಿ 1 ಕಪ್, ತೆಂಗಿನ ತುರಿ ಅರ್ಧ ಕಪ್, ಬೆಲ್ಲ ಅಥವಾ ಸಕ್ಕರೆ, ಒಗ್ಗರಣೆಗೆ ಉದ್ದಿನಬೇಳೆ, ಸಾಸಿವೆ ಮೆಣಸು, ಕರಿಬೇವು.
ಮಾಡುವ ವಿಧಾನ: ಬೇಯಿಸಿದ ಹುರುಳಿಯನ್ನು ಮಿಕ್ಸಿಯಲ್ಲಿ ಒಮ್ಮೆ ತಿರುಗಿಸಿ . ಬಾಣಲೆಯಲ್ಲಿ ಎಣ್ಣೆ ಹಾಕಿ ಉದ್ದಿನಬೇಳೆ, ಸಾಸಿವೆ, ಮೆಣಸು, ಕರಿಬೇವು ಹಾಕಿ. ಸಾಸಿವೆ ಸಿಡಿದ ಮೇಲೆ ಹುರುಳಿ, ಸಕ್ಕರೆ, ತೆಂಗಿನತುರಿ ಹಾಕಿ ಮಗುಚಿ. ಬಿಸಿ ಬಿಸಿಯಾಗಿ ತಿನ್ನಲು ರುಚಿಯಾಗಿರುತ್ತದೆ.
ಹುರುಳಿ ದೊಡ್ನ
ಬೇಕಾಗುವ ಸಾಮಾನು: 2 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ಹುರುಳಿ, 2 ಚಮಚ ಉದ್ದಿನಬೇಳೆ ಉಪ್ಪು, ಕರಿಬೇವು 1 ಕಟ್ಟು, ಸಾಸಿವೆ ಮತ್ತು ಎಣ್ಣೆ.
ಮಾಡುವ ವಿಧಾನ: ಬೆಳ್ತಿಗೆ ಅಕ್ಕಿ ಯನ್ನು, ಹುರುಳಿ, ಉದ್ದಿನಬೇಳೆಯನ್ನು ಬೇರೆ ಬೇರೆಯಾಗಿ 3 ಗಂಟೆ ನೆನೆಸಿಡಿ. ಆನಂತರ ಬೇರೆ ಬೇರೆಯಾಗಿ ರುಬ್ಬಿಕೊಳ್ಳಿ. ಎರಡನ್ನು ಬೆರೆಸಿ 8 ಗಂಟೆ ಹಾಗೆ ಇಡಿ. ಮರುದಿನ ಬಾಣಲೆಗೆ ಎಣ್ಣೆ ಹಾಕಿ ಕಾದಾಗ ಕಾಲು ಚಮಚ ಸಾಸಿವೆ ಮತ್ತು 1 ಎಸಳು ಕರಿಬೇವು ಹಾಕಿ ಸಾಸಿವೆ ಸಿಡಿದ ನಂತರ ಹಿಟ್ಟನ್ನು ಚೆನ್ನಾಗಿ ಕಲಸಿ 1 ಸೌಟು ಹಿಟ್ಟು ಬಾಣಲೆಗೆ ಹಾಕಿ ಮುಚ್ಚಿಡಿ. ಬೆಂದ ನಂತರ ಎಣ್ಣೆ ಹಾಕಿ ಮಗುಚಿ ಹಾಕಿ ಎರಡು ಬದಿ ಬೇಯಿಸಿ. ಪ್ರತಿ ಸಲವು ಮೊದಲು ಒಗ್ಗರಣೆ ಹಾಕಿಕೊಂಡು ಸಾಸಿವೆ ಸಿಡಿದ ನಂತರ ಹಿಟ್ಟು ಹಾಕಿ ದೊಡ್ನ (ಬಾಣಲೆ ದೋಸೆ)ಮಾಡಿ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ತಿನ್ನಬೇಕು.
ಬರಹ : ಚಿತ್ರಾ ಮಟ್ಟಿ