ಎಲ್ಲವೂ ಕೃಷಿಯೇ….!
ಇಂದಿನ ದಿನಗಳಲ್ಲಿ ಯಾವುದರಿಂದ ಆದಾಯ ಪಡೆಯಲಿಕ್ಕಾಗುತ್ತದೋ ಅದೆಲ್ಲವೂ ಕೃಷಿಯೇ ಆಗಿದೆ…..!. ಕೃಷಿಯನ್ನು ಕೃಷಿಯೆಂದೇ ನಂಬುವವರು ಇನ್ನೂ ಅಲ್ಲೇ ಇದ್ದಾರೆ. ಯಾವಾಗ ಕೃಷಿಯನ್ನು ವ್ಯವಹಾರದ ದೃಷ್ಟಿಯಿಂದ ನಿಭಾಯಿಸಲು ಸಮರ್ಥರಾಗುತ್ತೇವೋ ಅಂದು ಗೆಲುವು ನಿಶ್ಚಿತ. ಒಂದೊಂದು ಹೆಜ್ಜೆ ಮೇಲೆ ಹತ್ತ ತೊಡಗುತ್ತೇವೆ. ನಮ್ಮ ಪ್ರತಿಯೊಂದು ಖರ್ಚಿನ ಮೇಲು ಹಿಡಿತವಿರುತ್ತದೆ. ಯಾಕೆಂದರೆ ಅಲ್ಲಿ ಬೆವರಿನ ಹನಿಯಿದೆ, ಪರಿಶ್ರಮದ ಪ್ರತಿಫಲವಿದೆ. ಒಂದು ರೂಪಾಯಿ ಖರ್ಚು ಮಾಡಲೂ ಯೋಚಿಸುತ್ತೇವೆ. ವ್ಯರ್ಥವಾಗಿ ಕಳೆಯಲು ಮನಸೇ ಬಾರದು.
ಈಗ ಹೆಚ್ಚು ಪರಿಶ್ರಮವಿಲ್ಲದೆ ಶ್ರೀಮಂತರಾಗುವ ವೃತ್ತಿಯೆಂದರೆ ರಾಜಕಾರಣ. ಹೀಗೆ ಹೇಳಬಾರದು ಎಂದು ಅಂದುಕೊಂಡಿದ್ದೆವು. ಆದರೆ ಇಂದಿನ ಪರಿಸ್ಥಿತಿ ಹಾಗಾಗಿದೆ. ಸಜ್ಜನ ರಾಜಕಾರಣಿಗಳು ಬದಿಗೆ ಸರಿಯುತ್ತಾರೆ, ಸರಿಸುತ್ತಾರೆ. ಅಭಿವೃದ್ಧಿ ಕಾಳಜಿ ಇರುವವರು ದೂರವಾಗುತ್ತಾರೆ, ದೂರವಾಗಿಸುತ್ತಾರೆ. ಏಕೆಂದರೆ ರಾಜಕಾರಣದಲ್ಲಿ ಒಮ್ಮೆ ಆದಾಯದ ರುಚಿ ಸಿಕ್ಕರೆ ಸಾಕು ಅದು ರೋಡು ಸರಿ-ತೋಡೂ ಸರಿ. ಅದು ರೋಗವಾದರೂ ಸರಿ..!. ಎಲ್ಲಿ ದುಡ್ಡು ಮಾಡಲಾಗುತ್ತದೋ ಅಲ್ಲಿಗೆ ದೊಡ್ಡ ದೊಡ್ಡ ಬಜೆಟ್…! ದೊಡ್ಡ ಅನುದಾನ…!. ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ. ಇದಕ್ಕೆ ಕಣ್ಣೆದುರೇ ದೃಷ್ಟಾಂತವಿದೆ. ನಮ್ಮ ಊರು ಕೇರಿಗಳಲ್ಲಿರುವ ಮಾರ್ಗಗಳು ಅವಗಾವಾಗ ಹೊಸತಾಗುತ್ತದೆ, ಕಾಂಕ್ರೀಟ್ ಆಗುತ್ತದೆ. ಮೇಲ್ಮೈ ಗೆ ಡಾಮಾರು ಹೊದ್ದು ನುಣುಪಾಗಿ ಮಿಂಚುತ್ತಿರುತ್ತದೆ. ಒಂದು ಮಳೆಗಾಲ ಕಳೆಯುವುದರೊಳಗೆ ಮತ್ತೆ ಅದೇ ಪಾಡು. ಅಲ್ಲಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತವೆ. ನೀರು ತುಂಬಿ ರೋಡು ಯಾವುದು , ಗುಂಡಿ ಯಾವುದು ಎಂಬ ಅರಿವು ಆಗದಷ್ಟು ಹಾಳಾಗಿ ಬಿಡುತ್ತದೆ. ಸರಿಯಾಗಿ ಮಾಡಿದರೆ ಆದಾಯದ ಮೂಲಕ್ಕೆ ಎಲ್ಲಿ ಧಕ್ಕೆ ಬರುತ್ತದೋ ಎಂದು ಕಳಪೆ ಕಾಮಗಾರಿಗೆ ಅನುಮತಿ ಕೊಟ್ಟು ಪ್ರತೀ ವರ್ಷ ದುಡ್ಡು ಮಾಡುವ ಅಂದಾಜು. ದೊಡ್ಡ ಮಟ್ಟದಲ್ಲಿ ನಡೆಯುವ ಕೊಡು ಕೊಳ್ಳುವ ಮಾತುಕಥೆಗಳು ಜನಸಾಮಾನ್ಯರ ಗಮನಕ್ಕೂ ಬಾರದು, ಅರ್ಥವೂ ಆಗದು. ಇದನ್ನು ಪ್ರಶ್ನಿಸುವ ಸಜ್ಜನ ರಾಜಕಾರಣಿ ಬೇಕಾಗಿಲ್ಲ, ಇದ್ದರೂ ಅಂತಹವರನ್ನು ಬದಿಗೆ ಸರಿಸಿ ಗಾಳಿ ತೆಗದುಬಿಡುತ್ತಾರೆ… ! ಬಿಡಿ ಆ ಸಂಗತಿ.