ಸುಳ್ಯ : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ರೆಡಿಯೋಲಾಜಿಸ್ಟ್ ಆಗಿರುವ ಡಾ| ರಾಮಕಿಶೋರ್ ಕಾನಾವು ಅವರು ಲಂಡನ್ ಪ್ರತಿಷ್ಠಿತ ರಾಯಲ್ ಕಾಲೇಜು ಆಫ್ ರೆಡಿಯೋಲಾಜಿಸ್ಟ್ಸ್ ವೈದ್ಯಕೀಯ ಪರೀಕ್ಷೆಯಲ್ಲಿ (ಎಫ್ ಆರ್ ಸಿಆರ್ ಯುಕೆ) ಉತ್ತಮ ಅಂಕ ಪಡೆದು ತೇರ್ಗಡೆ ಹೊಂದಿ ಸಾಧನೆ ತೋರಿದ್ದಾರೆ.
ಪ್ರಗತಿಪರ ಕೃಷಿಕ ತಿರುಮಲೇಶ್ವರ ಭಟ್ ಕಾನಾವು ಮತ್ತು ಅನಿತಾ ಟಿ.ಭಟ್ ಕಾನಾವು ಅವರ ಪುತ್ರನಾಗಿರುವ ಇವರು, ಮುಕ್ಕೂರು ಸ.ಹಿ.ಪ್ರಾ.ಶಾಲೆ, ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರ, ಅಳಿಕೆ ಸತ್ಯಸಾಯಿ ವಿದ್ಯಾಕೇಂದ್ರಗಳಲ್ಲಿ ಪ್ರಾಥಮಿಕ, ಪ್ರೌಢ, ಪಿಯು ಶಿಕ್ಷಣ ಪೂರೈಸಿ ಆ ಬಳಿಕ ಎಸ್ಎಸ್ ಮೆಡಿಕಲ್ ಕಾಲೇಜು ದಾವಣೆಗೆರೆಯಲ್ಲಿ ಎಂಬಿಬಿಎಸ್ ಪದವಿ ಪಡೆದರು. ಅನಂತರ ಅರ್ ಮೇನಿಯಾದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ (ಎಂ.ಡಿ) ಪಡೆದರು. ಪ್ರತಿಷ್ಠಿತ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ರೆಡಿಯೋಲಾಜಿಸ್ಟ್ ಆಗಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಪ್ರಸ್ತುತ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ರೆಡಿಯೋಲಾಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಪುತ್ತೂರು ಸಿಟಿ ಆಸ್ಪತ್ರೆ (ಪಿಸಿಎಚ್) ಇದರ ಪಾಲುದಾರರಾಗಿದ್ದಾರೆ.
ಪತ್ನಿ ಡಾ|ಅಂಬಿಕಾ ಕಾನಾವು ಅವರು ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.