ಇದೊಂಥರಾ ಸಣ್ಣ ಕಥೆಯೇ… ಆದರೆ ವಾಸ್ತವ. ಓದುತ್ತಾ ಸಾಗಿದರೆ ಒಂದು ಕಿರು ಚಿತ್ರವೇ ನಿರ್ಮಾಣವಾದೀತು. ನಮಗೆ ಈ ಸುದ್ದಿಯನ್ನು ಕಳುಹಿಸಿದ್ದು ವಿದ್ಯಾ ಆರ್ಟ್ ಕ್ರಿಯೇಶನ್ ನ ಹರೀಶ್ ಪುತ್ತೂರು. ಇದು ಓದಿದ ಬಳಿಕ ಇಂತಹ ಯುವಕರು ಹೀರೋಗಳು ಎನಿಸಿದೆ. ಏಕೆಂದರೆ ಈ ಲಾಕ್ಡೌನ್ ಅನೇಕರಿಗೆ ಪ್ರಚಾರಕ್ಕೂ ಕಾರಣವಾಗಿದೆ. ಅನೇಕ ಪಕ್ಷಗಳಿಗೆ, ಕೆಲವು ನಾಯಕರುಗಳಿಗೆ ಪ್ರಚಾರಕ್ಕಾಗಿಯೇ ಕೆಲವೊಂದು ಸಂಗತಿಗಳನ್ನು ಮಾಡಿದ್ದಾರೆಯೇ ಎನಿಸುವಷ್ಟು ಭಾಸವಾಗಿದೆ. ಇಂತಹ ಸಂದರ್ಭದಲ್ಲಿ ಈ ಯುವಕರ ಮಾನವೀಯ ಕಾರ್ಯಕ್ಕೆ ನಾವು ಬೆಳಕು ನೀಡುತ್ತಿದ್ದೇವೆ. ಇಂತಹ ಕಾರ್ಯಗಳಿದ್ದರೆ ನಮಗೆ ನೀವೂ ಕಳುಹಿಸಿಕೊಡಬಹುದು.
ಈ ಸುದ್ದಿಯನ್ನು ತಿಳಿಸಿದ ವಿದ್ಯಾ ಆರ್ಟ್ ಕ್ರಿಯೇಶನ್ ನ ಹರೀಶ್ ಪುತ್ತೂರು ಅವರಿಗೆ ಧನ್ಯವಾದ. ಆ ಯುವಕರ ತಂಡಕ್ಕೂ ಅಭಿನಂದನೆ
ಅವರಿಗೆ ಕಾಲ್ನಡಿಗೆಯಲ್ಲಿ ಆ ಕ್ಷಣ ಅನುಭವ ಆಗಿದ್ದು ಅನಾಥ ಎಂಬ ಭಾವನೆ. ಹೀಗೆ ದಾರಿಯಲ್ಲಿ ಸಾಗಬೇಕಾದರೆ ಒಂದಲ್ಲ ಎರಡಲ್ಲ ಮೂರು ದಿನಗಳು ಕಳೆಯಿತು. ದೇಹ ಸೋತಿತು. ಆದರೆ ಕುಟುಂಬ ಸೇರುವ ತವಕ, ಗುರಿ ಮನಸ್ಸನ್ನು ಸೋಲಲು ಬಿಡಲಿಲ್ಲ. ಆಗ ಸಿಕ್ಕಿದ ಸಹಾಯ ಬೆಂಗಳೂರು ತಲುಪಿಸಿತು. ಮನೆ ಸೇರುವಂತೆ ಮಾಡಿತು.
ಇದು ಕೇವಲ ಕಥೆಯಲ್ಲ ಒಬ್ಬ ಮನುಷ್ಯ ಜೀವನದ ಕತೆ-ವ್ಯಥೆ. ಹೊಟ್ಟೆಪಾಡಿ ಗಾಗಿ ತನ್ನ ಜೀವನ ಸಾಗಿಸುವುದಕ್ಕಾಗಿ ತನ್ನ ಮನೆ ಮಂದಿಯನ್ನು ಸಾಕುವುದಕ್ಕಾಗಿ ಊರು ಬಿಟ್ಟು ಇನ್ನೊಂದು ಊರಿಗೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಗಳು. ಕೆಲಸದ ನಿಮಿತ್ತ ಊರಿಂದ ಅದೇಷ್ಟೊ ಕಿಲೋ ಮೀಟರ್ ದೂರದ ಊರಿಗೆ ತೆರಳಿ ಅಲ್ಲಿ ಸಿಕ್ಕ ಕೆಲಸದಲ್ಲಿ ತೊಡಗಿಸಿಕೊಂಡು ಸಂಬಳ ಸಿಕ್ಕಿದಾಗ ತನ್ನೂರಿಗೆ ತೆರಳಿ ಹೆಂಡತಿ ಮಕ್ಕಳ ಜೊತೆ ಒಂದೆರಡು ದಿನ ಕಳೆದು ಮತ್ತೆ ಅದೇ ಕೆಲಸಕ್ಕೆ ಮನೆ ಬಿಟ್ಟು ಬರುವ ಪರಿಸ್ಥಿತಿ ಅನೇಕರದು.
ಮೊನ್ನೆ ಮೊನ್ನೆ ಕೊರೊನಾ ಕಾರಣದಿಂದ ವೈರಸ್ ಹರಡುವುದು ತಡೆಯಲು ದೇಶದ ಪ್ರಧಾನಿಗಳು ದೇಶವೆ ಲಾಕ್ಡೌನ್ ಎಂಬ ಘೋಷಣೆಯನ್ನು ಮಾಡ್ತಾರೆ. ಒಂದೆರಡು ವಾರಗಳ ಕಾಲ ಲಾಕ್ಡೌನ್ ಘೋಷಣೆಯಾದರೂ ಇದು ದಿನದಿಂದ ದಿನಕ್ಕೆ ಮುಂದುವರಿಯುತ್ತಾ ಹೋಗುತ್ತದೆ. ಬಸ್ ಸಂಚಾರ ಇಲ್ಲ , ರೈಲು ಸಂಚಾರ ಬಂದ್. ಹೀಗೆ ದೇಶಕ್ಕೆ ದೇಶವೆ ಬಂದ್ ಆಗಿದೆ. ಊರಿಗೆ ತೆರಳುವುದಕ್ಕೆ ಆಗದೆ, ಇದ್ದ ಜಾಗದಲ್ಲಿಯೆ ಕೆಲವು ದಿನ ಆಶ್ರಯ ಪಡೆಯಬೇಕಾದ ಪರಿಸ್ಥಿತಿ, ಇನ್ನು ಕೆಲವರು ಸಂಬಂಧಿಕರ ಮನೆ ಸೇರಿಕೊಂಡು ಲಾಕ್ ಡೌನ್ ಮುಗಿಯುವವರೆಗೂ ದಿನ ಕಳೆಯಬೇಕಾದ ಅನಿವಾರ್ಯತೆ.
ಆದರೆ ಒಬ್ಬಂಟಿಯಾಗಿ ಕೂಲಿ ಕೆಲಸಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಒಬ್ಬಾತ ಆಗಮಿಸಿದ್ದ. ಈತ ಲಾಕ್ಡೌನ್ ಆದ ಒಂದು ವಾರಗಳ ಕಾಲ ಕೆಲಸ ಮಾಡುವ ಸ್ಥಳದಲ್ಲಿಯೇ ದಿನ ಕಳೆದ. ದೇಶ ಯಾವಾಗ ಓಪನ್ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ. ಕೂಲಿ ಕೆಲಸಕ್ಕೆಂದು ಬಂದು ಸಂಬಳ ತಗೊಂಡು ಒಂದು ವಾರಗಳ ಕಾಲ ಈತ ಕೆಲಸ ಮಾಡುವ ಸ್ಥಳದಲ್ಲಿಯೆ ದಿನಕಳೆದ. ಕೈಯಲ್ಲಿದ್ದ ಹಣ ಖಾಲಿ, ಮುಂದೆ ಏನು ಮಾಡೋದು? ಲಾಕ್ಡೌನ್ ಸದ್ಯಕ್ಕೆ ತೆರವುಗೊಳಿಸಲ್ಲ ಇದು ಮತ್ತಷ್ಟು ದಿನ ಮುಂದುವರಿಯುವ ಲಕ್ಷಣ ಕಂಡಾಗ ಈತ ತನ್ನೂರಿನತ್ತ ಹೊರಟು ಹೋಗುತ್ತಾನೆ. ಊರಿನತ್ತ ಹೋಗುವುದಕ್ಕೆ ಯಾವುದೇ ವಾಹನ ಇಲ್ಲ, ರಸ್ತೆಗಳು ಬಿಕೋ ಎನ್ನುತ್ತಿವೆ ಹಸಿದರೆ ಅನ್ನ ಇಲ್ಲ ಕುಡಿಯಲು ನೀರು ಇಲ್ಲ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿವೆ, ಛೇ…ಏನ್ ಮಾಡೋದು ಎಂದು ಯೋಚಿಸಿದ ಈತ ಊರಿಗೆ ಹೊರಟ ಮಾತ್ರಕ್ಕೆ ನಿಲ್ಲದೆ ನೇರವಾಗಿ ರಸ್ತೆಯುದ್ದಕ್ಕೂ ಕಾಲ್ನಡಿಗೆಯಲ್ಲಿ ಸಾಗುತ್ತಾನೆ.
ಮಂಗಳೂರಿನಿಂದ ಹೊರಟ ಈ ಕೂಲಿ ಕಾರ್ಮಿಕ ಉಜಿರೆ ಮಾರ್ಗವಾಗಿ ಚಾರ್ಮಾಡಿ ಘಾಟ್ ಸಂಚರಿಸಿ ಸಕಲೇಶಪುರ ಸೇರುತ್ತಾನೆ. ಆಗಲೆ ಮೂರು ದಿನಗಳು ಕಾಲ್ನಡಿಗೆಯಲ್ಲಿ ಕಳೆದಿವೆ. ಆಹಾರ ಇಲ್ಲದೆ, ಕುಡಿಯಲು ನೀರು ಇಲ್ಲದೆ ಬೆನ್ನು ಮೇಲೆ ಒಂದು ಬ್ಯಾಗ್ ಹಾಕಿಕೊಂಡು ಪ್ಯಾಂಟ್ – ಟೀ ಶರ್ಟ್ ಧರಿಸಿರುವ ಈತ ಮಂಗಳೂರಿನಿಂದ ಹೊರಟು ಮೂರು ದಿನಗಳ ಬಳಿಕ ಸಕಲೇಶಪುರ ತಾಲೂಕನ್ನು ಸೇರುತ್ತಾನೆ. ಕಣ್ಣಿಗೆ ನಿದ್ದೆಯಿಲ್ಲದೆ ಹೊಟ್ಟೆಗೆ ಅನ್ನವಿಲ್ಲದೆ ಮೂರು ದಿನಗಳಿಂದ ರಸ್ತೆಯಲ್ಲಿ ಸಾಗುವ ಈತನ ಪರಿಸ್ಥತಿಯನ್ನು ಯಾರೊಬ್ಬರು ವಿಚಾರಿಸಿಲ್ಲ. ಯಾರೊಬ್ಬರು ಈತನಿಗೆ ಸ್ಪಂದಿಸಲಿಲ್ಲ.
ಸಕಲೇಶಪುರ ತಾಲೂಕು ತಲುಪಿದ ಈತನ ಕಣ್ಣಿಗೆ ನಾಲ್ಕು ಜನರಿರುವ ಯುವಕರ ಗುಂಪೊಂದು ಕಾಣುತ್ತದೆ. ಲಾಕ್ಡೌನ್ ದಿನಗಳಲ್ಲಿ ಅನ್ನ ನೀರು ಇಲ್ಲದವರಿಗೆ ಉಪಹಾರ ನೀಡಿ ಹಸಿವು ತಣಿಸುವ ಒಂದು ತಂಡ ಸಕಲೇಶಪುರ ತಾಲೂಕಿನ ಒಂದು ರಸ್ತೆ ಬದಿಯಲ್ಲಿ ಈತನ ಕಣ್ಣಿಗೆ ಕಾಣುವ ಯುವಕರ ತಂಡವಿದು.
ಯಾರೊಬ್ಬರು ತನ್ನ ಸಮಸ್ಯೆಯನ್ನು ವಿಚಾರಿಸದ ಈ ಮೂರು ದಿನಗಳಲ್ಲಿ ಇವರೇನು ವಿಚಾರಿಸಲಾರರು ಎಂದುಕೊಂಡು ಯುವಕರ ಕಣ್ಣು ಮುಂದೆಯೇ ಸಾಗಬೇಕಾದರೆ ಈ ಯುವಕರ ತಂಡ ಆತನನ್ನು ನಿಲ್ಲಿಸಿ ಮೊದಲಿಗೆ ನೀರು ಮತ್ತು ಉಪಹಾರ ನೀಡುತ್ತಾರೆ. ಯುವಕರು ಕೊಟ್ಟ ನೀರಿನ ಬಾಟಲಿ ಮತ್ತು ಉಪಹಾರದ ಪ್ಯಾಕೇಟ್ ಕೂಲಿ ಕಾರ್ಮಿಕನ ಕೈಸೇರುತ್ತಿದ್ದಂತೆ ಈತನ ಕಣ್ಣಂಚಿಗಳು ತುಂಬಿಹೋದವು.
ಇದನ್ನೆಲ್ಲ ಅರಿತ ಯುವಕ ತಂಡ ಈತನನ್ನು ವಿಚಾರಿಸಲಾರಂಭಿಸುತ್ತಾರೆ. ವಿಷಯ ತಿಳಿಸಿದ ಈತ ಎಲ್ಲವನ್ನು ಮುಕ್ತವಾಗಿ ಯುವಕರ ಜೊತೆ ಹಂಚಿಕೊಳ್ಳುತ್ತಾನೆ. ರಕ್ಷತ್ ಮತ್ತು ಇವರ ತಂಡ ಈತನ ಸಮಸ್ಯೆಗಳಿಗೆ ಸ್ಪಂದಿಸಿ ಪೋಲಿಸರಿಗೆ ಮಾಹಿತಿ ನೀಡಿ ನಂತರ ಈತನನ್ನು ಒಂದು ಖಾಸಗಿ ವಾಹನವೊಂದರಲ್ಲಿ ಬೆಂಗಳೂರಿಗೆ ಕಳುಹಿಸಿಕೊಡುತ್ತಾರೆ.
ರಸ್ತೆ ಬದಿಯಲ್ಲಿ ನಿಂತು ವಾಹನ ಚಾಲಕರಿಗೆ ಉಪಹಾರ ನೀಡುವ ಕೈಗಳು ಒಬ್ಬ ಕೂಲಿ ಕಾರ್ಮಿಕನನ್ನು ತನ್ನ ಮನೆಗೆ ತಲುಪಿಸುವಲ್ಲಿ ಸಹ ಯಾವುದೇ ಪ್ರಚಾರವಿಲ್ಲದೆ ಸಹಕರಿಸುತ್ತಿವೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಒಬ್ಬ ಬಡವನ ಹೃದಯಲ್ಲಿ ಈ ಯುವಕರ ಸಹಕಾರ ಈಗ ಎಲ್ಲರಿಗೂ ಮಾದರಿಯಾಗಿದೆ.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸಿಬಂದಿ ವರ್ಗದವರ ಜಂಟಿ…
ನವೆಂಬರ್ 9 ಅಥವಾ 10 ರಿಂದ ದಕ್ಷಿಣ ಕರ್ನಾಟಕದಲ್ಲಿ ಹಿಂಗಾರು ಮಳೆ ಮತ್ತೆ…
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅರಣ್ಯ, ಪರಿಸರ ಸಚಿವ ಈಶ್ವರ ಬಿ.ಖಂಡ್ರೆ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024025 ನೇ ಸಾಲಿನಲ್ಲಿ ಎಫ್‌ಎಕ್ಯೂ ಗುಣಮಟ್ಟದ…
ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ,…