ಸುಳ್ಯ: ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಮಂಗಳವಾರ ತಾಪಂ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಗಂಭೀರವಾದ ಸಮಸ್ಯೆಯೊಂದಕ್ಕೆ ಅಧಿಕಾರಿಗಳು ಉತ್ತರಿಸಿದ್ದು ಹೀಗೆ, ಸಂಬಂಧಪಟ್ಟವರಿಗೆ ವರದಿ ಸಲ್ಲಿಸಲಾಗಿದೆ…..ಮಾಹಿತಿ ನೀಡಲಾಗಿದೆ…. ಪರಿಶೀಲನೆ ನಡೆಸಲಾಗಿದೆ…. ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿದೆ…!. ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿ ಯಾವಾಗ ಬರುವುದು ಎಂಬ ಪ್ರಶ್ನೆಗೆ ಮೌನವೇ ಉತ್ತರ…!
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಶೋಕ್ ನೆಕ್ರಾಜೆ ಸುಬ್ರಹ್ಮಣ್ಯದ ಲಾಡ್ಜ್ ಗಳಿಂದ ತ್ಯಾಜ್ಯ ನೀರು ನದಿಗೆ ಹರಿಯುತ್ತಿರುವುದರ ಕುರಿತು ಹಲವು ತಿಂಗಳ ಹಿಂದೆಯೇ ಸಭೆಯಲ್ಲಿ ಪ್ರಸ್ತಾಪಿಸಿ ಕ್ರಮಕ್ಕೆ ಆಗ್ರಹಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿಗಳು, ಸುಬ್ರಹ್ಮಣ್ಯ ಮತ್ತು ಸುಳ್ಯದಲ್ಲಿ ನದಿಗಳಿಗೆ ತ್ಯಾಜ್ಯ ಮತ್ತು ಕೊಳಚೆ ಬಿಡುವುದು ಕಂಡು ಬಂದಿದೆ. ಈ ಕುರಿತು ಸಂಬಂಧಪಟ್ಟವರಿಗೆ ವರದಿ ಸಲ್ಲಿಸಲಾಗಿದ್ದು. ಗ್ರಾಮ ಪಂಚಾಯತ್ ಅಥವಾ ನಗರ ಪಂಚಾಯತ್ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸುಬ್ರಹ್ಮಣ್ಯದಲ್ಲಿ ಕೊಳಚೆ ನೀರು ನದಿಗೆ ಬಿಡುವುದರ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ಬಂದಿದೆ. ಹಿಂದಿನ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದ್ದರು ಎಂದು ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಸಭೆಗೆ ತಿಳಿಸಿದರು.
ನೀರು ಕಲುಷಿತಗೊಂಡು ಆರೋಗ್ಯದ ಸಮಸ್ಯೆ ಉಂಟಾಗುವ ಗಂಭೀರ ವಿಷಯವಾಗಿದ್ದರೂ ಅಧಿಕಾರಿಗಳು ಕೇವಲ ನೋಟೀಸ್ ನೀಡಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ ಎಂದು ಸದಸ್ಯರಾದ ಅಶೋಕ್ ನೆಕ್ರಾಜೆ, ಅಬ್ದುಲ್ ಗಫೂರ್ ಹೇಳಿದರು.
ಕೆಲವು ಕಡೆ ರಬ್ಬರ್ ಫ್ಯಾಕ್ಟರಿಗಳಿಂದಲೂ ಕೊಳಚೆ ನದಿಗೆ ಬಿಡುವ ಪ್ರಸಂಗ ಕಂಡು ಬಂದಿದ್ದು ಇದರ ಕುರಿತು ಸೂಕ್ತವಾದ ಕ್ರಮ ಜರುಗಿಸಬೇಕು ಎಂದು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಒತ್ತಾಯಿಸಿದರು.
ಈ ಕುರಿತು ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಿದ ಅಧ್ಯಕ್ಷ ಚನಿಯ ಕಲ್ತಡ್ಕ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪ್ರಕೃತಿ ವಿಕೋಪ ವರದಿಯಿಂದ ಸಮಸ್ಯೆ ಸೃಷ್ಠಿಸಬೇಡಿ: ಪ್ರಕೃತಿ ವಿಕೋಪದಡಿಯಲ್ಲಿ ಮನೆ ಹಾನಿಯಾದವರಿಗೆ ಸೂಕ್ತ ಪರಿಹಾರ ಸಿಗುವ ನಿಟ್ಟಿನಲ್ಲಿ ಸಮರ್ಪಕ ವರದಿ ಕೊಡಿ. ಮನೆ ಭಾಗಷಃ ಹಾನಿಯಾಗಿದೆ ಎಂಬ ವರದಿಯಿಂದ ಜನರಿಗೆ ತೊಂದರೆ ಉಂಟಾಗುತಿದೆ ಎಂದು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಹೇಳಿದರು. ಒಂದು ಮನೆಯ ಗೋಡೆ ಅಥವಾ ಇತರ ಪ್ರಮುಖ ಭಾಗಗಳಿಗೆ ಹಾನಿ ಆಗಿದ್ದರೆ ಅಂತಹಾ ಮನೆಯಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ಅಂತಹಾ ಸಂದರ್ಭದಲ್ಲಿ ಭಾಗಷಃ ಹಾನಿ ಅಂತ ವರದಿ ನೀಡಿದರೆ ಫಲಾನುಭವಿಗಳಿಗೆ ಅನ್ಯಾಯ ಆಗುತ್ತದೆ. ವರದಿಯಿಂದ ಫಲನುಭವಿಗಳಿಗೆ ಸಮಸ್ಯೆ ಸೃಷ್ಠಿಸಬೇಡಿ. ಅಂತಹಾ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಸರಿಯಾದ ವರದಿಯನ್ನು ಕೊಡಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಇದಕ್ಕೆ ಉತ್ತರಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಸರಕಾರದ ನಿರ್ದೇಶನದಂತೆ ಮನೆ ಹಾನಿಯನ್ನು ದಾಖಲಿಸಲಾಗುತ್ತಿದ್ದು ತಾಲೂಕಿನಲ್ಲಿ ಒಟ್ಟು 74 ಮನೆಗಳಿಗೆ ಹಾನಿಯಾಗಿದೆ ಎಂದು ಗುರುತಿಸಲಾಗಿದೆ ಇದರಲ್ಲಿ 21 ಮನೆಗಳು ಪೂರ್ಣ ಹಾನಿ ಸಂಭವಿಸಿದೆ. ಏಳು ಕುಟುಂಬಗಳಿಗೆ ತಲಾ 10 ಸಾವಿರದಂತೆ ತುರ್ತು ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು. ಉಳಿದ ಮನೆಗಳ ಜಿಪಿಎಸ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಸಹಾಯ ಧನ ಜಮೆ ಆಗಲಿದೆ. ಕಲ್ಮಕಾರಿನಲ್ಲಿ ಗುಡ್ಡ ಕುಸಿತ ಆಗುವ ಅಪಾಯವಿರುವ ಪ್ರದೇಶದ ಜನರಿಗೆ ಮನೆ ನಿರ್ಮಿಸಲು ಬೇರೆ ಕಡೆ ಸ್ಥಳ ಗುರುತಿಸಲಾಗಿದ್ದು ಅವರಿಗೆ ಹೊಸ ಮನೆ ನಿರ್ಮಾಣ ಅಗಲಿದೆ ಎಂದರು. ಮನೆ ನಾಶವಾದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಯಾವುದಾದರು ದಾಖಲೆಗಳ ಅಥವಾ ತಾಂತ್ರಿಕ ತೊಂದರೆ ಉಂಟಾದರೆ ಅದನ್ನು ಕಂದಾಯ ಇಲಾಖೆಯೇ ಸರಿಪಡಿಸಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು.