ವಾಟ್ಸಾಪ್, ಫೇಸ್‍ಬುಕ್.. ಸದ್ದು ಮಾಡುತ್ತಿದೆ. ಹಲವರ ನಿದ್ದೆಗೆಡಿಸುತ್ತಿದೆ!
ವೇದಿಕೆಗಳ ಭಾಷಣಗಳೆಲ್ಲಾ ‘ನವಮಾಧ್ಯಮಗಳಿಂದ ವರ್ತಮಾನ ಹಾಳಾಯಿತು’ ಎಂದು ಬೊಬ್ಬಿಡುತ್ತಿವೆ. ಯುವ ಮನಸ್ಸುಗಳಿಗೆ ಬಿಟ್ಟಿರಲಾಗದ ಬಂಧ. ಅದೇನೂ ನೋಡುತ್ತಾರೋ, ಏನು ಬರೆಯುತ್ತಾರೋ..?
ಸ್ಮಾರ್ಟ್‍ಫೋನ್ ಇರುವುದು ನಮ್ಮ ಅಂಗೈಯಲ್ಲಿ ಅಲ್ವಾ. ವಾಟ್ಸಾಪ್‍ಗಳ ಮೇಲೆ ಬೆರಳು ಜಾರುವುದು ನಮ್ಮದೇ. ಹಾಗಿದ್ದ ಮೇಲೆ ಆಯ್ಕೆ ನಮ್ಮದಾಗುವುದಿಲ್ಲ ಯಾಕೆ? ಹಳಿಯಿಂದ ಜಾರುತ್ತಿರುವ ಮನಃಸ್ಥಿತಿ. ಶೈಕ್ಷಣಿಕ ಅಪಕ್ವತೆ. ಬೌದ್ಧಿಕತೆಯ ಮರೆವು. ಮತಿಯ ವ್ಯಾಪ್ತಿಯ ಬೇಲಿ.
ಯಾರು ವಾಟ್ಸಾಪ್, ಫೇಸ್‍ಬುಕ್ ಬಳಸುತ್ತಾನೋ ಅವನ ತಾಜಾ ವ್ಯಕ್ತಿತ್ವ, ಗುಣಗಳು ಸ್ಟೇಟಸ್ಸಿನಿಂದ ಪ್ರಕಟವಾಗುತ್ತದೆ. ಒಂದರ್ಥದಲ್ಲಿ ಇವುಗಳು ಮನಸ್ಸಿನ ಕನ್ನಡಿ. ವಾಟ್ಸಾಪ್‍ಗಳು ವರ್ತಮಾನದ ಉತ್ತಮ ಸಂವಹನ ಟೂಲ್ಸ್. ಧ್ವನಿ ಮಾತುಕತೆಯು ಸಂದೇಶ ರವಾನಿಗೆ ಸೂಕ್ತ. ಇಂದು ಸದ್ದುದ್ದೇಶವನ್ನು ಹೊತ್ತು ರೂಪುಗೊಂಡ ನೂರಾರು ಗುಂಪುಗಳಿವೆ.
2019 ಜುಲೈ ಏಳರಂದು ಉಜಿರೆಯಲ್ಲಿ ‘ಹಲಸು ಹಬ್ಬ’ ಜರುಗಿತು. ರೋಟರಿ ಕ್ಲಬ್ ಮತ್ತು ಅನ್ಯಾನ್ಯ ಸಂಸ್ಥೆಗಳ ಹೆಗಲೆಣೆ. ಜೂನ್ 13ರಂದು ಹಬ್ಬದ ಉದ್ದೇಶಕ್ಕಾಗಿಯೇ ವಾಟ್ಸಾಪ್ ಗುಂಪು ರಚನೆಗೊಂಡಿತ್ತು. ಸ್ನೇಹಿತರಾದ ಜಯಶಂಕರ ಶರ್ಮರು ‘ಇವ ಒಬ್ಬ ಇರಲಿ’ ಎಂದು ಗುಂಪಿಗೆ ಎಳೆದು ತಂದು ಹಾಕಿದರು! ‘ಹತ್ತರೊಟ್ಟಿಗೆ ಹನ್ನೊಂದಿದು’ ಔದಾಸೀನ್ಯ ತಾಳಿದ್ದೆ. ಆದರೆ ಹಾಗಾಗಲಿಲ್ಲ.
ಹಬ್ಬಕ್ಕಾಗಿ ದುಡಿಯುವ ಮೂವತ್ತೆಂಟು ಮಂದಿ ಗುಂಪಿನ ಸದಸ್ಯರು. ಇವರೊಳಗೆ ಪರಸ್ಪರ ಮಾತುಕತೆಗೆ ವೇದಿಕೆಯಾಯಿತು. ಆರಂಭದ ದಿವಸಗಳಿಂದಲೇ ನೋಡುತ್ತಿದ್ದೇನೆ. ಅಬ್ಬಾ… ಉತ್ತಮ ಉದ್ದೇಶಕ್ಕಾಗಿ ರಚನೆಗೊಂಡ ಗುಂಪೊಂದು ಇಷ್ಟೊಂದು ಜೀವಂತವಾಗಿರಲು ಸಾಧ್ಯವೇ? ಆಶ್ಚರ್ಯ ಮೂಡಿಸುವಂತೆ ವಾಟ್ಸಾಪ್ ಬಳಕೆಗೊಂಡಿತು. ಅಂದಂದಿನ ಅಪ್‍ಡೇಟ್ ಮಾಹಿತಿಗಳು ಗುಂಪಿಗೆ ಶೀಘ್ರ ಏರುತ್ತಿದ್ದುವು. ಒಬ್ಬರು ಮರೆತರೆ ಇನ್ನೊಬ್ಬರು ಎಚ್ಚರಿಸುತ್ತಿದ್ದರು.
ಯಾರನ್ನೆಲ್ಲಾ ಅತಿಥಿಗಳನ್ನಾಗಿ ಭಾಗವಹಿಸಬಹುದು, ಉದ್ಘಾಟಕರು ಯಾರು? ಪ್ರಚಾರ ಹೇಗೆ? ಯಾರು ಯಾರನ್ನು ಭೇಟಿ ಮಾಡುವುದು, ಆಮಂತ್ರಣ ಪತ್ರ, ಬ್ಯಾನರ್.. ಹೀಗೆ ಹಬ್ಬದ ಒಂದೊಂದು ಅಂಗವನ್ನು ಸೂಕ್ಷ್ಮವಾಗಿ ಅಭ್ಯಸಿಸಿ ಅನುಷ್ಠಾನ ಮಾಡುವಲ್ಲಿ, ಮಾಡಿಸುವಲ್ಲಿ ಗುಂಪು ಹಿಂದೆ ಬೀಳಲಿಲ್ಲ. ಭಿನ್ನಾಭಿಪ್ರಾಯಗಳಿದ್ದರೂ ನವಿರಾದ ಮಂಡನೆ. ಬಹುಶಃ ಈ ಸಮಯದಲ್ಲಿ ಯಾರೊಬ್ಬರೂ ‘ಲೆಫ್ಟ್’ ಆದುದೇ ಇಲ್ಲ!
ಹಬ್ಬದ ನಂತರವೂ ಕಲಾಪಗಳ ಚಿತ್ರಗಳ ರವಾನೆ. ಸ್ಪರ್ಧೆಗಳ ಮಾಹಿತಿ, ಅಭಿಪ್ರಾಯಗಳ ಪ್ರಸ್ತುತಿ. ಧನ್ಯವಾದ ಸಲ್ಲಿಕೆ. ಒಂದು ದಿನವೂ ಗುಂಪು ರಜೆ ತೆಗೆದುಕೊಂಡಿಲ್ಲ! ಗುಂಪಿನ ಸದಸ್ಯರಲ್ಲೊಬ್ಬರಾದ ಅನಿಲ್ ಬಳೆಂಜ ಖುಷಿಯನ್ನು ಹೀಗೆ ಹಂಚಿಕೊಂಡರು, “ಹಲಸುಹಬ್ಬ ಸರಕಾರಿ ಸಂಸೆಗಳ ಹೈ ಟೆಕ್ ಮೇಳಗಳಿಗಿಂತ ಮಿಗಿಲು! ಸಂಘಟಕರ ಶ್ರಮ ಶ್ಲಾಘನೀಯ. ಆಪ್ತರ ವಾಟ್ಸಾಪ್ ಗುಂಪುಗಳಲ್ಲಿ ಸಂಭ್ರಮವನ್ನು ಹಂಚಿಕೊಂಡೆ.”
ಇನ್ನೊಂದು ಗುಂಪು ‘ನೀರ ನೆಮ್ಮದಿಯತ್ತ ಪಡ್ರೆ’. ಮುಖ್ಯ ಸಂಪನ್ಮೂಲ ವ್ಯಕ್ತಿ ಶ್ರೀಪಡ್ರೆಯವರು. ಪಡ್ರೆ ಊರಿನ ಮಧ್ಯೆ ಏಳೆಂಟು ಕಿಲೋಮೀಟರ್ ಉದ್ದಕ್ಕೂ ಹರಿಯುವ ಹಳ್ಳ ‘ಸ್ವರ್ಗ ತೋಡು’ ಮೊನ್ನೆಯ ಬೇಸಿಗೆಯಲ್ಲಿ ಮೊದಲ ಬಾರಿಗೆ ಹರಿವು ನಿಲ್ಲಿಸಿತ್ತು. ಸ್ಥಳೀಯ ಜಲ ಕಾರ್ಯಕರ್ತರಲ್ಲೊಬರಾದ ಕೆ.ವೈ.ಸುಬ್ರಹ್ಮಣ್ಯ ಭಟ್ ಹೇಳುತ್ತಾರೆ, “ಈಗ ಜಾಗೃತರಾಗದಿದ್ದರೆ ಭವಿಷ್ಯ ಇನ್ನಷ್ಟು ಕರಾಳ. ಮತೆ ಕೊರಗಿ ಪ್ರಯೋಜನವಿಲ್ಲ. ಎಚ್ಚೆತ್ತುಕೊಳ್ಳಲು ಸಕಾಲ. ಊರಿಗಾಗ ಏನಾದ್ರೂ ಮಾಡಬೇಕು.”
ಈ ಉದ್ದೇಶದಿಂದ ರೂಪುಗೊಂಡ ನೀರನೆಮ್ಮದಿಯ ವಾಟ್ಸಾಪ್ ಗುಂಪು ತುಂಬು ಸಕ್ರಿಯ. ನೂರೈವತ್ತಕ್ಕೂ ಮಿಕ್ಕಿ ಸದಸ್ಯರು. ಎಡ್ಮಿನ್‍ಗಳಲ್ಲೊಬ್ಬರಾದ ಶ್ರೀ ಪಡ್ರೆಯವರು ಯಾರನ್ನೂ ತೂಕಡಿಸಲು ಬಿಡದೇ ಇರುವುದು ವಿಶೇಷ! ಇವರ ‘ನೀರಿದ್ದರೆ ನಾಳೆ’ ಎನ್ನುವ ‘ಧ್ವನಿ’ ಮಾಹಿತಿ ಬಿಂದು ಗುಂಪಿನ ಹೈಲೈಟ್. ಜಲಸಾಕ್ಷರತೆಯ ಆಯಾಮಗಳು, ವಿಧಾನಗಳು, ಈಗಾಗಲೇ ಊರಿನಲ್ಲಿ ಆದ-ಆಗುತ್ತಿರುವ ಚಟುವಟಿಕೆಗಳು, ಬೇರೆಡೆ ಆದ ಗಾಥೆಗಳ ಚಿತ್ರ ವರದಿಗಳು ಗುಂಪಿನ ಮೂಲಕ ಇಡೀ ಹಳ್ಳಿಗೆ ತಲಪುತ್ತದೆ. ಜಲಮರುಪೂರಣ ಕೆಲಸಗಳ ಕುರಿತು ತರಬೇತಿಗಳು ನಡೆದಿದ್ದುವು. ಮಾಹಿತಿಗಳು, ಅನುಭವಗಳು ಪರಸ್ಪರ ಸಂವಹನಗಳಾಗುತ್ತಿವೆ.
ಅರಿವನ್ನು ಬಿತ್ತುವ ಒಂದು ಉದಾಹರಣೆ ಗಮನಿಸಿ. ಶ್ರೀ ಪಡ್ರೆ ಉವಾಚ “ಈ ಭಾಗದಲ್ಲಿ ಮೊತ್ತಮೊದಲು ಕ್ಷಾಮ ಕಾಣಿಸಿಕೊಂಡದ್ದು 1983ರಲ್ಲಿ. ನಿಜವಾಗಿ ಆಗ ಬಂದ ಬರಗಾಲ ನಮ್ಮನ್ನು ಬಿಟ್ಟು ಹೋಗಲಿಲ್ಲ. 2019ರ ಕ್ಷಾಮ 1983ರನ್ನು ಅತಿ ಚಿಕ್ಕದಾಗಿಸಿತು. ಪಡ್ರೆಯ ಮಟ್ಟಿಗೆ ನಾವೆಲ್ಲರೂ ಒಮ್ಮನಸ್ಸಿನಿಂದ ಯತ್ನಿಸಿದರೆ ಈ ಮೂರನೆಯ ‘ಕಾಲ’ನನ್ನು ದೂರ ಓಡಿಸಬಹುದು.”
ವಾಟ್ಸಾಪ್ ಗುಂಪು ಹೇಗೆ ಒಳ್ಳೆಯ ಕೆಲಸಗಳಿಗೆ ಬಳಸಬಹುದೆಂಬುದಕ್ಕೆ ಉಜಿರೆಯ ಹಬ್ಬ ಮತ್ತು ಪಡ್ರೆಯ ಜಲ ಸಾಕ್ಷರತೆಗಳು ಉದಾಹರಣೆಗಳಷ್ಟೇ. ಗುಂಪಿನಲ್ಲಿರುವ ಎಲ್ಲರೂ ಒಂದೆಡೆ ಸೇರಿ ಸಮಾಲೋಚಿಸುವುದು ವರ್ತಮಾನದ ಒತ್ತಡದ ಲೋಕದಲ್ಲಿ ಅಸಾಧ್ಯ. ಆ ಕೊರತೆಯನ್ನು ವಾಟ್ಸಾಪ್ ತುಂಬಿದೆ.
ಇಂತಹ ಗುಂಪುಗಳು ಸಾಕಷ್ಟು ಇವೆ. ಜೀವಂತಿಕೆಯಿರುವುದು ತೀರಾ ಕಡಿಮೆ. ಮನಸ್ಸಿನ ಎಲ್ಲಾ ಆಕಾರ-ವಿಕಾರಗಳಿಗೆ ವಾಟ್ಸಾಪ್ ವೇದಿಕೆಯಾದರೆ ‘ಲೆಪ್ಟ್’ – ‘ರೈಟ್’ ಆಗುತ್ತಾ ಇರುತ್ತದೆ! ಫಾರ್ವರ್ಡ್‍ನಂತಹ ಕಸಗಳನ್ನು ತುಂಬಿಸಲು ಇರುವ ತ್ಯಾಜ್ಯ ತುಂಬುವ ಚೀಲವಲ್ಲ. ಧನಾತ್ಮಕವಾಗಿ ಬಳಸಿಕೊಂಡರೆ ವಾಟ್ಸಾಪ್, ಫೇಸ್‍ಬುಕ್ ಆಪ್ತ ಮಾಧ್ಯಮ. ಆದರೆ ಹಾಗಾಗುತ್ತಿಲ್ಲ.