ಧರ್ಮಸ್ಥಳ : ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಬೆಳ್ತಂಗಡಿ ತಾಲೂಕಿನ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ವಿಜಯನಗರ ಸಾಮ್ರಾಜ್ಯದ ಅಮೂಲ್ಯ ಶಿಲಾಶಾಸನವೊಂದು ಬೆಳಕಿಗೆ ಬಂದಿದೆ.
ಮಧ್ಯದಲ್ಲಿ ತುಂಡರಿಸಲ್ಪಟ್ಟ ಈ ಜೀರ್ಣಗೊಂಡ ಶಾಸನವನ್ನು ಈಗ ಕಬ್ಬಿಣದ ಪಂಜರದಲ್ಲಿ ಸಂರಕ್ಷಿಸಿಡಲಾಗಿದೆ. ಆಳೆತ್ತರದ ಶಿಲಾ ಫಲಕದ ಮೇಲೆ ಸುಮಾರು ನಲ್ವತ್ತಏಳು ದೀರ್ಘಪಂಕ್ತಿಗಳಲ್ಲಿ ಇದನ್ನು ಬರೆಯಲಾಗಿದೆ. ಕನ್ನಡ ಭಾಷೆ ಹಾಗೂ ಕನ್ನಡ ಲಿಪಿಯಲ್ಲೇ ಇದ್ದರೂ ಇದನ್ನು ಯಾರೂ ಅಧ್ಯಯನ ಮಾಡಲು ಪ್ರಯತ್ನಸಿರಲಿಲ್ಲ. ನಿವೃತ್ತ ಇತಿಹಾಸ ಪ್ರಾಧ್ಯಾಪಕರೂ, ಶಾಸನ ತಜ್ಞರೂ ಆದ ಡಾ| ವೈ. ಉಮಾನಾಥ ಶೆಣೈಯವರು ಇದನ್ನು ಅಧ್ಯಯನ ಮಾಡಿದಾಗ ಹಲವಾರು ಐತಿಹಾಸಿಕ ವಿಚಾರಗಳು ಬೆಳಕನ್ನು ಕಂಡಿವೆ.
ಈ ಶಿಲಾಶಾಸನ ಶಾಲಿವಾಹನ ಶಕ ಸಾವಿರದ ಮುನ್ನೂರ ಮೂವತ್ತೊಂಭತ್ತನೆಯ ದುರ್ಮುಖಿ ಸಂವತ್ಸರದ ಪುಷ್ಯ ಬಹಳ ಅಮಾವಾಸ್ಯೆ (ಕ್ರಿ.ಶ. 1417ನೇ ಇಸವಿ ಜನವರಿ ತಿಂಗಳ 17ನೇ ತಾರೀಖು) ಆದಿತ್ಯವಾರದಂದು ವಿಜಯನಗರ ಸಾಮ್ರಾಜ್ಯದ ಸಾರ್ವಭೌಮ ಶ್ರೀ ಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಶ್ರೀ ವೀರದೇವರಾಯ ಮಹಾರಾಯರ ಆದೇಶದಂತೆ ಬರೆಯಲಾಗಿತ್ತು. ಇದರಲ್ಲಿ ಭಕ್ತ ಜನರು ಚಂದಕೂರು ದುರ್ಗಾಪರಮೇಶ್ವರಿಯ ದೇವಾಲಯದಲ್ಲಿ ಆಗತಕ್ಕ ಸೇವಾದಿಗಳಿಗೆ ಹಾಗೂ ಬ್ರಾಹ್ಮಣ ಸಂತರ್ಪಣೆಗೆ ಬೇಕಾದ ಭೂಮಿಯನ್ನು ಉಂಬಳಿ ಬಿಟ್ಟ ವಿಚಾರವನ್ನು ತಿಳಿಸಿ ಆ ಬಿಟ್ಟ ಭೂಮಿಯ ಗಡಿರೇಖೆಗಳನ್ನು ಈ ಶಾಸನದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.
ಈ ದೇವಾಲಯಕ್ಕೆ ಸಂಬಂಧಿಸಿ ಒಂದು ಅನ್ನಛತ್ರವೂ ಅದನ್ನು ವ್ಯವಸ್ಥಿತವಾಗಿ ನಡೆಸುವ ಒಂದು ಮಠವೂ ಇಲ್ಲಿ ಇದ್ದಂತೆ ಈ ಶಾಸನದಿಂದ ತಿಳಿಯುತ್ತದೆ. ಬಂಗ ಅರಸರು, ನಡ ಗುತ್ತಿನವರು, ಕೆಲವು ಬ್ರಾಹ್ಮಣರು, ಇನ್ನುಳಿದಂತೆ ಅನೇಕ ಶ್ರೀಮಂತ ಭೂಮಾಲಿಕರು, ಈ ವಿನಿಯೋಗಾದಿಗಳಿಗೆ ಭೂಮಿಯನ್ನು ಧಾರೆಯೆರೆದು ಕೊಟ್ಟಿದ್ದರು. ಉಳಿದವರು ಪ್ರತೀ ವರ್ಷ ತಮ್ಮ ಭೂಮಿಯಿಂದ ಬರುವ ಉತ್ಪತ್ತಿಯ ನಿರ್ದಿಷ್ಟ ಅಂಶವನ್ನು ಭತ್ತದ ರೂಪದಲ್ಲಿ ದೇವಾಲಯಕ್ಕೆ ಕೊಡಬೇಕಾಗಿತ್ತು. ಸುಮಾರು 1600 ಮುಡಿ ಭತ್ತ ದೇಣಿಗೆಯ ರೂಪದಲ್ಲಿ ಬರುತಿತ್ತು. ಇದರ ಸರಿಯಾದ ನಿರ್ವಹಣೆಯನ್ನು ಬಂಗರ ಅರಮನೆಯವರು, ನಡದವರು, ಬೀರಣ್ಣ ಎಂಬ ಅಧಿಕಾರಿ ಮತ್ತು ನಾಲ್ಕೂರು ಗ್ರಾಮದವರು ನೋಡಿಕೊಳ್ಳಬೇಕು. ಇದಕ್ಕೆ ಸೂರ್ಯ, ಚಂದ್ರರೇ ಸಾಕ್ಷಿ. ದಾನ ಮಾಡುವವನು ಸ್ವರ್ಗವನ್ನು ಪಡೆಯುತ್ತಾನೆ. ಯಾವಾತನು ಅದನ್ನು ನಡೆಸುತ್ತಾನೋ ಆತನಿಗೆ ಶ್ರೀ ಮಹಾವಿಷ್ಣುಪದ ಪ್ರಾಪ್ತವಾಗುತ್ತದೆ. ಈ ಊರವರು ಇದನ್ನು ನಡೆಸಿಕೊಂಡು ಬರುತ್ತಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…