ಸುಳ್ಯ: ಪ್ರತಿಯೊಬ್ಬ ವಿಧ್ಯಾರ್ಥಿಯು ಕಲಿಕೆಯ ಜೊತೆಗೆ ಸ್ವಯಂ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಕೆಟ್ಟ ನಡವಳಿಕೆಯನ್ನು ಬಿಟ್ಟುಬಿಡಬೇಕು. ದೇಶಕ್ಕಾಗಿ ಅದೆಷ್ಟೊ ಸೈನಿಕರು ಪ್ರಾಣತ್ಯಾಗ ಮಾಡುತ್ತಿರುವಾಗ ನಮ್ಮಿಂದಾದ ದೇಶಸೇವೆಯನ್ನು ನಾವು ಮಾಡಲೇಬೇಕು. ಸ್ಟೂಡೆಂಟ್ ಪೋಲಿಸ್ ಕ್ಯಾಡೆಟ್ ನ ಸದಸ್ಯನಾಗುವ ಮೂಲಕ ಶಿಸ್ತು ಪರಿಶ್ರಮ ನಿಸ್ವಾರ್ಥ ಸೇವೆ ಹಾಗೂ ಸ್ವಯಂ ಆರೋಗ್ಯದ ಪರಿಕಲ್ಪನೆಯನ್ನು ಮೈಗೂಡಿಸಿಕೊಳ್ಳಬೇಕೆಂದು ನಿವೃತ್ತ ಸೇನಾ ಅಧಿಕಾರಿ ಅಡ್ಡಂತಡ್ಕ ದೇರಣ್ಣ ಗೌಡ ಹೇಳಿದ್ದಾರೆ.
ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ಸ್ಟೂಡೆಂಟ್ ಪೋಲಿಸ್ ಕ್ಯಾಡೆಟ್ ನ್ನು ಉದ್ಗಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾದ ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಪ್ರಭಾರ ಸಬ್ ಇನ್ಸ್ಪೆಕ್ಟರ್ ಚಂದಪ್ಪ ಮಾತನಾಡಿ ಶಿಕ್ಷಣ ಮತ್ತು ರಕ್ಷಣೆ ವಿಧ್ಯಾರ್ಥಿಗಳ ಪ್ರಮುಖ ಆದ್ಯತೆ ಯಾಗಬೇಕು. ಆ ಮೂಲಕ ವಿದ್ಯಾರ್ಥಿಗಳು ಜೀವನ ಪಾಠ ಕಲಿಯಬೇಕು. ಆಧುನಿಕ ಜಗತ್ತಿನಲ್ಲಿ ಮೊಬೈಲ್ ಬಳಕೆ ಅವಶ್ಯಕತೆಗೆ ತಕ್ಕಂತ ಇರಲಿ ಹಾಗು ಸ್ಟೂಡೆಂಟ್ ಪೋಲಿಸ್ ಕ್ಯಾಡೆಟ್ ಸೇರುವ ಮೂಲಕ ಹಲವಾರು ಸಾಧನೆಯನ್ನು ಮಾಡುವ ಅವಕಾಶ ಇದೆ ಎಂದು ತಿಳಿಸಿದರು.
ಕೆ ಯಸ್ ಆರ್ ಪಿ ವಿಭಾಗದ ಅನಿಲ್ ಕುಮಾರ್ ಇವರು ಘಟಕದ ಮಾಹಿತಿ ನೀಡುತ್ತಾ ದಕ ಜಿಲ್ಲೆಯ ಹತ್ತು ಶಾಲೆಗಳಲ್ಲಿ ಮಾತ್ರ ಈ ಘಟಕ ಪ್ರಾರಂಭವಾಗುತ್ತಿದ್ದು ಪ್ರತಿ ತಿಂಗಳು ಶನಿವಾರದಂದು 80 ನಿಮಿಷಗಳ ಅವಧಿಯಲ್ಲಿ ಪೇರೆಡ್ ಗಳು, ಅಪರಾದ ತಡೆಗಟ್ಟುವಿಕೆ, ಸಮಾಜದಲ್ಲಿ ಪೋಲಿಸರ ಪಾತ್ರ, ರಸ್ತೆ ಸುರಕ್ಷತೆ ಅರಿವು, ಸಾಮಾಜಿಕ ಪಿಡುಗುಗಳು, ಮಕ್ಕಳ ಮತ್ತು ಮಹಿಳೆಯರ ರಕ್ಷಣೆ, ಭ್ರಷ್ಟಾಚಾರ ವಿರುದ್ದ ಹೋರಾಟ, ಪ್ರಾಕೃತಿಕ ವಿಕೋಪ ನಿರ್ವಹಣೆ ಮತ್ತು ವಿವಿದ ಕ್ಷೇತ್ರಭೇಟಿ ಕಾರ್ಯಕ್ರಮಗಳನ್ನು ನಡೆಸಲಿದ್ದು ಇದರ ಪ್ರಯೋಜನ ಗಳನ್ನು ಪಡೆಯಲು ತಿಳಿಸಿದರು.
ಸಭಾಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಪುರುಷೋತ್ತಮ ಕಜೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ ಹಾಗು ಸಮಿತಿ ಸದಸ್ಯರಾದ ರುಖಿಯಾ, ಕಮಲ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಚಂದ್ರಶೇಖರ್ ಪೇರಾಲ್ ಇವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನೋಡಲ್ ಅಧಿಕಾರಿ ತಿರುಮಲೇಶ್ವರಿ ವಂದಿಸಿದರು. ಶಿಕ್ಷಕ ಗೋಪಿನಾಥ್ ಮೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ವಸಂತ್ ನಾಯಕ್, ರಾಜೇಶ್ವರಿ, ಮುರಳೀಧರ,ಸುಂದರ, ಶಶಿಕಲಾ ಹಾಗು ವಿಜೇತ್ ಇವರು ಸಹಕರಿಸಿದರು.