ಬೆಳ್ಳಾರೆ: ಮಾಡಾವು 110 ಕೆವಿ ಸಬ್ ಸ್ಟೇಶನ್ ಕಾಮಗಾರಿಗೆ ಇನ್ನಷ್ಟು ವೇಗ ದೊರೆತಿದೆ. ಒಟ್ಟು 115 ವಿದ್ಯುತ್ ಟವರುಗಳಲ್ಲಿ ಕೊನೆಯ ಒಂದು ಟವರ್ ಕಾಮಗಾರಿಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು ಮಂಗಳವಾರ ಕಾಮಗಾರಿ ಆರಂಭವಾಗಿದೆ. ಈ ಮೂಲಕ ಬಳಕೆದಾರರ ವೇದಿಕೆಯ ಹೋರಾಟ ಬಹುತೇಕ ಯಶಸ್ಸು ಕಂಡಿದೆ.
ಸುಳ್ಯ,ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಸರಬರಾಜು ಸಮಸ್ಯೆಗೆ ಏಕೈಕ ಪರಿಹಾರವೆಂದು ಹೇಳಲಾಗುತ್ತಿದ್ದ ಪುತ್ತೂರು ತಾಲೂಕು ಮಾಡಾವಿನಲ್ಲಿ ಪ್ರಸ್ಥಾವಿತ 110 ಕೆ.ವಿ. ವಿದ್ಯುತ್ ಕೇಂದ್ರ 14 ವರ್ಷದ ಹಿಂದೆ ಇಲಾಖೆ ಕೈಗೆತ್ತಿಕೊಂಡಿದ್ದರೂ ಹಲವಾರು ಅಡ್ಡಿಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೂಡಲ್ಪಟ್ಟಿದ್ದ ಕೆಲವು ಮೊಕದ್ದಮೆಗಳ ನೆಪವೊಡ್ಡಿ ಕಾಮಗಾರಿಗೆ ಅಡ್ಡಿಯಾಗಿದ್ದವು. ಈ ಅಡ್ಡಿಗಳ ನಿವಾರಣೆಗೆ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಪ್ರತೀ ಬಾರಿಯ ಪ್ರಗತಿ ಪರಿಶೀಲನೆಯಲ್ಲೂ ಕೆಪಿಟಿಸಿಎಲ್ ಕಾಮಗಾರಿ ಪ್ರಗತಿಯಲ್ಲಿದೆ ಸದ್ಯದಲ್ಲೇ ಪೂರ್ತಿಯಾಗುತ್ತದೆ ಎಂದು ಹೇಳುತ್ತಲೇ ಇತ್ತು.
ಆದರೆ ಬೆಳ್ಳಾರೆ ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಈ ಬಗ್ಗೆ ಹೋರಾಟ ಆರಂಭಿಸಿತ್ತು. ವಿಳಂಬದಿಂದ 3 ತಾಲೂಕುಗಳಿಗೆ ಆಗುವ ತೊಂದರೆಗಳ ಬಗ್ಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ತ್ವರಿತ ತೀರ್ಮಾನಕ್ಕೆ ಆದ ನಿರ್ದೇಶನಗಳಂತೆ ಎಲ್ಲಾ ಮೊಕದ್ದಮೆಗಳು ತ್ವರಿತ ತೀರ್ಮಾನವಾಗಿ ಕೊನೆಯ ಆರ್ಯಾಪು ಗ್ರಾಮದ ಕೈಕಾರ ಎಂಬಲ್ಲಿನ ರಿಟ್ ಪಿಟಿಶನ್ ಕೂಡಾ ಪರಿಹಾರ ನೀಡುವ ನಿರ್ದೇಶನದಂತೆ ನ.6 ರಂದು ಆದೇಶವಾಗಿತ್ತು. ಆದರೆ ಕಾಮಗಾರಿ ಆರಂಭಿಸಲು ನಿರ್ದೇಶನಗಳ ಪಾಲನೆಯಾಗಬೇಕಿತ್ತು. ಇದರಿಂದ ಆಗುವ ಸುಧೀರ್ಘ ವಿಳಂಬವನ್ನು ತಪ್ಪಿಸುವರೇ ರಿಟ್ ಅರ್ಜಿದಾರ ಮುರಳೀಧರ ಶ್ಯಾನುಭೋಗರನ್ನು ಬಳಕೆದಾರರ ವೇದಿಕೆಯ ಸಮಿತಿಯ ಸಂಚಾಲಕ ಜಯಪ್ರಸಾದ್ ಜೋಶಿಯವರು ಸಂಪರ್ಕಿಸಿ ಮಾತುಕತೆ ನಡೆಸಿ ಮನವೊಲಿಸಿದ್ದರು.
ಜೊತೆಗೆ ಬಳಕೆದಾರರ ವೇದಿಕೆಯ ಜಯಪ್ರಸಾದ್ ಜೋಶಿಯವರು ಕೆ.ಪಿ.ಟಿ.ಸಿ.ಎಲ್ ನ್ನು ಸಂಪರ್ಕಿಸಿ ಸೌಹಾರ್ದ ಮಾತುಕತೆಗೆ ಮೇಲಾಧಿಕಾರಿಗಳ ನಿರ್ದೇಶನಗಳಾಗಿತ್ತು. ಅದರಂತೆ ಡಿ.2 ರಂದು ಪುತ್ತೂರು ಕೆ.ಪಿ.ಟಿ.ಸಿ.ಎಲ್ ಕಚೇರಿಯಲ್ಲಿ ಮಾತುಕತೆಯಾಗಿದ್ದು ಕೆ.ಪಿ.ಟಿ.ಸಿ.ಎಲ್ ಪರಿಹಾರ ಧನದ ಒಂದು ಅಂಶವನ್ನು ಅಂದೇ ನೀಡಿದ್ದು ಇನ್ನು ನಿಯಮಾನುಸಾರದ ಪರಮಾವಧಿ ಪರಿಹಾರ ಮತ್ತು ಪರಸ್ಪರ ಸಹಕಾರದ ಬಗ್ಗೆ ಒಮ್ಮತದ ತೀರ್ಮಾನವಾಯಿತು. ಅದರಂತೆ ಶ್ಯಾನುಭೋಗರು ತಕ್ಷಣದಿಂದ ಅವರ ಜಮೀನಿನಲ್ಲಿ ಕಾಮಗಾರಿ ಆರಂಭಿಸಲು ಅನುಮತಿ ನೀಡಿದರು. ಇದರಿಂದ ಕಾಮಗಾರಿಗೆ ಇರುವ ಅಡ್ಡಿ ಬಹುತೇಕ ನಿವಾರಣೆಯಾಗಿದೆ. ಇದರಿಂದ ಒಟ್ಟು 115 ಟವರುಗಳಲ್ಲಿ ಇಡೀ ಕಾಮಗಾರಿಗೆ ಅಡ್ದಿಯಾಗಿದ್ದ ಕೊನೆಯ ಒಂದು ಟವರ್ ಕಾಮಗಾರಿ ಕೂಡಾ ಡಿ.3 ರಂದು ಆರಂಭವಾಗಿದೆ. ಟವರ್ ಗಟ್ಟಿಯಾದ ಕೂಡಲೇ ಲೈನ್ ಎಳೆಯುವ ಕಾಮಗಾರಿ ನಿಯೋಜಿತವಾಗಿದೆ. ಕಾಮಗಾರಿ ಅಂತಿಮವಾಗಿ ಈ ಕೇಂದ್ರದಿಂದ ವಿದ್ಯುತ್ ಗ್ರಾಹಕರಿಗೆ ಲಭಿಸಲಿದೆ.
ಆರ್ಯಾಪು ಗ್ರಾಮದಲ್ಲಿ ಮಾಡಾವು 110 ವಿದ್ಯುತ್ ಕೇಂದ್ರಕ್ಕಾಗಿ ಟವರ್ ಕಾಮಗಾರಿಗೆ ಇದ್ದ ವಿವಾದವನ್ನು ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಸಂಚಾಲಕ ಜಯಪ್ರಸಾದ್ ಜೋಶಿ ಬೆಳ್ಳಾರೆ ಇವರು ಸೌಹಾರ್ದ ಮಾತುಕತೆಯಲ್ಲಿ ರಿಟ್ ಅರ್ಜಿದಾರ ಮುರಳೀಧರ ಶ್ಯಾನುಭೋಗ, ಕೆ.ಪಿ.ಟಿ.ಸಿ.ಎಲ್ ನಿಯೋಜನೆಯಂತೆ ಅಧೀಕ್ಷಕ ಅಭಿಯಂತರ ರವಿಕಾಂತ ಕಾಮತ್ , ಕಾರ್ಯ ನಿರ್ವಾಹಕ ಅಭಿಯಂತರ ಗಂಗಾಧರ್ , ಕೆ.ಪಿ.ಟಿ.ಸಿ.ಎಲ್ ಹಿರಿಯ ಕಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಇತ್ಯರ್ಥಗೊಳಿಸಲಾಯಿತು.
ಮಾಡಾವು 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ವೇಗಕ್ಕೆ ಕಾರಣೀಭೂತರಾದ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ, ತ್ವರಿತ ಕಾಮಗಾರಿಗೆ ಅನುಮತಿಸಿದ ಮುರಳೀಧರ ಶ್ಯಾನುಭೋಗರಿಗೆ, ಸಮರೋಪಾದಿಯಲ್ಲಿ ಕಾಮಗಾರಿ ಆರಂಭಿಸಿದ ಕೆ.ಪಿ.ಟಿ.ಸಿ.ಎಲ್ ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಸಂಚಾಲಕ ಜಯಪ್ರಸಾದ್ ಜೋಶಿ ಬೆಳ್ಳಾರೆ ಇವರು ಬಳಕೆದಾರರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.
Advertisement