ಸುಳ್ಯ:ವಿಪತ್ತು ರಕ್ಷಣೆ ಕುರಿತ ಸಭೆಗೆ ಜನಪ್ರತಿನಿಧಿಗಳನ್ನು ಕರೆದಿಲ್ಲ ಎಂದು ಬಿಜೆಪಿ ಮುಖಂಡರೋರ್ವರು ಆಕ್ಷೇಪ ವ್ಯಕ್ತಪಡಿಸಿದ ಮತ್ತು ಇದಕ್ಕೆ ಸಭೆಯಲ್ಲಿದ್ದವರು ಅಸಮಾಧಾನ ವ್ಯಕ್ತಪಡಿಸಿ ಮಾತಿನ ಚಕಮಕಿ ಉಂಟಾದ ಪ್ರಸಂಗ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಸಿತು.
ಇಂದು ನಡೆದ ಸಭೆಗೆ ಜನಪ್ರತಿನಿಧಿಗಳನ್ನು ಯಾಕೆ ಕರೆದಿಲ್ಲ, ತಾಲೂಕು ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿಯೇ ಇರಲಿಲ್ಲ ಎಂದು ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರ ನೀಡಿದ ಕೆ.ಎಲ್.ಪ್ರದೀಪ್ ಕುಮಾರ್ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಅಧಿಕಾರಿಗಳೇ ಮಾಡುತ್ತಿದ್ದಾರೆ. ಶಾಸಕಾಂಗ ನಿಷ್ಕ್ರಿಯವಾದ ಕಾರಣ ಅತೀ ಅಗತ್ಯವಾಗಿ ಆಗಬೇಕಾದ ಕಾರ್ಯವನ್ನು ಕಾರ್ಯಾಂಗವೇ ಮುಂದೆ ನಿಂತು ಮಾಡುತಿದೆ ಅದಕ್ಕೆ ತಕರಾರು ಯಾಕೆ ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳು ಒಮ್ಮೆಯೂ ಪ್ರಕೃತಿ ವಿಕೋಪ ರಕ್ಷಣೆ ಕುರಿತಾದ ಸಭೆ ಯಾಕೆ ಕರೆದಿಲ್ಲ, ಈ ಕುರಿತು ತೀವ್ರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸಭೆಯಲ್ಲಿದ್ದ ಇತರರೂ ಹೇಳಿದಾಗ ಸಭೆಯಲ್ಲಿ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ತಹಶೀಲ್ದಾರ್ ಕುಂಞಿ ಅಹಮ್ಮದ್ ಇದು ಜನಪ್ರತಿನಿಧಿಗಳ ಸಭೆ ಅಲ್ಲ. ಪ್ರಕೃತಿ ವಿಕೋಪ ಎದುರಿಸುವ ಕುರಿತು ಕೈ ಜೋಡಿಸುವ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ದಯವಿಟ್ಟು ಇದರಲ್ಲಿ ರಾಜಕೀಯ ಬೆರೆಸಬೇಡಿ ಎಂದು ಹೇಳಿದರು.
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಸೇವಾ ಭಾರತಿ ಪದಾಧಿಕಾರಿಗಳನ್ನು ಕರೆದಿಲ್ಲ ಎಂದು ಸುಬೋದ್ ಶೆಟ್ಟಿ ಹೇಳಿದರು. ಸೇವಾ ಭಾರತಿ ಪದಾಧಿಕಾರಿಗಳನ್ನು ಸಭೆಗೆ ಕರೆಯಲಾಗಿದೆ, ಸುಳ್ಯದಲ್ಲಿ ಸೇವಾ ಭಾರತಿಯ ಕೆಲಸ ಆರಂಭಿಸಿದವರೇ ಸಭೆಯಲ್ಲಿ ಇದ್ದಾರೆ ಎಂದು ವಿನೋದ್ ಲಸ್ರಾದೋ ಮತ್ತಿತರರು ಹೇಳಿದರು.
ಸಭೆಗೆ ತಮಗೂ ಆಹ್ವಾನ ಇರಲಿಲ್ಲ ಎಂದು ಕೆಲವು ನಗರ ಪಂಚಾಯತ್ ಸದಸ್ಯರು ಸಭೆಯಲ್ಲಿ ಹೇಳುತ್ತಿದ್ದದು ಕೇಳಿ ಬಂತು.
ಮಳೆಗಾಲ ಆರಂಭವಾಗಿ ಎರಡೂವರೆ ತಿಂಗಳಾದರೂ ಶಾಸಕರ ನೇತೃತ್ವದಲ್ಲಿ ಒಮ್ಮೆಯೂ ಪ್ರಕೃತಿ ವಿಕೋಪ ಸಭೆ ಕುರಿತಾದ ನಡೆದಿಲ್ಲ ಯಾಕೆ ಎಂದು ಕೆಲವರು ಸಭೆಯಲ್ಲಿ ಪ್ರಶ್ನಿಸಿದರು.