ಪುತ್ತೂರು: ಸಂಗೀತಕ್ಕೆ ಹೃನ್ಮನವನ್ನು ಕುಣಿಸುವ ಶಕ್ತಿ ಇದೆ. ಮಧುರ ಸ್ವರವು ಭಾವನಾತ್ಮಕವಾಗಿ ರೋಮಾಂಚನಗೊಳಿಸುತ್ತದೆ. ಸುಸ್ವರ ಗಾಯನಕ್ಕೆ ಅದೈತ ಶಕ್ತಿಯಿದೆ. ಏಕೆಂದರೆ ಮನಸ್ಸನ್ನು ಭಾವತೀವ್ರತೆಯ ದಾರಿಯಲ್ಲಿ ನಡೆಸಿ ತಲ್ಲೀನತೆಗೆ ನೂಕುವ ಪ್ರಖರ ಸಾಧನವೇ ಸಂಗೀತ. ಇಂಪಾದ ಗೀತೆ ಮನ ನಲಿಸಲು ಕಾರಣವಾಗುವ ಅದ್ಭುತ ಕಲೆ.
ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಆಗಸ್ಟ್ 30 ರಂದು ಸಂಭ್ರಮದ ವಾತಾವರಣ. ಕೊಠಡಿ ಕೊಠಡಿಗಳಲ್ಲಿ ಸಂಗೀತದ ಇಂಚರ ಪ್ರತಿಧ್ವನಿಸುತ್ತಿತ್ತು. ಇಲ್ಲಿ “ನಾದಲೋಕ”ವೆಂಬ ಅಂತರ್ ಕಾಲೇಜು ಮಟ್ಟದ ಸಂಗೀತ ಸ್ಪರ್ಧೆ ಕಳೆಗಟ್ಟಿತ್ತು. ಕಾಲೇಜು ಸಂಗೀತ ಕಲರವದಿಂದ ಅನುರಣಿಸುತ್ತಿತ್ತು. ಗಾನಮಾಧುರ್ಯತೆಯು ಮನದ ಮನೆಯಲ್ಲಿ ನೃತ್ಯವಾಡಿಸುತ್ತಿತ್ತು ಎಂದರೆ ತಪ್ಪಿಲ್ಲ.
ಹೌದು, ಶುಕ್ರವಾರದಂದು ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ವಿವೇಕಾನಂದ ಮಹಾವಿದ್ಯಾಲಯ ಇದರ ಸಹಯೋಗದಲ್ಲಿ ಎರಡು ದಿನದ “ನಾದಲೋಕ”ವೆಂಬ ಅಂತರ್ ಕಾಲೇಜು ಮಟ್ಟದ ಸಂಗೀತ ಸ್ಪರ್ಧೆಯ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಸ್ ಎಡಪಡಿತ್ತಾಯ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ನಾಲ್ಕು ಸಭಾಂಗಣದಲ್ಲಿ ಐದು ರೀತಿಯ ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದಕ್ಷಿಣಕನ್ನಡ, ಉಡುಪಿ, ಕುಂದಾಪುರ, ಕಾರ್ಕಳ ಜಿಲ್ಲೆಗಳ ವಿವಿಧ ಶಿಕ್ಷಣಸಂಸ್ಥೆಗಳಿಂದ ಒಟ್ಟು 275 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಬೈಂದೂರು ಪ್ರಭಾಕರ್ ರಾವ್ ಸಭಾಂಗಣದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿದ್ವಾನ್ ರಾಮಕೃಷ್ಣ ಭಟ್, ವಿದುಷಿ ಶಾರದಾ ಹಾಗೂ ಮಂಗಳೂರಿನ ವಿದುಷಿ ಅರುಣಾ ಸರಸ್ವತಿ ತೀರ್ಪುಗಾರರಾಗಿದ್ದರು. ಈ ಸ್ಪರ್ಧೆಯಲ್ಲಿ ಒಟ್ಟು 24 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾರತೀಯ ಸಂಗೀತ ಕ್ಷೇತ್ರದಲ್ಲಿ ಶಾಸ್ತ್ರೀಯ ತಾಳವಾದ್ಯಕ್ಕೆ ಅದರದ್ದೇ ಆದ ಪರಂಪರೆಯಿದೆ. ಅದರ ಸಂಗೀತ ಗಂಧರ್ವವು ಇಂದು ಕಾಲೇಜಿನ ಎ.ವಿ. ಸಭಾಂಗಣದಲ್ಲಿ ನೆಲೆಮಾಡಿತ್ತು. ಶಿವನ ರುದ್ರನರ್ತನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕಾರದ ತಾಳಮದ್ದಳೆಯು ಸ್ಪರ್ಧೆಯನ್ನು ವಿನೂತನಗೊಳಿಸಿತು. ಈ ಸ್ಪರ್ಧೆಗೆ 20 ವಿದ್ಯಾರ್ಥಿಗಳು ಭಾಗವಹಿಸಿದ್ದು ವಿದ್ವಾನ್ ಆತ್ಮರಾಂ ನಾಯಕ್, ವಿದ್ವಾನ್ ನಿಕ್ಷಿತ್ ಪುತ್ತೂರು ಹಾಗೂ ವಿದುಷಿ ಶ್ರೀಲತಾ ತೀರ್ಪುಗಾರರಿದ್ದರು.
ಅಷ್ಟೇ ಅಲ್ಲದೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣವು ಲಘುಸಂಗೀತದ ನಿನಾದದಿಂದ ರಂಗುಗೊಂಡಿತ್ತು. ಹೆಸರೇ ಸೂಚಿಸುವಂತೆ ಇಂಪಾದ ಲಘುಸಂಗೀತ ಸ್ಪರ್ಧೆಗೆ 29 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದುಷಿ ಪವಿತ್ರಾ ಶೇಟ್, ವಿದ್ವಾನ್ ಗೋಪಾಲಕೃಷ್ಣ ಸುಳ್ಯ ತೀರ್ಪುಗಾರರಾಗಿದ್ದರು.
ಈ ಎಲ್ಲ್ಲಾ ಸಂಗೀತ ಪ್ರಕಾರದ ಮಧ್ಯೆ ಸಮೂಹಗೀತೆಯು ಕಾಲೇಜು ಪರಿಸರವನ್ನು ಸುಮಧುರಗೊಳಿಸಿತ್ತು. ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 28 ತಂಡಗಳು ಭಾಗವಹಿಸಿದ್ದವು. ವಿದ್ವಾನ್ ಪ್ರಭಾಕರ್, ವಿದುಷಿ ಶ್ರೀಮತಿ ಪಾರ್ವತಿ ಪದ್ಯಾಣ ಮತ್ತು ವಿದ್ವಾನ್ ಪ್ರಮೋದ್ ಮಂಗಳೂರು ಈ ಸ್ಪರ್ಧೆಗೆ ತೀರ್ಪುಗಾರರಾಗಿ ಆಗಮಿಸಿದ್ದರು.
ಒಂದೊಂದು ಬಗೆಯ ಸಂಗೀತ ಕಲರವವು ಕಾಲೇಜಿನ ಸೌಂದರ್ಯಕ್ಕೆ ಸ್ವರದ ಮುನ್ನುಡಿ ಬರೆದಿತ್ತು. ಆಗಸ್ಟ್ 30ರಂದು ಬೆಳಗ್ಗೆಯಿಂದ ಈ ಸ್ಪರ್ಧೆಯು ಪ್ರಾರಂಭವಾಗಿದ್ದು ಉಳಿದ ನಾಲ್ಕು ಸಂಗೀತ ಸ್ಪರ್ಧೆಯು ಶನಿವಾರವು ಮುಂದುವರೆಯಲಿದೆ. ಆದರೆ ಇಂತಹ ಗಾನ ಮಾಧುರ್ಯತೆಯು ಪ್ರತಿಯೊಬ್ಬ ಶೋತೃಗಳ ಮನಸನ್ನು ಹಿತಕರ ಮಾಡಿದ್ದು ಸುಳ್ಳಲ್ಲ.