ಪುತ್ತೂರು: ಭಾರತ ಆಧ್ಯಾತ್ಮಿಕ ದೇಶವೆಂದು ಗುರುತಿಸಿಕೊಂಡಿದೆ. ಇಲ್ಲಿನ ಸಂಸ್ಕೃತಿ, ಪರಂಪರೆಯು ವೈಶಿಷ್ಟ್ಯ ಪೂರ್ಣವಾಗಿದ್ದು ಇದರಲ್ಲಿ ಮಹಿಳೆಯರ ಕೊಡುಗೆ ವಿಶೇಷವಾದದ್ದು. ನಮ್ಮಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವಂತಹ ಸಾಂಸ್ಕೃತಿಕ ಉತ್ಸವಗಳು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ದಕ್ಷಿಣಕನ್ನಡ ಜಿಲ್ಲಾ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಹಾಗೂ ವಿವೇಕಾನಂದ ಮಹಾವಿದ್ಯಾಲಯದ ಸಹಕಾರದೊಂದಿಗೆ ಆಯೋಜಿಸಲಾದ ‘ಮಹಿಳಾ ಸಂಸ್ಕೃತಿ ಉತ್ಸವ’ದಲ್ಲಿ ಮುಖ್ಯ ಅತಿಥಿಗಳಾಗಿ ಶನಿವಾರ ಮಾತನಾಡಿದರು. ಭಾರತ ಮಾತೆಯ ಸುಪುತ್ರಿ ಕರ್ನಾಟಕ ಮಾತೆ ಮಹಿಳೆಯರ ಸಾಧನೆಯನ್ನೇ ಉದ್ದೇಶವನ್ನಾಗಿಸಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಹಾಗಾಗಿ ಪ್ರತಿಯೊಬ್ಬನು ಸಂಸ್ಕೃತಿಯನ್ನು ಅರಿತು ಇನ್ನಷ್ಟು ಇತಿಹಾಸವನ್ನು ನಿರ್ಮಿಸಬೇಕು ಎಂದರು. ಪಾಶ್ಚಾತ್ಯ ಸಂಸ್ಕೃತಿ, ವೇಷ-ಭೂಷಣ, ಆಹಾರ, ಆಚಾರ-ವಿಚಾರ ನಮ್ಮತನವನ್ನು ಕಳೆದುಕೊಳ್ಳುವಂತೆ ಮಾಡುತ್ತಿರುವಾಗಲೇ ಭಾರತದ ಮಹಿಳೆಯರ ವೇಷಭೂಷಣ ಇಂದು ವಿಶ್ವದೆಲ್ಲೆಡೆ ಭಾರತೀಯ ಮಹಿಳೆಯರು ಎಂದು ಗುರುತಿಸುವಷ್ಟರ ಮಟ್ಟಿಗೆ ನಮ್ಮ ಪರಂಪರೆ ಅಥವಾ ಸಂಸ್ಕೃತಿ ಹಬ್ಬಿದೆ ಎಂದು ತಿಳಿಸಿದರು. ಹಂಪಿಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಶಿಲ್ಪ ಪ್ರಕಾರಗಳನ್ನು ನೋಡಬಹುದು. ಅಲ್ಲಿ ಮಹಿಳೆಯರ ಪ್ರಾಶಸ್ತ್ಯ ಅಧಿಕವಾಗಿತ್ತು. ಏಕೆಂದರೆ ಪ್ರತಿಯೊಂದು ಸಂಸ್ಕಾರವನ್ನು, ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದವರು ಮಹಿಳೆಯರು ಹಾಗಾಗಿ ಇಂತಹ ಮಹಿಳಾ ಉತ್ಸವಗಳು ಮುಂದಿನವರಿಗೆ ಜ್ಞಾನವನ್ನು ನೀಡಿ ಭಾರತೀಯ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವ ದಾರಿ ದೀಪವಾಗಲಿ ಎಂದು ಹೇಳಿದರು.
ವಿವೇಕಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವಿ.ಜಿ. ಭಟ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯೊಂದಿಗೆ, ಕನಿಷ್ಟ ಒಂದು ಕಲೆಯ ಕುರಿತಾಗಿಯಾದರೂ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಕಲೆ ನಮ್ಮ ಮನಸ್ಸನ್ನು ಒತ್ತಡಗಳಿಂದ ಮುಕ್ತವಾಗಿಸಿ ಪ್ರಫುಲ್ಲವಾಗಿಡುವಲ್ಲಿ ಪರಿಣಾಮಕಾರಿ. ಸಾಂಸ್ಕೃತಿಕ ವಿಚಾರಗಳು ಸಂತಸದ ಮೂಲ ಎಂದು ಹೇಳಿದರು. ವಿದ್ಯಾರ್ಥಿ ದೆಸೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಕಷ್ಟು ಅವಕಾಶಗಳು ಇಂದು ಲಭ್ಯವಿದೆ. ಆದರೆ ಅದನ್ನು ಸದುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಕಲಿಕೆಯೊಂದಿಗೆ ಕಲಾಭಿರುಚಿಯನ್ನು ರೂಢಿಸಿಕೊಳ್ಳಿ. ಕಲೆಯನ್ನು ಬೆಳೆಸುವಲ್ಲಿ ಕಲಾಭಿಮಾನಿಗಳ ಪಾತ್ರ ಬಹುಮುಖ್ಯ ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಪ್ರೊ. ಎ.ವಿ. ನಾರಾಯಣ, ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಹೆಚ್ಚಿನ ಮಂದಿಗೆ ಸಿಗುತ್ತಿರಲಿಲ್ಲ. ಆದರೆ ಈಗ ಕಲಿಕೆಗೂ ಅವಕಾಶವಿದೆ. ಕಲಾವಿದರೂ ಬಹಳಷ್ಟು ಮಂದಿಯಿದ್ದಾರೆ. ಆದರೆ ಕಲಾಭಿಮಾನಿಗಳು, ಪ್ರೇಕ್ಷಕರು ಕಡಿಮೆಯಾಗುತ್ತಿದ್ದಾರೆ. ಮಾನಸಿಕ ಒತ್ತಡಗಳನ್ನು, ವೃತ್ತಿ ಬದುಕಿನ ಜಂಜಾಟಗಳ ನಡುವೆ ನಮ್ಮನ್ನು ಚಟುವಟಿಕೆಯಿಂದ ತುಂಬಿಕೊಳ್ಳುವಂತೆ ಮಾಡುವಲ್ಲಿ ನೃತ್ಯ, ಸಂಗೀತ ಮೊದಲಾದ ಕಲಾಪ್ರಕಾರಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಮಾತನಾಡಿ, ಈ ಕಾರ್ಯಕ್ರಮದ ಆಯೋಜನೆ ಮೂಲಕ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಕಲೆಯನ್ನು ಆಸ್ವಾದಿಸುವ, ಕಲೆಯ ಕುರಿತು ಜ್ಞಾನವನ್ನು ಪಡೆಯು, ಕಲೆಯನ್ನು ಅಭ್ಯಸಿಸುವಂತಾಗಲು ಪ್ರೇರಣೆಯಾಗಿದೆ. ಕೇವಲ ಕಲೆಯನ್ನು ಮನೋರಂಜನೆಗಾಗಿ ನೋಡದೆ, ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಆಯೋಜನೆಯಾಗಬೇಕು ಎಂದರು.
ಈ ಸಂದರ್ಭ ಕರ್ನಾಟಕ ಸರ್ಕಾರದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಹಾಗೂ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಉಪಸ್ಥಿತರಿದ್ದರು. ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀಶ ಕುಮಾರ ಎಂ. ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಮನಮೋಹನ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಈ ಸಾಂಸ್ಕೃತಿಕ ಉತ್ಸವದಲ್ಲಿ ಭಾಮಿನಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ, ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಿಂದ ಭರತನಾಟ್ಯ, ಅಕ್ಷತಾ ದೇವಾಡಿಗ ಅವರಿಂದ ಸ್ಯಾಕ್ಸೊಪೋನ್, ವಿದುಷಿ ವೈ.ಜಿ. ಶ್ರೀಲತ ಮತ್ತು ಬಳಗದಿಂದ ವೀಣಾವಾದನ, ವಿದುಷಿ ಶಾಲಿನಿ ಆತ್ಮಭೂಷಣ ಮತ್ತು ಬಳಗದಿಂದ ನೃತ್ಯರೂಪಕ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಿಂದ ನೃತ್ಯ ಭಜನೆ, ಅಕ್ಷತಾ ಮತ್ತು ಬಳಗ ಹಾಗೂ ಯಶಸ್ವಿನಿ ಮತ್ತು ಬಳಗದಿಂದ ಜಾನಪದ ನೃತ್ಯ, ಪವಿತ್ರ ವಿ ಮಯ್ಯ ಅವರಿಂದ ಸುಗಮ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…