ಪುತ್ತೂರು: ಮುಂದೆ ಮನುಕುಲಕ್ಕೆ ಭೀತಿಯನ್ನುಂಟು ಮಾಡಲಿರುವುದು ಯುದ್ಧವಲ್ಲ, ಹಸಿವು ಮತ್ತು ಮಾನವೀಯ ಮೌಲ್ಯಗಳ ಕುಸಿತ. ಆದ್ದರಿಂದ ನಮ್ಮ ಜ್ಞಾನವು ಜಗತ್ತಿನ ಹಸಿವನ್ನು ಹೋಗಲಾಡಿಸುವಂತಿರಬೇಕು. ಮನುಷ್ಯನು ಹೊಟ್ಟೆಯನ್ನೇ ಕೇಂದ್ರವಾಗಿಟ್ಟುಕೊಂಡು ಹಲವಾರು ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಹಾಗಾಗಿ ಹೊಟ್ಟೆ ಬಟ್ಟೆಯ ಚಿಂತೆಯನ್ನು ಬದಿಗಿಟ್ಟು ಒಳಿತು-ಕೆಡುಕುಗಳನ್ನು ಸಮಸಮವಾಗಿ ಸ್ವೀಕರಿಸಿ ಆತ್ಮಸಂತೋಷವನ್ನು ಪಡೆಯಬೇಕು ಎಂದು ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಜಲಪರಿಸರ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಮಗದ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಉಣ್ಣುವ ಬಾಯಿಗೆ, ದುಡಿಯುವ ಕೈಗಳು ಅವರದ್ದೇ ಆಗಬೇಕು. ಅನುಭವಿಸುವ ಸುಖವೆಲ್ಲಕ್ಕೂ, ನಮ್ಮದೇ ಬೆವರಿನ ಹನಿ ಇರಬೇಕು. ಹೀಗಾದರೆ ನಮಗೆ ದುಡಿದು ಮುನ್ನುಗ್ಗುವ ಮಾರ್ಗವು ತೋರುತ್ತದೆ. ಸಮಸ್ಯೆಗಳ ಬಗೆಗೆ ಚಿಂತಿಸುವ ಬದಲು, ಪರಿಹಾರದೆಡೆಗೆ ಆಲೋಚಿಸಿದರೆ ಸುತ್ತಲಿನ ಪರಿಸರ ಹಾಗೂ ಎಲ್ಲರೂ ಸುಖವಾಗಿರುವಂತೆ ಮಾಡಬಹುದು. ಹಾಗೆಯೇ ಎಲ್ಲರೂ ಆಸೆ, ಅಪೇಕ್ಷೆ, ಕನಸುಗಳನ್ನು ಇರಿಸಿಕೊಳ್ಳಬೇಕು. ಆ ಆಲೋಚನೆಗಳು ಹೇಗಿರಬೇಕು ಎಂದರೆ ಕಾಲು ಚಾಚಿದಲ್ಲೆಲ್ಲಾ ಹಾಸಿಗೆ ಇರಬೇಕು ಆದರೆ ಆ ಹಾಸಿಗೆ ನಮ್ಮದೇ ಆಗಿರಬೇಕು ಎಂದು ನುಡಿದರು.
ಅಹಂಕಾರ ಎಂಬುದು ಪ್ರತಿಯೊಬ್ಬನ ಶಕ್ತಿಯಾಗಬೇಕು. ಆದರೆ ಅದು ನಿರುಪದ್ರವಿ ಅಹಂಕಾರವಾಗಿರಬೇಕು. ಹಾಗಿದ್ದಾಗ ನಮ್ಮ ಕೀಳರಿಮೆಗಳನ್ನು ಹೋಗಲಾಡಿಸಿ, ನಮ್ಮನ್ನು ನಾವು ಪ್ರೀತಿಸುವಂತೆ ಮಾಡುತ್ತದೆ. ಅಂತೆಯೇ ಯಾವುದೇ ಕೆಲಸ ಮಾಡುವ ಮುನ್ನ ಆತ್ಮ ವಿಶ್ವಾಸವಿದ್ದರೆ ಅದುವೇ ನಮ್ಮನ್ನು ಉನ್ನತ ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಲೆಕ್ಕ ಪರಿಶೋಧಕ ದೀಪಕ್ ಕೆ. ಮಾತನಾಡಿ, ಯಾವುದೇ ಕಾರ್ಯದ ಉಗಮ ಆಲೋಚನೆ. ಅವು ಪ್ರಬಲವಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಏಕೆಂದರೆ ಆಲೋಚನೆಯ ಹಿಡಿತ ನಮ್ಮ ಕೈಯಲ್ಲೇ ಇರುತ್ತದೆ. ಅದುವೇ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತದೆ. ಅದಕ್ಕೆ ಎಂದೂ ವಯಸ್ಸಿನ ಮಿತಿ ಇಲ್ಲ ಎಂದರಲ್ಲದೆ, ಆಲೋಚನೆಗಳು ನಮಗೆ ದಾರಿದೀಪ. ಕನಸುಗಳು ಆಲೋಚನೆಗಳಾಗುತ್ತವೆ. ಆಲೋಚನೆಗಳು ಸೃಜನಶೀಲ ಕೃತಿಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಹೇಳಿದರು. ಪ್ರಪಂಚದ ಶೇ. 1 ರಷ್ಟು ಜನರು ಜಗತ್ತಿನ ಶೇ. 96 ಸಂಪತ್ತನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅಂತೆಯೇ ಉಳಿದ ಶೇ. 4 ಸಂಪತ್ತು ಮತ್ತಿತರರಿಗೆ ಹಂಚಿಹೋಗಿದೆ ಎಂದರು. ನಿನ್ನೆಯ ನಿರ್ಧಾರಿತ ಆಲೋಚನೆಗಳೇ, ಇಂದಿನ ಕಾಯಕ. ಇಂದಿನ ನಿರ್ಧಾರಗಳೇ ಮುಂದಿನ ಗೆಲುವಾಗುತ್ತದೆ. ಆದ್ದರಿಂದ ಯಾರಿಗೆಲ್ಲ ದೃಢವಾದ ಆಲೋಚನೆಗಳು ಇರುತ್ತದೆಯೋ ಅದುವೇ ಅಂತಿಮ ಗುರಿಯತ್ತ ಅವರನ್ನು ಕೊಂಡೊಯ್ಯುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ, ನಾವು ಯಾವ ಜಾಗದಲ್ಲಿ ಇದ್ದೇವೆ ಎಂಬುದು ಮುಖ್ಯವಲ್ಲ. ಏನು ಸಾಧಿಸಬೇಕು ಅಂದೊಕೊಂಡಿದ್ದೆವೋ ಅದೇ ಜೀವನಕ್ಕೆ ಮುಖ್ಯವಾಗುತ್ತದೆ. ಅದ್ದರಿಂದ ಎಲ್ಲರೂ ಒಂದು ನಿರ್ಧಿಷ್ಟ ಗುರಿಯನ್ನು ಇರಿಸಿಕೊಳ್ಳಬೇಕು ಎಂದು ಹೇಳಿದರು.
ಸಾವಿರ ಸವಾಲುಗಳು ಎದುರಾದಾಗಲೂ ಎದೆಗುಂದಬಾರದು. ಅವುಗಳನ್ನು ಧೈರ್ಯವಾಗಿ ನಿಭಾಯಿಸುವ ಮನೋಭಾವವನ್ನು ಬೆಳೆಸಿಕೊಂಡು ವಾಸ್ತವಕ್ಕೆ ಮುಖಮಾಡಿ ನಿಲ್ಲಬೇಕು. ಬದಲಾಗಿ ಸವಾಲನ್ನು ಎದುರಿಸದೆ ಪಲಾಯನ ಮಾಡಿದರೆ ಅದು ಹೇಡಿತನದ ಲಕ್ಷಣ ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ., ಸಂಚಾಲಕ ಸಂತೋಷ್ ಬಿ., ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಕೆ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಥಮ್ ಕಾಮತ್, ಕಾರ್ಯದರ್ಶಿ ಅಕ್ಷಯ್ ಹಾಗೂ ಸಹಕಾರ್ಯದರ್ಶಿ ಶಿವಾನಿ ಎಂ. ಉಪಸ್ಥಿತರಿದ್ದರು.
ಬಹುಮಾನ ವಿತರಣೆ: ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ನಡೆಯಿತು. ಪ್ರಾವೀಣ್ಯತಾ ಬಹುಮಾನ, ದತ್ತಿ ನಿಧಿ ಬಹುಮಾನ ಹಾಗೂ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಸಮಗ್ರ ಪ್ರಶಸ್ತಿಗಳನ್ನು ನೀಡಲಾಯಿತು. ಕ್ರೀಡಾ ಚಟುವಟಿಕೆಗಳ ಬಹುಮಾನಗಳನ್ನು ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಮಂಜುನಾಥ್ ವಾರ್ಷಿಕ ವರದಿ ವಾಚಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ರತ್ನಾವತಿ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ನಳಿನ ಕುಮಾರಿ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತಾ ಪಿ. ಕಾರ್ಯಕ್ರಮ ನಿರೂಪಿಸಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.