ಮಂಗಳೂರು: ವಿಶಾಖಾಪಟ್ಟಣಂ ನಲ್ಲಿ ವಿಷಾನಿಲ ಸೋರಿಕೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ತಿಳಿಸಿದ್ದಾರೆ.
ದೇಶ ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ‘ಭೋಪಾಲ್ ಅನಿಲ ದುರಂತ’ವನ್ನು ನೆನಪಿಸುವ ಗಂಭೀರ ಘಟನೆ ವಿಶಾಖಾಪಟ್ಟಣಮ್ ನಲ್ಲಿ ಘಟಿಸಿದೆ. ಘಟನೆಯಲ್ಲಿ 11 ಜನರು ಮೃತಪಟ್ಟಿದ್ದು ಅನೇಕರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ‘ಭೋಪಾಲ್ ಅನಿಲ ದುರಂತ’ದ ದೋಷಿಗಳಿಗೆ ಶಿಕ್ಷೆಯಾಗದ ಕಾರಣ ಅದರಲ್ಲಿ ಮೃತಪಟ್ಟ 20 ಸಾವಿರ ಜನರಿಗೆ ಹಾಗೂ ಸ್ಥಳಾಂತಗೊಂಡಿದ್ದ 5 ಲಕ್ಷ ಜನರಿಗೆ ಇದುವರೆಗೂ ನಿಜವಾದ ನ್ಯಾಯ ದೊರಕಿಲ್ಲ. ಇದೇ ಪರಿಸ್ಥಿತಿ ಪುನಃ ಉದ್ಭವಿಸಬಾರದೆಂದು ಸರಕಾರವು ವಿಶಾಖಾಪಟ್ಟಣಮ್ ನಲ್ಲಿ ದೋಷಿಗಳ ಮೇಲೆ ತಕ್ಷಣವೇ ಕಠಿಣ ಕ್ರಮಕೈಗೊಳ್ಳಬೇಕು. ಅದೇ ರೀತಿ ಇಂತಹ ಪರಿಸ್ಥಿತಿಯು ದೇಶದ ಇತರೆಡೆ ಉದ್ಭವಿಸಬಾರದೆಂದು ಘಾತಕ- ವಿಷಾನಿಲ ಬಳಸುವ ಯೋಜನೆಗಳನ್ನು ತಕ್ಷಣವೇ ಪರಿಶೀಲಿಸಿ ಅದರ ಸಮೀಕ್ಷೆ ನಡೆಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಹಾಗೂ ಕೇಂದ್ರ ಸರಕಾರವನ್ನುಆಗ್ರಹಿಸಿದೆ.
ಅನಿಲ ಸೋರಿಕೆಯಾಗಲು ಸಂಬಂಧಪಟ್ಟ ಕಂಪನಿಯಷ್ಟೇ ಅಲ್ಲದೇ ಅಲ್ಲಿ ಸುರಕ್ಷತೆಯನ್ನು ಕಠಿಣವಾಗಿ ಪಾಲಿಸದಿರುವ ಪರಿಸರ ಇಲಾಖೆ ಹಾಗೂ ಇತರ ಸಂಬಂಧಿತ ಸರಕಾರಿ ಇಲಾಖೆಗಳು ಜವಾಬ್ದಾರವಾಗಿವೆ. ಆದುದರಿಂದ ದೋಷಿ ಕಂಪನಿಗಳೊಂದಿಗೆ ಸರಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆಯೂ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.