ಮೂಡಬಿದ್ರೆ: ವೀರರಾಣಿ ಅಬ್ಬಕ್ಕ ಸಾವಿರಾರು ವರ್ಷಗಳ ಹಿಂದೆಯೇ ಫೋರ್ಚುಗೀಸರ ವಿರುದ್ಧ ಹೋರಾಡುವ ಮೂಲಕ ಭಾರತೀಯ ಮಹಿಳೆಯ ಶೌರ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ಮೂಡಬಿದ್ರೆಯಲ್ಲಿ ನಡೆಯುತ್ತಿರುವ 17 ನೇ ವರ್ಷದ ಕೋಟಿ ಚೆನ್ನಯ್ಯ ಕಂಬಳದಲ್ಲಿ ವೀರರಾಣಿ ಅಬ್ಬಕ್ಕ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು. ಅಂದಿನ ಯುಗದಲ್ಲಿ ಮಹಿಳೆಯೊಬ್ಬರು ದಂಡನಾಯಕತ್ವ ವಹಿಸಿರುವುದು ನಿಜಕ್ಕೂ ಅಪ್ರತಿಮವಾಗಿದೆ. ಅವರ ಪ್ರತಿಮೆ ಸ್ಥಾಪನೆ ಸಂತಸದ ಸಂಗತಿ ಎಂದು ಅವರು ಹೇಳಿದರು. ಕಂಬಳ ಕ್ರೀಡೆ ಉಳಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಕಂಬಳ ನಡೆಸಲು ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಾಗಿ ಬಂತು. ರಾಜ್ಯ ಸರಕಾರ ಇದಕ್ಕೆ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಮೂಡಬಿದ್ರೆ ತಾಲೂಕಿನ ಸಮಗ್ರ ಅಭಿವೃದ್ಧಿ ಗೆ ಸರಕಾರ ಹೆಚ್ಚಿನ ಅನುದಾನ ನೀಡಲಿದೆ ಎಂದು ಅವರು ಘೋಷಿಸಿದರು.ಇದೇ ಸಂದರ್ಭದಲ್ಲಿ ವೀರರಾಣಿ ಅಬ್ಬಕ್ಕ ಪ್ರತಿಮೆ ಅನಾವರಣ ಮಾಡಿದರು.
ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಇದ್ದರು. ಶಾಸಕ ಉಮಾನಾಥ ಕೋಟ್ಯಾನ್ ಸ್ವಾಗತಿಸಿದರು.