ಶಾಲೆಯಂಗಳದಲ್ಲಿ ಹಣ್ಣಿನ ಗಿಡ, ತರಕಾರಿ ಗಿಡ ಬೆಳೆಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.ಅನೇಕರಿಗೆ ಇದೊಂದು ಸಿಲ್ಲಿ ವಿಷಯ, ಆಗದ ಕೆಲಸ ಅಂತ ಅನಿಸಿಬಿಡುತ್ತದೆ. ಬಿಹಾರದಂತಹ ರಾಜ್ಯದಲ್ಲಿ ಮಕ್ಕಳಿಗೆ ಶಾಲೆಯಲ್ಲಿಯೇ ಸಾವಯವ ತರಕಾರಿ, ಹಣ್ಣುಗಳನ್ನು ಬೆಳೆದು ನೀಡಬೇಕು ಎಂಬ ಪ್ರಾಜೆಕ್ಟ್ ಸಿದ್ಧವಾಗುತ್ತಿದೆ. ಇದು ಬಿಹಾರದ ಕತೆಯಾದರೆ, ನಮ್ಮ ಗ್ರಾಮೀಣ ಭಾಗದ ಪುಣ್ಚಪ್ಪಾಡಿ ಶಾಲೆಯಲ್ಲಿ ಬೆಣ್ಣೆ ಹಣ್ಣು ಗಿಡ ಬೆಳೆಸಿ ಈಗ ಹಣ್ಣಾಗುವ ಹೊತ್ತಿಗೆ ಮಕ್ಕಳು ಖುಷಿಯಿಂದ ಶಾಲೆಯಲ್ಲೇ ತಿಂದು ಖುಷಿ ಪಟ್ಟರೆ ಪೌಷ್ಟಿಕ ಆಹಾರವೂ ಮಕ್ಕಳ ಪಾಲಿಗೆ ದಕ್ಕಿತು. ಇದು ಇನ್ನೊಂದಷ್ಟು ಶಾಲೆಗೆ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಈ ಕಡೆಗೆ ಫೋಕಸ್…..
ಬಿಹಾರದ 20,000 ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಶೀಘ್ರದಲ್ಲೇ ಸಾವಯವ ತರಕಾರಿಗಳು ಮತ್ತು ಹಣ್ಣುಗಳನ್ನು ಮಧ್ಯಾಹ್ನದ ಊಟಕ್ಕೆ ಬೆಳೆಯಲಿದ್ದಾರೆ. ಬಿಹಾರದ ಪೂರ್ಣಿಯಾ ಜಿಲ್ಲೆಯ 100 ಶಾಲೆಗಳಲ್ಲಿ ಯಶಸ್ವಿ ಪ್ರಾಯೋಗಿಕ ಯೋಜನೆಯ ನಂತರ, ರಾಜ್ಯವು ಅನೌಪಚಾರಿಕವಾಗಿ ಯೋಜನೆಯನ್ನು 4,000 ಶಾಲೆಗಳಿಗೆ ವಿಸ್ತರಿಸಿದೆ. ಈ ಯೋಜನೆಗೆ ಧನಸಹಾಯ ನೀಡಲು ಕೇಂದ್ರ ಸರಕಾರವೂ ಒಪ್ಪಿಗೆ ನೀಡಿದೆ. 75 ಶಾಲೆಗಳಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯಲು ಉಪಕರಣಗಳು, ಬೀಜಗಳು ಮತ್ತು ಸಸಿಗಳನ್ನು ಖರೀದಿಸಲು ಪ್ರತಿ ಶಾಲೆಗೆ 5,000 ರೂಪಾಯಿ ನೀಡಲಾಗುತ್ತಿದೆ. ಈ ಯೋಜನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಪುತ್ತೂರು ತಾಲೂಕಿನ ಗ್ರಾಮೀಣ ಭಾಗವಾದ ಪುಣ್ಚಪ್ಪಾಡಿ ಶಾಲೆಯಿಂದ ಅಂತಹದ್ದೇ ಸುದ್ದಿಯೊಂದು ಬಂದಿದೆ. ಇದು ಶಾಲೆಯವರೇ ಮಾಡಿರುವ ಪ್ರಯತ್ನ.
ಪುಣ್ಚಪ್ಪಾಡಿ ಶಾಲೆಯಂಗಳಕ್ಕೆ ಕಾಲಿಡುತ್ತಿದ್ದಂತೆ ಎದುರಾಗುವುದು ತೆಂಗು.. ಕಂಗು.. ಸಂಪಿಗೆ.. ನೆಲ್ಲಿ.. ಗೇರು.. ಹಲಸಿನ ಮರಗಳು.. ಜೊತೆಗೆ ವಿಶಿಷ್ಟ ಬೆಣ್ಣೆ ಹಣ್ಣಿನ ಮರವೊಂದು ತನ್ನತ್ತ ನಮ್ಮನ್ನು ಸೆಳೆಯುತ್ತದೆ. ಮರದ ತುಂಬಾ ಬೆಣ್ಣೆ ಹಣ್ಣಾಗಿದೆ. ಹೀಗಾಗಿ ಮಕ್ಕಳಿಗೆ ಖುಷಿಯೋ ಖುಷಿ.
ಪುಣ್ಚಪ್ಪಾಡಿ ಶಾಲೆಯ ಪ್ರೀತಿಯ ಬೆಣ್ಣೆ ಹಣ್ಣಿನ ಮರ ತನ್ನ ಮೈ ತುಂಬಾ ಕಾಯಿಗಳನ್ನು ಬಿಟ್ಟು ತೂಗಿದೆ. ಜೂನ್ ತಿಂಗಳ ಆರಂಭದಿಂದಲೂ ನಮ್ಮ ಮಕ್ಕಳಿಗೆ ಈ ಬೆಣ್ಣೆ ಹಣ್ಣುಗಳ ಮೇಲೆಯೇ ಆಕರ್ಷಣೆ. ಮರದಡಿಗೆ ಹೋಗಿ ಹಣ್ಣುಗಳನ್ನು ಮುಟ್ಟಿ ಲೆಕ್ಕ ಮಾಡದಿದ್ದರೆ ಆ ದಿನ ಮಕ್ಕಳಿಗೆ ಪೂರ್ಣವಾಗುವುದಿಲ್ಲ. ಬೆಳೆಯುವ ಪ್ರತೀ ಹಂತವನ್ನು ಮಕ್ಕಳು ಸಂಭ್ರಮಿಸಿದರು. ಅಂತೂ ಕಾಯಿಗಳೂ ಬಲಿತು, ಅವುಗಳನ್ನು ಕಟಾವು ಮಾಡಿದ್ದೂ ಆಯಿತು. ಬುಟ್ಟಿ ತುಂಬಿದ ಕಾಯಿಗಳು ಇದ್ದುದು 1 ಕ್ವಿಂಟಾಲ್ ನಷ್ಟು..! ಎಲ್ಲಾ ಮಕ್ಕಳಿಗೆ , ಮಕ್ಕಳ ಮನೆಗೂ ಹಂಚಿ ಉಳಿದುದನ್ನು ಶಾಲಾಭಿವೃದ್ಧಿಯ ಸಲುವಾಗಿ ಮಾರಾಟ ಮಾಡಲಾಯಿತು. ಶಾಲೆಗೆ ಕೊಂಚ ಆದಾಯವೂ ಆಯಿತು. ಕಳೆದ ವರ್ಷವೂ ಬೆಣ್ಣೆ ಹಣ್ಣು ಮಕ್ಕಳಿಗೆ ಇಷ್ಟವಾಗಿತ್ತು. ಹಣ್ಣಾದಾಗ ಅದನ್ನು ಮಕ್ಕಳು ತಿನ್ನುವ ಸಂಭ್ರಮ ನೋಡುವುದೇ ಆನಂದ. ಈ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವೂ ಲಭ್ಯವಾದಂತಾಗುತ್ತದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ರಶ್ಮಿತಾ ನರಿಮೊಗರು.
ಮೂಲತಃ ಮೆಕ್ಸಿಕೋ, ದಕ್ಷಿಣ ಅಮೆರಿಕಾದಲ್ಲಿ ಬೆಳೆಯುವ ಈ ಹಣ್ಣಿನಲ್ಲಿ ಅಗಾಧ ಪ್ರಮಾಣದ ಪೌಷ್ಟಿಕಾಂಶಗಳು ಇವೆ. ನಾರಿನಾಂಶ ಹಾಗೂ ಪ್ರೋಟೀನ್ ಹೇರಳವಾಗಿದೆ. ಮಧುಮೇಹ, ಸಂಧಿವಾತ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿಡುವುದು. ರೋಗ ನಿವಾರಣ ಶಕ್ತಿಯನ್ನು ಹೊಂದಿದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಮುಖದ ಮೇಲಿನ ಮೊಡವೆ ಸಮಸ್ಯೆಗೂ ರಾಮಬಾಣ. ಗರ್ಭಿಣಿಯರು ಖಾಲಿ ಹೊಟ್ಟೆಗೆ ಸೇವಿಸಿದರೆ ವಾಂತಿ ನಿಲ್ಲುತ್ತದೆ. ಬೆಣ್ಣೆ ಹಣ್ಣಿನ ಜ್ಯೂಸ್ ಗೆ ನಿಂಬೆರಸ ಬೆರೆಸಿ ಸೇವಿಸಿದರೆ ಉದರ ಶುದ್ಧಿಯಾಗುವುದು. ನೇರವಾಗಿಯೂ, ಮಿಲ್ಕ್ ಶೇಕ್ ಐಸ್ಕ್ರೀಮ್ ಗಳಲ್ಲಿ ಹೆಚ್ಚಾಗಿ ಬಳಸುವರು.
ಸುಮಾರು 20 ವರ್ಷಗಳ ಹಿಂದೆ ಇದೇ ಶಾಲೆಯ ಹಿರಿಯ ವಿದ್ಯಾರ್ಥಿನಿಯ ತಂದೆ ಶಾಲೆಗೆ ಈ ಗಿಡವನ್ನು ನೀಡಿದ್ದರು. ಅಂದು ನೆಟ್ಟ ಈ ಗಿಡವನ್ನು ಮಕ್ಕಳು, ಶಿಕ್ಷಕರು ಕಾಳಜಿಯಿಂದ ಪೋಷಿಸಿ ಬೆಳೆಸಿದ್ದಾರೆ. ಅಂದದ ಕಟ್ಟೆಯನ್ನೂ ಕಟ್ಟಲಾಗಿದೆ. ಇಂದಿಗೂ ಈ ಮರ ಮಕ್ಕಳ ಬೆಸ್ಟ್ ಫ್ರೆಂಡ್. ಬೇಸಿಗೆಯಲ್ಲಿ ಆಟಕ್ಕೂ, ಓದಿಗೂ ಇದು ಫೇವರೇಟ್ ಪ್ಲೇಸ್. ತಂಪಾದ ಗಾಳಿ, ನೆರಳೇ ಮಕ್ಕಳಿಗೆ ದಿ ಬೆಸ್ಟ್.
ಬಿಹಾರದಲ್ಲಿ ಶಾಲೆಯ ಮಕ್ಕಳಿಗೆ ಸಾವಯವ ಪೌಷ್ಟಿಕ ಆಹಾರವನ್ನು ಮಧ್ಯಾಹ್ನದ ಊಟದ ಜೊತೆ ನೀಡುವ ಯೋಜನೆಯನ್ನು ರೂಪಿಸಿದ್ದಾರೆ. ಮಧ್ಯಾಹ್ನದ ಊಟದ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪೌಷ್ಠಿಕಾಂಶವನ್ನು ಒದಗಿಸಲು ಅಲ್ಲಿನ ಸರಕಾರ ಪಣತೊಟ್ಟಿದೆ. ಕಿಚನ್ ಗಾರ್ಡನ್‌ಗಳನ್ನುಈಗ ನ್ಯೂಟ್ರಿಷನ್ ಗಾರ್ಡನ್ಸ್ ಎಂದೇ ಹೆಸರಿಸಿ ಕರೆಯಲಾಗುತ್ತದೆ, ಈ ಶಾಲೆಗಳಲ್ಲಿ ತರಕಾರಿಗಳನ್ನು ಸಾವಯವವಾಗಿ ಬೆಳೆಯಲಾಗುತ್ತದೆ. ಆಹಾರದಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸುವುದು, ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹಸಿರು ಹೆಚ್ಚಿಸುವುದು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಇದರ ಹಿಂದಿನ ಉದ್ದೇಶ ಎಂದು ಬಿಹಾರ ರಾಜ್ಯದ ಶಾಲಾ ಬಿಸಿಯೂಟ ವಿಭಾಗದ ಉಪನಿರ್ದೇಶಕ ಜೀವೇಂದ್ರ ಹೇಳುತ್ತಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 ರ ಪ್ರಕಾರ ಐದು ವರ್ಷದೊಳಗಿನ ಮಕ್ಕಳಲ್ಲಿ ಶೇಕಡಾ 44 ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ, 15.2 ರಷ್ಟು ಜನರು ತೀವ್ರ ತೂಕ ಹೊಂದಿದ್ದಾರೆ. ಪೈಲಟ್ ಯೋಜನೆಯ ಸಮಯದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದ ಕ್ಯಾಲೊರಿಯುತ ತರಕಾರಿಗಳನ್ನು ಬೆಳೆದಿದ್ದಾರೆ. ಎಲ್ಲವೂ ಸಾವಯವ ಮಾದರಿಯಲ್ಲೇ ಬೆಳೆಯಲಾಗಿದೆ ಎನ್ನುವುದು ಬಿಹಾರದ ಯೋಜನೆಯ ವರದಿ.
Advertisement