ಸುಳ್ಯ: ರಾಜ್ಯದಲ್ಲಿ ಶಾಸಕರನ್ನು ಖರೀದಿ ಮಾಡಿ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿದ ಬಿಜೆಪಿಗೆ ಡಿ.ಸಿ.ಸಿ.ಬ್ಯಾಂಕ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವ ನೈತಿಕತೆ ಇದೆಯೇ ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಡವಳಿಕೆ ಸಂವಿಧಾನದ ಕಗ್ಗೊಲೆ. ಮುಂದೆ ಇದರ ಪರಿಣಾಮ ಗೊತ್ತಾಗುತ್ತದೆ. ಹೀಗೆ ವಾಮಮಾರ್ಗದಲ್ಲಿ ಎಲ್ಲ ರಾಜ್ಯಗಳಲ್ಲೂ ಅಧಿಕಾರ ಹಿಡಿಯಲು ಪ್ರಯತ್ನಿಸಿದರೆ ಜನ ದಂಗೆ ಏಳುವ ಸ್ಥಿತಿ ಬರಬಹುದು. ಬಿಜೆಪಿ ಕುದುರೆ ವ್ಯಾಪಾರದ ಮೂಲಕ ಶಾಸಕರನ್ನು ಖರೀದಿ ಮಾಡಿದೆ. ಅದು ಸರಿ ಎಂದಾದರೆ ಇಲ್ಲಿ ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಪರ ಮತ ಚಲಾಯಿಸಿದವರ ಮೇಲೆ ಯಾಕೆ ಕ್ರಮ ಕೈಗೊಂಡಿದ್ದಾರೆ. ಯಾಕೆ ಅಂತವರನ್ನು ಬಲಾತ್ಕಾರದಿಂದ ರಾಜೀನಾಮೆ ಕೊಡಿಸಿದಿರಿ ಎಂಬುದಕ್ಕೆ ಬಿಜೆಪಿ ನಾಯಕರು ಉತ್ತರಿಸಬೇಕು. ಸುಳ್ಯ ನ.ಪಂ.ನಲ್ಲಿ ನಾವು 4 ಸ್ಥಾನ ಗೆದ್ದಿದ್ದೇವೆ. 2 ಮಂದಿ ಪಕ್ಷೇತರರು ನಮ್ಮ ಜೊತೆಗಿದ್ದಾರೆ. ನಾವು ಅಧಿಕಾರ ನಡೆಸುತ್ತೇವೆ ಎಂದು ಬಿಜೆಪಿಯವರಿಗೆ ಆಹ್ವಾನ ಕೊಟ್ಟರೆ ಅವರ ಸದಸ್ಯರು ಬರುತ್ತಾರೆಯೇ, ಅದು ಸರಿ ಕಾಣುತ್ತದೆಯೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಪರವಾಗಿ ನಿಂತ ನಾಯಕ. ಅವರ ಸಾಲಮನ್ನಾ ಯೋಜನೆ ರೈತರಿಗೆ ಮುಟ್ಟಿದೆ. 1ಲಕ್ಷ ಸಾಲ ಮನ್ನಾ ಪಡೆದ ನಾಯಕರೊಬ್ಬರ ಮಗನೇ ನಿನ್ನೆ ಮುಖ್ಯಮಂತ್ರಿ ಸೋತ ಹಿನ್ನಲೆಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಇಂಥವರಿಗೆ ಕನಿಷ್ಟ ಕೃತಜ್ಞತೆ ಭಾವನೆಯಾದರೂ ಬೇಡವೇ ಎಂದು ಪ್ರಶ್ನಿಸಿದರು.
ಸಂವಿಧಾನದ ಎಲ್ಲ ಅಂಗಗಳನ್ನು ಕೇಂದ್ರ ಸರ್ಕಾರ ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಖರೀದಿಯಾದ ಶಾಸಕರು ಮರಳಿ ಬಂದರೂ ಕಾಂಗ್ರೆಸ್ ಅವರಿಗೆ ಪ್ರವೇಶ ನೀಡದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಧರ್ಮಪಾಲ ಕೊಯಿಂಗಾಜೆ, ಮಹಮ್ಮದ್ ಪವಾಝ್ ಕನಕಮಜಲು , ಲಕ್ಷ್ಮಣ ಶೆಣೈ ಉಪಸ್ಥಿತರಿದ್ದರು.