ಶಿರಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ರಸ್ತೆ ಬ್ಲಾಕ್ ಆಗಿದ್ದು ವಾಹನಗಳ ಸಾಲು ಸಾಲು ಕಂಡುಬಂದಿದೆ. ಶುಕ್ರವಾರ ಬೆಳಗ್ಗಿನವರೆಗೂ ರಸ್ತೆ ಬ್ಲಾಕ್ ಮುಂದುವರಿದಿದ್ದು , ರಸ್ತೆಯಲ್ಲಿ ಕಾರಿ ಕೆಟ್ಟು ನಿಂತು ಸಮಸ್ಯೆಯಾಗಿದೆ. ಇದೀಗ ಟ್ರಾಫಿಕ್ ಜಾಂ ಸರಿಯಾಗಿದ್ದು ಸುಗಮ ಸಂಚಾರ ಇದೆ. ಆದರೆ ಪದೇ ಪದೇ ಘಾಟಿ ರಸ್ತೆಯಲ್ಲಿ ಉಂಟಾಗುವ ಈ ಸಮಸ್ಯೆಗೆ ಪರಿಹಾರ ಏನು ?
ಕಳೆದ ಹಲವು ದಿನಗಳಿಂದ ಇದೇ ರೀತಿ ಪದೇಪದೇ ಬ್ಲಾಕ್ ಆಗುತ್ತಿದ್ದು ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ. ಬೆಳಗಿನ ಜಾವ ಮಂಗಳೂರು, ಸುಬ್ರಹ್ಮಣ್ಯ, ಪುತ್ತೂರು ತಲುಪಬೇಕಾದ ಬಸ್ಸುಗಳು ತಡವಾಗುತ್ತಿದೆ. ಹೀಗಾಗಿ ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ . ಇಂದು ಕೂಡಾ ಶಿರಾಡಿ ಘಾಟ್ ಬ್ಲಾಕ್ ಆಗಿ ಪ್ರಯಾಣಿಕರು ಪರದಾಟ ನಡೆಸುವಂತಾಯಿತು. ಬೆಳಗ್ಗೆ 5 ಗಂಟೆಗೆ ತಲುಪಬೇಕಾದ ಬಸ್ಸುಗಳು ಬೆಳಗ್ಗೆ 8.30 ರ ಹೊತ್ತಿಗೆ ತಲಪಿದವು.
ಸಕಲೇಶಪುರ – ಗುಂಡ್ಯ ನಡುವೆ ಆಗಾಗ ರಸ್ತೆ ಬ್ಲಾಕ್ ಆಗುತ್ತಿದೆ. ಘನ ವಾಹನಗಳು ಕೆಟ್ಟು ನಿಲ್ಲುವುದು ಹಾಗೂ ಸೈಡ್ ಗೆ ಹೋಗುವುರಿಂದ ಇತರ ವಾಹನಗಳ ಓಡಾಟಕ್ಕೆ ಕಷ್ಟವಾಗುತ್ತಿದೆ. ಬೆಳಗಿನ ಜಾವ ನೂರಾರು ಬಸ್ಸುಗಳು ಬೆಂಗಳೂರು ಕಡೆಯಿಂದ ಆಗಮಿಸುವ ವೇಳೆ ಒಮ್ಮೆಲೇ ರಸ್ತೆ ಬ್ಲಾಕ್ ಆಗುತ್ತಿದೆ. ಈ ರೀತಿಯಾಗಿ ಕಳೆದ ಹಲವು ದಿನಗಳಿಂದ ಸಮಸ್ಯೆಯಾಗುತ್ತಿದ್ದು ಜಿಲ್ಲಾಡಳಿತ , ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಬೆಳಗಿನ ಜಾವ ಲಾರಿಗಳ ಓಡಾಟಕ್ಕೆ ತಡೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಬೆಳಗ್ಗೆ ಸುಬ್ರಹ್ಮಣ್ಯ ತಲುಪಬೇಕಾದ ಬಸ್ಸು ಇನ್ನೂ ಶಿರಾಡಿ ಘಾಟಿಯಲ್ಲಿಯೇ ಇದೆ. ನಿಧಾನವಾಗಿ ಚಲಿಸುತ್ತಿದೆ. ರಸ್ತೆ ಬ್ಲಾಕ್ ಆಗಿರುವುದು ಸದ್ಯ ಸಮಸ್ಯೆಗೆ ಕಾರಣವಾಗಿದೆ. ಪದೇ ಪದೇ ಈ ರೀತಿ ಬ್ಲಾಕ್ ಆಗುತ್ತಿದೆ ಎಂದು ಬಸ್ಸು ಚಾಲಕ ಹೇಳುತ್ತಾರೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ ಪ್ರಯಾಣಿಕ ಶಂಕರ್ ಕುಮಾರ್.