ಮಂಗಳೂರು: ಪರಿಸರ ವೀಕ್ಷಣೆ ಮಾಡುವ, ಖಗೋಳದ ಬದಲಾವಣೆ ತಿಳಿಯುವ ಮಂದಿಗೆ ಎ.24 ಹಾಗೂ 25 ಆಸಕ್ತಿಯ ದಿನ. ಅಂದು ಕೆಲ ಹೊತ್ತು ಶೂನ್ಯ ನೆರಳು ದಿನ ಅಥವಾ ಜೀರೋ ಶ್ಯಾಡೋ ಡೇ. ಮಂಗಳೂರಿನಲ್ಲಿ ಎ.24 ರಂದು ಅಪರಾಹ್ನ 12.28 ಕ್ಕೆ ಹಾಗೂ ಉಡುಪಿಯಲ್ಲಿ ಎ.25 ರಂದು ಅಪರಾಹ್ನ 12.29 ಕ್ಕೆ ವೀಕ್ಷಿಸಬಹುದಾಗಿದೆ.
ಪ್ರತೀ ವರ್ಷವೂ ಈ ವಿದ್ಯಮಾನ ನಡೆಯುತ್ತದೆ. ಈಗ ಲಾಕ್ಡೌನ್ ಇರುವುದರಿಂದ ಎಲ್ಲರೂ ಈ ವಿದ್ಯಮಾನವನ್ನು ಅನುಭವಿಸಬಹುದು. ಪ್ರತೀ ವರ್ಷದಲ್ಲಿ ಎಪ್ರಿಲ್ ಹಾಗೂ ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಶೂನ್ಯ ನೆರಳು ಬರುತ್ತದೆ. ಕರಾವಳಿಯಲ್ಲಿ ಎಪ್ರಿಲ್ 24 ಹಾಗೂ 25 ರಂದು ಶೂನ್ಯ ನೆರಳು ಸಂಭವಿಸುವ ದಿನ. ಮಂಗಳೂರಿನಲ್ಲಿ ಎ.24ರಂದು ಅಪರಾಹ್ನ 12.28ಕ್ಕೆ ಹಾಗೂ ಆಗಸ್ಟ್‌ನಲ್ಲಿ 18 ರಂದ ಅಪರಾಹ್ನ 12.33ಕ್ಕೆ ವೀಕ್ಷಿಸಬಹುದು. ಉಡುಪಿಯಲ್ಲಿ ಎ.25ರಂದು ಅಪರಾಹ್ನ 12.29ಕ್ಕೆ ಹಾಗೂ ಆಗಸ್ಟ್ 17 ರಂದು ಅಪರಾಹ್ನ 12.34ಕ್ಕೆ ವೀಕ್ಷಿಸಬಹುದಾಗಿದೆ.
ಬೆಂಗಳೂರಿನಲ್ಲಿ 12:17 ಕ್ಕೆ ವೀಕ್ಷಿಸಬಹುದು. ಮೂಡುಬಿದ್ರೆ, ಬಂಟ್ವಾಳ, ಸಕಲೇಶಪುರ ಹಾಗೂ ಹಾಸನದಲ್ಲಿ ಸಹ ಎ.24ರಂದು ಶೂನ್ಯ ನೆರಳು ದಿನ ಇರಲಿದೆ.
ಈ ಅಪರೂಪದ ಕ್ಷಣವನ್ನು ನೋಡಲು ಮರೆಬೇಡಿ. ಸಾಮಾನ್ಯವಾಗಿ ಬೆಳಗಿನಿಂದ ಮಧ್ಯಾಹ್ನವಾಗುತ್ತಲೇ ನೆರಳಿನ ಉದ್ದ ಕಡಿಮೆಯಾಗುತ್ತಾ, ಸಂಜೆಯಾದಂತೆ ಹೆಚ್ಚುತ್ತಾ ಹೋಗುತ್ತದೆ. ಆದರೆ ಈ ಶೂನ್ಯ ನೆರಳಿನ ದಿನದಂದು ನೆರಳು ಅಕ್ಕಪಕ್ಕದಲ್ಲಿ ಎಲ್ಲೂ ಕಾಣಿಸುವುದಿಲ್ಲ. ಆಕಾಶದಲ್ಲಿ ಸೂರ್ಯ ಲಂಬವಾಗಿ ಚಲಿಸುವಾಗ ನಮ್ಮ ನೆರಳು ನಮ್ಮ ಪಾದಕ್ಕೆ ಹೊಂದಿಕೊಂಡಂತೆ ರಚನೆಯಾಗುತ್ತದೆ. ಆಗ ನಮ್ಮ ನೆರಳು ಸರಿಯಾಗಿ ನಮ್ಮ ಕೆಳಗೆ ಇರುತ್ತದೆ. ಹಾಗಾಗಿ ಅದು ಕಾಣುವುದಿಲ್ಲ. ಇದನ್ನು ಶೂನ್ಯ ನೆರಳು ಎಂದು ಕರೆಯಲಾಗುತ್ತದೆ.
ಕರ್ಕಾಟಕ ವೃತ್ತದ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬಾರಿ ‘ಶೂನ್ಯ ನೆರಳಿನ ದಿನ’ ಕಾಣಬಹುದು. ಅಂದರೆ ಭೂಮಿ ಸೂರ್ಯನ ಸುತ್ತ ಚಲಿಸುತ್ತಿರುವಾಗ ಅದು 23.5 ಡಿಗ್ರಿ ದಕ್ಷಿಣ ಅಕ್ಷಾಂಶ (ಮಕರ ಸಂಕ್ರಾಂತಿ ವೃತ್ತ) ಮತ್ತು 23.5 ಡಿಗ್ರಿ ಉತ್ತರ (ಕರ್ಕಾಟಕ ವೃತ್ತ) ಇವುಗಳ ನಡುವೆ ಹಾದು ಹೋಗುವ ಸಂದರ್ಭದಲ್ಲಿ ಶೂನ್ಯ ನೆರಳಿನ ದಿನ ಉಂಟಾಗುತ್ತದೆ. ಈ ವೃತ್ತಗಳಿಂದಾಚೆ ಇರುವ ಪ್ರದೇಶಗಳಲ್ಲಿ ಶೂನ್ಯ ನೆರಳು ಉಂಟಾಗುವುದೇ ಇಲ್ಲ ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಾರೆ.
ಹೀಗೂ ಗುರುತಿಸಬಹುದು : ಶೂನ್ಯ ನೆರಳಿನ ದಿನ ಗಮನಿಸಲು ಒಂದು ಲೋಟ ಅಥವಾ ಯಾವುದಾದರೂ ಉದ್ದವಾದ ಕಂಬವನ್ನು ಬಿಸಿಲಿನಲ್ಲಿ ನೆಟ್ಟು ಇದನ್ನು ಪತ್ತೆ ಹಚ್ಚಬಹುದಾಗಿದೆ. ಇಲ್ಲಿ ಅವುಗಳ ನೆರಳು ಅಕ್ಕಪಕ್ಕ ಎಲ್ಲೂ ಬೀಳುವುದಿಲ್ಲ. ಪ್ರತಿಯೊಬ್ಬರು ಇದನ್ನು ಪರೀಕ್ಷಿಸಬಹುದು.