ರಾಜ್ಯದ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಯಂಸೇವಕರಿಂದ ನಡೆಯಿತು. ಈ ಸ್ವಚ್ಛತಾ ಕಾರ್ಯ ನಿರಂತರವಾಗಿ ಭಕ್ತರಿಂದಲೂ ನಡೆಯಲಿ, ನಡೆಯಬೇಕು….
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಆ. 8 ರಿಂದ 15 ರ ವರೆಗೆ ರಾಜ್ಯದೆಲ್ಲೆಡೆ 9916 ಶ್ರದ್ಧಾ ಕೇಂದ್ರಗಳಲ್ಲಿ ನಡೆದ ಸ್ಚಚ್ಛತಾ ಅಭಿಯಾನದಲ್ಲಿ 3,56,840 ಸ್ವಯಂ ಸೇವಕರು ಭಾಗವಹಿಸಿ ಅಭಿಯಾನ ಯಶಸ್ವಿಗೊಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಮತ್ತು ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ ಸ್ವಚ್ಛತಾ ಅಭಿಯಾನದಲ್ಲಿ 9476 ದೇವಸ್ಥಾನಗಳು, 15 ಬಸದಿಗಳು, 37 ಚರ್ಚ್‍ಗಳು, 184 ಮಸೀದಿಗಳು ಹಾಗೂ 204 ಇತರ ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕಾಸರಗೋಡು ಸೇರಿದಂತೆ ರಾಜ್ಯದ ಒಟ್ಟು 31 ಜಿಲ್ಲೆಗಳಲ್ಲಿ ಸ್ಚಚ್ಛತಾ ಅಭಿಯಾನ ನಡೆಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿಅತಿ ಹೆಚ್ಚು (1020) ಶ್ರದ್ಧಾಕೇಂದ್ರಗಳಲ್ಲಿ ಸ್ಚಚ್ಛತಾ ಅಭಿಯಾನ ನಡೆಸಿದ್ದು ಗರಿಷ್ಠ ಸಂಖ್ಯೆಯಲ್ಲಿ (34,543) ಸ್ವಯಂ ಸೇವಕರು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 2017 ರಿಂದ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಪ್ರಾರಂಭಿಸಿದ್ದು ಪ್ರತಿವರ್ಷ ಆ. 8 ರಿಂದ 15 ರ ವರೆಗೆ ಶ್ರದ್ಧಾಕೇಂದ್ರಗಳ ಸ್ವಚ್ಛತಾಅಭಿಯಾನ ನಡೆಸಲಾಗುತ್ತದೆ.