ದಾನಿಗಳ ನೆರವಿನಿಂದ ಸುಂದರವಾದ ಮನೆಯೊಂದು ಶ್ರಮಸೇವೆಯ ಮೂಲಕವೇ ನಡೆಯಿತು. ಸಮಾಜದಲ್ಲಿ ನೊಂದವರಿಗೆ, ಅಶಕ್ತರಿಗೆ ಸ್ಪಂದಿಸುವ ಅನೇಕ ಮನಸ್ಸುಗಳು ಇಂದಿಗೂ ಇವೆ. ಈ ಮನಸ್ಸುಗಳಿಂದಲೇ ಸಮಾಜದಲ್ಲಿ ಒಂದಷ್ಟು ನೆಮ್ಮದಿ, ಭರವಸೆಯ ಬೆಳಕು ಹರಿಯುತ್ತಿದೆ. ಇಂತಹ ಸುದ್ದಿಗಳ ಕಡೆಗೆ ಸದಾ ನಮ್ಮ ಫೋಕಸ್ ಇರುತ್ತದೆ. ಇಂದೂ ಮತ್ತೊಮ್ಮೆ ಬೆಳಕು….
ಸುಳ್ಯ: ಒಬ್ಬ ಅಧಿಕಾರಿಯ ಕಾಳಜಿ, ಕರುಣೆ ಬತ್ತದ ಒಂದಿಷ್ಟು ಮನಸ್ಸುಗಳು, ಉತ್ಸಾಹಿ ಯುವ ಮನಸ್ಸುಗಳ ಶ್ರಮ ಸೇವೆ ಇವಿಷ್ಟು ಒಟ್ಟು ಸೇರಿದಾಗ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನಿರ್ಗತಿಕ ಕುಟುಂಬಕ್ಕೆ ಸುಂದರ ಸೂರು ತಲೆ ಎತ್ತಿ ನಿಂತಿತು.
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ದಾನಿಗಳ ಸಹಕಾರದಿಂದ, ಯುವ ಸಂಘಟನೆಗಳ ಶ್ರಮದಾನದ ಫಲವಾಗಿ ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ನೇತೃತ್ವದಲ್ಲಿ ಮನೆ ನಿರ್ಮಾಣಗೊಂಡಿದೆ. ಅಜ್ಜಾವರ ಗ್ರಾಮದ ರಾಮಣ್ಣ ನಾಯ್ಕ-ಲಲಿತ ದಂಪತಿಗಳ ಕುಟುಂಬ ರಸ್ತೆ ಬದಿಯಲ್ಲಿ ಜೋಪಡಿಯಲ್ಲಿ ವಾಸವಾಗಿತ್ತು. ಮಳೆ ಗಾಳಿ ಬಂದು ಗುಡಿಸಲು ಕುಸಿದು ಬಿದ್ದಾಗ ತಹಶೀಲ್ದಾರ್ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಈ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಿದರು.
ಬಳಿಕ ತಹಶೀಲ್ದಾರ್ ಅವರು ಸಮಾನ ಮನಸ್ಕರೊಂದಿಗೆ ಚರ್ಚಿಸಿ ಈ ಕುಟುಂಬಕ್ಕೆ ಒಂದು ಮನೆ ನಿರ್ಮಿಸಿ ಕೊಡುವ ಯೋಜನೆ ರೂಪಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ಮತ್ತಿತರ ರೀತಿಯಲ್ಲಿ ವಿನಂತಿಸಿದಾಗ ನೆರವಿನ ಮಹಾಪೂರವೇ ಹರಿದು ಬಂತು. ಮನೆ ನಿರ್ಮಾಣ ಸಾಮಾಗ್ರಿಗಳನ್ನು ದಾನಿಗಳು ನೀಡಿದರೆ, ನಿರ್ಮಾಣ ಕಾರ್ಯವನ್ನು ವಿವಿಧ ಸಂಘಟನೆಗಳ ಕಾರ್ಯಕರ್ತರು ಮಾಡಿಕೊಟ್ಟರು. ತಹಶೀಲ್ದಾರ್ ಕುಂಞ ಅಹಮ್ಮದ್ ಕಾಳಜಿ ಜೊತೆಗೆ ಸಾಮಾಜಿಕ ಕಾರ್ಯಕರ್ತರಾದ ವಿನೋದ್ ಲಸ್ರಾದೋ ಮತ್ತು ಲೋಕೇಶ್ ಗುಡ್ಡೆಮನೆ ಹಾಗು ತಂಡದ ಅವಿರತ ಪ್ರಯತ್ನವೂ ಮನೆ ಎದ್ದು ನಿಲ್ಲುವಂತೆ ಮಾಡಿದೆ.
13 ದಿನದಲ್ಲಿ ತಲೆ ಎತ್ತಿದ “ಶ್ರಮಧಾಮ”: ಮನೆ ನಿರ್ಮಾಣಕ್ಕೆ ಅಗತ್ಯವಾದ ಕಲ್ಲು, ಸಿಮೆಂಟ್, ಇಟ್ಟಿಗೆ, ಮರಳು, ಶೀಟ್, ಪೆಯಿಂಟ್, ಬಾಗಿಲು, ಕಿಟಕಿ ಹೀಗೆ ಎಲ್ಲವನ್ನೂ ಸುಳ್ಯದ ದಾನಿಗಳು ಉಚಿತವಾಗಿ ಒದಗಿಸಿ ಕೊಟ್ಟರು. ನಿರ್ಮಾಣ ಕಾರ್ಯಕ್ಕೆ ಯುವ ಬ್ರಿಗೇಡ್, ಎಸ್‍ಕೆಎಸ್‍ಎಸ್‍ಎಫ್ ವಿಖಾಯ ತಂಡ, ಎಸ್‍ಎಸ್‍ಎಫ್, ಎವೈಎಸ್ ಹೀಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೈ ಜೋಡಿಸಿದರು. ಇವರ ಶ್ರಮದಾನದಿಂದಲೇ ಪೂರ್ತಿಯಾಗಿ ಮನೆ ನಿರ್ಮಾಣಗೊಂಡಿದೆ. ಪ್ರತಿ ದಿನ ಒಂದೊಂದು ಸಂಘಟನೆಗಳ ಕಾರ್ಯಕರ್ತರು ಮಳೆ ಬಿಸಿಲು ಲೆಕ್ಕಿಸದೆ ನಿರಂತರವಾಗಿ ಕೆಲಸ ಮಾಡಿದ ಕಾರಣ ಕೇವಲ 13 ದಿನದಲ್ಲಿ ಶ್ರಮದಾನದಿಂದಲೇ ಶ್ರಮಧಾಮ ಪೂರ್ತಿಯಾಗಿದೆ. ಮನೆ ನಿರ್ಮಾಣಕ್ಕಾಗಿ ಸುಮಾರು ಎರಡೂ ಲಕ್ಷ ರೂ ವೆಚ್ಚದ ಸಾಮಾಗ್ರಿಗಳನ್ನು ದಾನಿಗಳು ಕೊಡುಗೆಯಾಗಿ ನೀಡಿದರು. ಮನೆಗೆ ನೀರು, ಬೆಳಕಿನ ವ್ಯವಸ್ಥೆಯನ್ನೂ ಒದಗಿಸಲಾಗಿದೆ.
ನಿರ್ಗತಿಕ ಕುಟುಂಬಕ್ಕೆ ದಾಖಲೆಗಳೇ ಇರಲಿಲ್ಲ:ದಂಪತಿ ಮತ್ತು ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಪುತ್ರಿ ಒಳಗೊಂಡ ರಾಮಣ್ಣ ನಾಯ್ಕ ಅವರ ಕುಟುಂಬ ಅಜ್ಜಾವರ ಗ್ರಾಮದ ಅಡ್ಪಂಗಾಯ ಮಾವಿನಪಳ್ಳ ಪರಿಸರದಲ್ಲಿ ಸಣ್ಣ ಗುಡಿಸಲು ಕಟ್ಟಿ ಅದರಲ್ಲಿ ವಾಸವಾಗಿದ್ದರು. ಗುಡಿಸಲಿನಲ್ಲಿ ವಾಸವಾಗಿದ್ದ ಇವರಿಗೆ ಸರ್ಕಾರಿ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡುವ ಎಂದರೆ ಇವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮನೆ ನಂಬರ್ ಯಾವುದೇ ದಾಖಲೆಗಳೂ ಇರಲಿಲ್ಲ. ಆದುದರಿಂದ ಇವರಿಗೆ ವಸತಿ ಯೋಜನೆಗಳಲ್ಲಿ ಸೇರಿದಿ ಮನೆ ನೀಡುವುದು ಕಷ್ಟವಾಗಿತ್ತು. ಈ ಕುಟುಂಬ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತವಾಗಿತ್ತು. ತಕ್ಷಣಕ್ಕೆ ಇವರಿಗೆ ಸರ್ಕಾರದಿಂದ ಮನೆ ಸಿಗುವುದು ಕಷ್ಟ ಸಾಧ್ಯ ಎಂದು ತಿಳಿದು ಅಲ್ಲೇ ಸರ್ಕಾರಿ ಜಾಗ ಗುರುತಿಸಿ ದಾನಿಗಳ ಮತ್ತು ಯುವ ಸಂಘಟನೆಗಳ ಸಹಕಾರದಿಂದ ಮನೆ ಪೂರ್ತಿ ಮಾಡಲಾಗಿದೆ ಎಂದು ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಹೇಳಿದ್ದಾರೆ. ಇವರಿಗೆ ಅಕ್ಕಿ, ಬಟ್ಟೆ ಮತ್ತಿತರ ಸಾಮಾಗ್ರಿಗಳನ್ನು ಒದಗಿಸಲಾಗಿದೆ. ಪಡಿತರ, ಆಧಾರ್ ಕಾರ್ಡ್ ಒದಗಿಸುವ ವ್ಯವಸ್ಥೆ ಆಗಿದೆ ಎಂದು ಅವರು ಹೇಳಿದ್ದಾರೆ.
“ಬೆಳಕು”ಹಸ್ತಾಂತರ ನಾಳೆ:ರಾಮಣ್ಣ ನಾಯ್ಕ ಅವರ ಕುಟುಂಬಕ್ಕಾಗಿ ನಿರ್ಮಿಸಿದ ಈ ಮನೆಗೆ `ಬೆಳಕು’ ಎಂದು ಹೆಸರಿಡಲಾಗಿದೆ. ಮನೆಯ ಹಸ್ತಾಂತರ ಕಾರ್ಯಕ್ರಮ ನಾಳೆ(ಆ.30) ನಡೆಯಲಿದೆ. ತಹಶೀಲ್ದಾರ್ ಕುಂಞ ಅಹಮ್ಮದ್ ಅವರು ಮನೆಯನ್ನು ಹಸ್ತಾಂತರ ಮಾಡಲಿದ್ದಾರೆ. ಮನೆ ನಿರ್ಮಾಣಕ್ಕಾಗಿ ಶ್ರಮಿಸಿದ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ನಿರ್ಗತಿಕ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಹೊರಟಾಗ ಸಮಾಜದ ಎಲ್ಲೆಡೆಯಿಂದ ಅದ್ಭುತ ನೆರವು ಮತ್ತು ಸಹಕಾರ ಹರಿದು ಬಂತು. ಜಾತಿ, ಧರ್ಮ,ರಾಜಕೀಯ ಯಾವುದೇ ಭೇದ ಬಾವ ಇಲ್ಲದೆ ಕೈ ಜೋಡಿಸಿದ ಕಾರಣ ಸೂರು ನಿರ್ಮಿಸಲು ಸಾಧ್ಯವಾಯಿತು. ಯುವಕರ ತಂಡದ ಶ್ರಮ, ದಾನಿಗಳ ಕೊಡುಗೆಯನ್ನು ಮರೆಯುವಂತಿಲ್ಲ -ಎನ್.ಎ.ಕುಂಞ ಅಹಮ್ಮದ್ , ತಹಶೀಲ್ದಾರ್ ಸುಳ್ಯ
Advertisement
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್…
ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಾಡಲಗೇರಿ ಗ್ರಾಮದಲ್ಲಿ…