ಸಂಗೀತಾಸಕ್ತರನ್ನು ಮಂತ್ರ ಮುಗ್ಧರನ್ನಾಗಿಸಿದ ಸಂಗೀತ ಕಛೇರಿ

February 6, 2020
9:33 PM

ಸುಳ್ಯ : ಪಡುವಣ ದಿಕ್ಕಿನ ಅಲೆಗಡಲಲ್ಲಿ ಸೂರ್ಯನು ಅಸ್ತಮಯವಾಗುತ್ತಿದ್ದಂತೆ ಆರಂಭಗೊಂಡ ಸಂಗೀತ ಸಾಗರದ ನಾದ ತರಂಗದ ಅಲೆಯಲ್ಲಿ ಸಂಗೀತಾಸಕ್ತರು ಅಕ್ಷರಷಃ ತೇಲಿ ಹೋದರು. ಶುದ್ಧ ಸಂಗೀತದ ರಸದೌತಣವನ್ನು ಉಣಬಡಿಸಿದ ಸಂಗೀತ ಮಾಂತ್ರಿಕ ವಿದ್ವಾನ್ ಶಂಕರನ್ ನಂಬೂದಿರಿ ಅವರ ಸಂಗೀತ ಕಛೇರಿಯು ಸಂಗೀತ ಪ್ರಿಯರನ್ನು ಮೋಡಿ ಮಾಡಿತು. ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವಾರ್ಷಿಕ ಸಂಗೀತೋತ್ಸವದ ಅಂಗವಾಗಿ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ರಂಗಮಂದಿರದಲ್ಲಿ ಏರ್ಪಡಿಸಿದ ಸಂಗೀತೋತ್ಸವದ ಮುಖ್ಯ ಕಛೇರಿ ಸಂಗೀತ ಪ್ರಿಯರ ಮನದಾಳದಲ್ಲಿ ಬಹು ಕಾಲ ಉಳಿಯುವಂತೆ ಮನಮೋಹಕವಾಗಿ ಮೂಡಿ ಬಂತು.ಕಿವಿಯನ್ನು ಇಂಪಾಗಿಸಿದ ಸಂಗೀತ ರಸ ಸಂಜೆ ಹೃದಯ ತಾಳವನ್ನು ಅರಳಿಸಿತು.

Advertisement
Advertisement
Advertisement

ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ದೇವಿ ಒಲಿದ ಪ್ರಸಿದ್ಧ ಸಂಗೀತಗಾರರೂ, ಹಿನ್ನಲೆ ಗಾಯಕರೂ ಆಗಿರುವ ಶಂಕರನ್ ನಂಬೂದಿರಿ ಅವರ ಹಾಡುಗಾರಿಕೆ ಸಂಗೀತ ವಿದ್ಯಾರ್ಥಿಗಳಿಗೆ ಮತ್ತು ಸುಳ್ಯದ ಸಂಗೀತಾಸಕ್ತರಿಗೆ ಹೊಸತೊಂದು ಅನುಭವವನ್ನು ಕೊಡ ಮಾಡಿತು. ಮೂರೂವರೆ ಗಂಟೆಗೂ ಹೆಚ್ಚು ಸಮಯ ತನ್ನ ಅದ್ಭುತ ಕಂಠಸಿರಿ ಮತ್ತು ಸಂಗೀತದ ಆಳ ಅನುಭವದಿಂದ ಲೀಲಾಜಾಲವಾಗಿ ಸಂಗೀತ ಸುಧೆ ಹರಿಸಿದ ಶಂಕರನ್ ನಂಬೂದಿರಿ ನೆರೆದ ಪ್ರೇಕ್ಷಕರನ್ನು ಸಂಗೀತ ಲೋಕದ ಆಳಕ್ಕೆ ಕರೆದೊಯ್ದರು. ಹಂಸಧ್ವನಿ ರಾಗದದಲ್ಲಿ ಆದಿ ತಾಳದಲ್ಲಿ ಕನಕದಾಸರು ರಚಿಸಿದ ಕೃತಿ ನಮ್ಮಮ್ಮ ಶಾರದೆ.. ಹಾಡಿನ ಮೂಲಕ ಕಛೇರಿ ಆರಂಭಿಸಿದ ಅವರು ಖಮಾಚ್ ರಾಗ ಮತ್ತು ಆದಿ ತಾಳದಲ್ಲಿ ಮೈಸೂರು ವಾಸುದೇವಾಚಾರ್ಯರ ಬ್ರೋಚೇವಾರೆ ವರುರಾ.. ಕೀರ್ತನೆ ಮೂಲಕ ಮುಂದುವರಿದು, ಆರಭಿ ರಾಗದ ಆದಿ ತಾಳದಲ್ಲಿ ತ್ಯಾಗರಾಜ ಸ್ವಾಮಿಗಳ ನಾದಸುಧಾರಸ.. ಕೀರ್ತನೆ ಮೂಲಕ ಸಂಗೀತ ರಸಧಾರೆ ಹರಿಸಿದರು. ರವಿಚಂದ್ರಿಕೆ ರಾಗ, ಆದಿ ತಾಳದಲ್ಲಿ ಚುಟುಕಾದ ಆಲಾಪನೆಯ ತ್ಯಾಗರಾಜರ ಮಾಕೇಲರಾ… ಷಣ್ಮುಖ ಪ್ರಿಯ ರಾಗದ ವದ್ದನೆವರು.. ವಿಸ್ತಾರವಾದ ಆಲಾಪನೆ, ನೆರವಲ್, ಸ್ವರ ಪ್ತಸಾರದ ತನಿ ಆವರ್ತನದಲ್ಲಿ ಕೇಳುಗರನ್ನು ಸಂತಸದಲ್ಲಿ ತೇಲಿಸಿತು. ಕಲ್ಯಾಣಿ ರಾಗದ ಮಿಶ್ರಛಾಪು ತಾಳದ ಎಲ್ಲಾ ರಸವನ್ನು ಹರಿಸಿ ಹಾಡಿದ ನಂಬಿ ಕೆಟ್ಟವರಿಲ್ಲವೋ.. ಹಾಡು ಕೇಳುಗರನ್ನು ತಲೆದೂಗುವಂತೆ ಮಾಡಿತು. `ಸೋಮಸುಂದರ ಪ್ರಿಯ ವಾಮ ಭಾಗೇಶ್ರೀ ರಾಜ ಮಾತಂಗಿ ಪಾಹಿಮಾಂ.. ಭಾಗೇಶ್ರೀ ರಾಗ, ಖಂಡ ತ್ರಿಪುಟ ತಾಳದಲ್ಲಿ ರಾಗಂ ತಾನಂ ಪಲ್ಲವಿ ಮೋಡಿ ಮಾಡಿತು. ರಾಗ ಮಾಲಿಕೆಯಲ್ಲಿ ಕಾಪಿ ಹಾಗು ದೇಶ್ ರಾಗಗಳು ಭಾವ ಪೂರ್ಣವಾಗಿ ಹೊರ ಹೊಮ್ಮಿದವು. ಬರ್ ಸೇ ಬದರಿಯಾ.. ಮೀರಾ ಭಜನ್, ಹಿಂದೋಳದಲ್ಲಿ ದಾಸ ದಾಸರ.. ಕೀರ್ತನೆ, ಬೇಹಾಗ್ ರಾಗದ ಪಾಹಿಕೃಷ್ಣ.. ಮನಮೋಹಕವಾಗಿ ಮೂಡಿ ಬಂದಿತು. ಸಿಂಧು ಭೈರವಿ ರಾಗದ ಲಾಲ್ ಗುಡಿ ಜಯರಾಮನ್ ಅವರ ತಿಲ್ಲಾನದೊಂದಿಗೆ ಕಛೇರಿಗೆ ಮಂಗಳ ಹಾಡಿದರು.

Advertisement

ತ್ರಿಸ್ಥಾಯಿ ಸಂಚಾರದಲ್ಲಿನ ಹಿಡಿತ ದೃಢವಾದ ಶಾರೀರದೊಂದಿಗೆ ರಾಗದ ಒಳ ಹೊರಹುಗಳು ಸ್ಪಷ್ಟವಾಗಿ ಗೋಚರಿಸಿದ ಕಛೇರಿಯು ಅದ್ಭುತ ಸಂಗೀತ ಲೋಕವನ್ನು ತೆರೆದಿಟ್ಟಿತು. ಯಾವುದೇ ಸಂಗೀತ ಕಛೇರಿ ಕೇಳುಗರ ಮನ ಗೆಲ್ಲಲು ಹಾಡುಗಾರನಂತೆ ಪಕ್ಕ ಮೇಳದವರ ಕೊಡುಗೆಯೂ ದೊಡ್ಡದಿದೆ. ತಮ್ಮ ಅದ್ಭುತ ಕಲಾ ಪಾಂಡಿತ್ಯ, ಸಂಗೀತ ಜ್ಞಾನ ಮತ್ತು ಅನನ್ಯ ಪ್ರತಿಭೆ ಮತ್ತು ಅನುಭವವನ್ನು ಧಾರೆಯೆರೆದ ಹಿಮ್ಮೇಳ ಕಲಾವಿದರು ಕಚೇರಿಯನ್ನು ಮೇರುಸ್ತರಕ್ಕೇರಿಸಿತು. ಕಲಾವಿದರನ್ನು ಅನುಸರಿಸುತ್ತಾ ಅದ್ಭುತ ಬೆರಳ್ಗಾರಿಕೆಯಿಂದ ವಯಲಿನ್ ನಲ್ಲಿ ಸಾಥ್ ನೀಡಿದ ವಿದ್ವಾನ್ ಮೈಸೂರು ಶ್ರೀಕಾಂತ್, ಪ್ರಧಾನ ಕಲಾವಿದರ ಮನೋಧರ್ಮವನ್ನು ಅರಿತು ಮೃದಂಗ ವಾದನದ ಮೂಲಕ ನಾದ ವಿಸ್ಮಯ ಸೃಷ್ಠಿಸಿದ ವಿದ್ವಾನ್ ಕಾಂಚನ ಎ.ಈಶ್ವರ ಭಟ್, ಉತ್ತಮ ಲಯ ವಿನ್ಯಾಸದೊಂದಿಗೆ ಘಟಂ ವಾದನದಲ್ಲಿ ನಾದಲೋಕ ಸೃಷ್ಠಿಸಿದ ವಿದ್ವಾನ್ ಉಡುಪಿ ಶ್ರೀಧರ್ ಕೈಚಳಕ ಕಚೇರಿಯ ಕಳೆ ಹೆಚ್ಚಿಸಿತು. ಮೂವರು ಕಲಾವಿದರೂ ಕಚೇರಿಯುದ್ಧಕ್ಕೂ ವಯಲಿನ್, ಮೃದಂಗ, ಘಟಂನಲ್ಲಿ ತಮ್ಮ ಪ್ರತಿಭೆ ಮತ್ತು ಕೈಚಳಕವನ್ನು ತೋರ್ಪಡಿಸಿದ್ದು ವಿಶೇಷತೆಯಾಗಿತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಡಿ.31 ರಂದು ವಳಲಂಬೆಯಲ್ಲಿ ಯಕ್ಷಗಾನ | ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ಗೌರವಾರ್ಪಣೆ |
December 28, 2024
7:25 AM
by: ದ ರೂರಲ್ ಮಿರರ್.ಕಾಂ
ತೃತೀಯ ವಿಶ್ವ ಹವ್ಯಕ ಸಮ್ಮೇಳನ ಬೆಂಗಳೂರಿನಲ್ಲಿ ಉದ್ಘಾಟನೆ |
December 27, 2024
9:14 PM
by: The Rural Mirror ಸುದ್ದಿಜಾಲ
ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |
December 26, 2024
11:28 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror