ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚುವಲ್ಲಿ ಸೋಶಿಯಲ್ ಮೀಡಿಯಾ ಪ್ರಮುಖ ಪಾತ್ರ ವಹಿಸಿತ್ತು. ದೇಶದ ಯಾರೇ ಆಗಲಿ ಟ್ವಿಟ್ಟರ್, ಪೇಸ್ ಬುಕ್ ಸೇರಿದಂತೆ ಯಾವುದೇ ಸೋಶಿಯಲ್ ಮೀಡಿಯಾದ ಮೂಲಕ ಸಮಸ್ಯೆ ಹೇಳಿಕೊಂಡರೆ ತಕ್ಷಣ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಾರೆ, ಸ್ಪಂದನೆ ನೀಡುತ್ತಾರೆ. ಇದೀಗ ಪ್ರಧಾನಿಗಳು ಒಂದು ದಿನ ಸೋಶಿಯಲ್ ಮೀಡಿಯಾ ಬಳಕೆ ಮಾಡುವುದಿಲ್ಲ ಎಂಬ ಹೇಳಿಕೆ ದೇಶದಾದ್ಯಂತ ಸಂಚಲನ ಮೂಡಿಸಿದೆ.
ಟ್ವಿಟರ್ ಖಾತೆಯೊಂದರಲ್ಲೇ 53.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯ ಮಾಡಿರುವ ಟ್ವೀಟ್ ಗಳನ್ನೂ ಕಚೇರಿ ಸಿಬಂದಿಗಳ ಮೂಲಕ ಗಮನಿಸಿ ಕ್ರಮ ಕೈಗೊಳ್ಳುತ್ತಾರೆ. ಈ ಕಾರಣದಿಂದಲೇ ಗ್ರಾಮೀಣ ಭಾಗದ ಅನೇಕ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ತಮ್ಮ ಟ್ವಿಟರ್ ಅಕೌಂಟ್ ಮೂಲಕ ಒಂದು ಪ್ರಮುಖ ಘೋಷಣೆ ಮಾಡಿದ್ದಾರೆ. ಮುಂದಿನ ಭಾನುವಾರ ನನ್ನ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯೂಟ್ಯೂಬ್ ಸೇರಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅಕೌಂಟ್ ಸ್ಥಗಿತಗೊಳ್ಳಲಿದೆ. ನನಗೆ ಗೊತ್ತು ನನ್ನ ಈ ನಿರ್ಧಾರದ ಪೋಸ್ಟ್ನಿಂದ ನೀವೆಲ್ಲರೂ ಹಲವು ಪೋಸ್ಟ್ಗಳನ್ನು ಹಾಕುತ್ತೀರಿ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಕುತೂಹಲ ಮೂಡಿಸಿದೆ.
ಕಳೆದ ಹಲವು ವರ್ಷಗಳಿಂದ ದೇಶೀಯ ಸಾಮಾಜಿಕ ಜಾಲತಾಣ ರಚನೆಯತ್ತ ಹಲವು ಮಂದಿ ಸಕ್ರಿಯವಾಗಿದ್ದರು. ಇದೀಗ ಪ್ರಧಾನಿಗಳು ಮುಂದಿನ ಭಾನುವಾರದಿಂದ ದೇಶೀಯ ಸಾಮಾಜಿಕ ಜಾಲತಾಣ ಉಪಯೋಗಿಸುವರೇ ಎಂಬ ಚರ್ಚೆ ಆರಂಭವಾಗಿದೆ.