ಮಡಿಕೇರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅ 25 ರಿಂದ ನ. 3 ರೊಳಗೆ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಮಳೆಹಾನಿ ಸಂತ್ರಸ್ತರಿಗೆ ನೂತನ ಮನೆಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.
ಕೊಡಗಿನ ವಿವಿದೆಡೆ ಸಂಭವಿಸಿದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಒಂದೆರಡು ವಾರಗಳಲ್ಲಿ ಮುಖ್ಯಮಂತ್ರಿಗಳು ಭೇಟಿ ನೀಡುವ ಸಂದರ್ಭ ಜಿಲ್ಲಾ ಪಂಚಾಯತ್ ನೂತನ ಭವನ ಉದ್ಘಾಟನೆ, ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಮನೆಗಳ ಹಸ್ತಾಂತರ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದರು. ತೋರ ಗ್ರಾಮದಲ್ಲಿ ಸುಮಾರು 10 ಮಂದಿ ಭೂ ಕುಸಿತಕ್ಕೆ ಸಿಲುಕಿ ನಾಲ್ಕು ಮಂದಿ ಕಣ್ಮರೆಯಾಗಿದ್ದಾರೆ. ಈ ಕುಟುಂಬದವರಿಗೆ ಮಾನವೀಯತೆ ದೃಷ್ಟಿಯಿಂದ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಲಿದೆ ಎಂದು ಸಚಿವರು ನುಡಿದರು.
ಈಗಾಗಲೇ ಮುಖ್ಯಮಂತ್ರಿ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ವಿತರಿಸಲು ಕ್ರಮವಹಿಸಿದ್ದಾರೆ. ಇನ್ನೂ ಎಂಟು ಹತ್ತು ದಿನದಲ್ಲಿ ಬೆಳೆ ಪರಿಹಾರ ವಿತರಿಸಲಾಗುವುದು. ಈಗಾಗಲೇ 10 ಸಾವಿರ ಮತ್ತು 25 ಸಾವಿರ ಪರಿಹಾರವನ್ನು ವಿತರಿಸಲಾಗಿದೆ. ಇದುವರೆಗೆ 4.60 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ.ಸದಸ್ಯರಾದ ಮೂಕೊಂಡ ಪಿ.ಸುಬ್ರಮಣಿ, ಅಚ್ಚಪಂಡ ಎಂ.ಮಹೇಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ತಹಶೀಲ್ದಾರ್ ಮಹೇಶ್ ಇತರರು ಇದ್ದರು.
ಪರಿಹಾರದ ಚೆಕ್ ಹಸ್ತಾಂತರ: ಸಚಿವರು, ಭೂ ಕುಸಿತದಿಂದ ತಾಯಿ, ಹೆಂಡತಿ, ಎರಡು ಹೆಣ್ಣು ಮಕ್ಕಳನ್ನು ಕಳೆದುಕೊಂಡ ಪ್ರಭು ಅವರಿಗೆ ಸಾಂತ್ವನ ಹೇಳಿ ತಲಾ 4 ಲಕ್ಷ ರೂ.ಗಳ ಮೂರು ಚೆಕ್‍ನ್ನು ಹಸ್ತಾಂತರಿಸಿದರು.
ಸಂತ್ರಸ್ತ ಕುಟುಂಬದರಿಗೆ ಮಾನಸಿಕವಾಗಿ ಧೈರ್ಯ ತುಂಬಬಹುದು. ಆದರೆ ಕುಟುಂಬದವರನ್ನು ಕರೆತರಲು ಸಾಧ್ಯವೇ ಎಂದು ಸಚಿವರು ನೋವಿನಿಂದ ನುಡಿದರು.
‘ಈ ಹಿಂದೆ ವಿದ್ಯುತ್ ಇರಲಿಲ್ಲ. ರಸ್ತೆ, ಬಸ್ ಸೌಲಭ್ಯ ಇರಲಿಲ್ಲ. ಕೆ.ಜಿ.ಬೋಪಯ್ಯ ಅವರು ಶಾಸಕರಾದ ನಂತರ ವಿದ್ಯುತ್ ಸಂಪರ್ಕ, ಬಸ್ ಸೌಲಭ್ಯ, ರಸ್ತೆ ನಿರ್ಮಾಣ ಮತ್ತಿತರ ಮೂಲ ಸೌಲಭ್ಯವನ್ನು ಕಲ್ಪಿಸಿದ್ದಾರೆ’ ಎಂದು ಇಲ್ಲಿನ ಸ್ಥಳೀಯರು ಹೇಳಿದರು.
ತೋರ ಗ್ರಾಮದ ಸಂತ್ರಸ್ತರಾದ ಪ್ರಭು ಅವರು ಎಷ್ಟೇ ಕಷ್ಟ ಬಂದರೂ ತೋರ ಗ್ರಾಮದಲ್ಲಿ ವಾಸಿಸುತ್ತೇನೆ. ಕುಟುಂಬದವರನ್ನೆಲ್ಲಾ ಕಳೆದುಕೊಂಡಿದ್ದೇನೆ ಎಂದು ದು:ಖ ತೋಡಿಕೊಂಡರು.
ಹರೀಶ್ ಅವರು ಮಾತನಾಡಿ ಹೆಂಡತಿ ಮತ್ತು ಮನೆ ಮಠ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಸದ್ಯ ಸರ್ಕಾರದಿಂದ ಪರಿಹಾರ ವಿತರಿಸಿದ್ದಾರೆ. ಮನೆ ನಿರ್ಮಿಸಿ ಕೊಡುತ್ತಾರೆ. ಜೀವನಕ್ಕೆ ಟ್ಯಾಕ್ಸಿ ಒದಗಿಸುತ್ತಾರೆ ಎಂದು ತಿಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮಾಕುಟ್ಟ ರಸ್ತೆ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವರು:-ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಮಾಕುಟ್ಟ ರಸ್ತೆ ವೀಕ್ಷಿಸಿದರು. ರಾಜ್ಯ ಹೆದ್ದಾರಿಯಾಗಿರುವ ಮಾಕುಟ್ಟ ರಸ್ತೆಯನ್ನು ವಿಸ್ತರಿಸಬೇಕಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯ ಯಾವುದೇ ರೀತಿಯ ವಾಹನಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಗಮನಹರಿಸಿದೆ. ರಾಜ್ಯ ಹೆದ್ದಾರಿಯನ್ನು ಆದ್ಯತೆ ಮೇಲೆ ನಿರ್ಮಾಣ ಮಾಡಲಾಗುವುದು . ಸಾರ್ವಜನಿಕ ಹಿತದೃಷ್ಟಿ ಮುಖ್ಯ ಎಂದು ವಿ.ಸೋಮಣ್ಣ ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾಕುಟ್ಟ ಗಡಿಭಾಗದಲ್ಲಿ ಕೂಟುಹೊಳೆ ಬಳಿ ಸೇತುವೆ ನಿರ್ಮಿಸಬೇಕಿದೆ. ಆದರೆ ಸೇತುವೆ ನಿರ್ಮಿಸಲು ಅರಣ್ಯ ಇಲಾಖೆಯವರು ಬಿಡುತ್ತಿಲ್ಲ. ಕೇರಳ ಗಡಿಯಿಂದಾಚೆ ರಸ್ತೆ ಉತ್ತಮವಾಗಿದೆ ಎಂದು ಶಾಸಕರು ತಿಳಿಸಿದರು.
ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಸಚಿವರ ಭೇಟಿ: ನಂತರ ಸೋಮಣ್ಣ ಅವರು ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಶಾಶ್ವತ ಸೂರು ಕಲ್ಪಿಸಬೇಕಿದೆ ಎಂದು ಸಂತ್ರಸ್ತರು ಮನವಿ ಮಾಡಿದರು. ಸೂಕ್ತ ಜಾಗ ಗುರುತಿಸಿ ಶಾಶ್ವತ ಮನೆ ನಿರ್ಮಿಸಿಕೊಡಲಾಗುವುದು. ಆ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಇದಕ್ಕೂ ಮೊದಲು ವಿರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳಿಂದ ಸಚಿವರು ಹಲವು ಮಾಹಿತಿ ಪಡೆದರು.
ಶಾಸಕರಾದ ಅಪ್ಪಚ್ಚುರಂಜನ್ ಅವರು ನದಿ ದಡದಲ್ಲಿ ವಾಸಿಸುತ್ತಿದ್ದ ಎಲ್ಲಾ ಪ್ರವಾಹ ಪೀಡಿತ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿ.ಪಂ.ಸದಸ್ಯರಾದ ಎಂ.ಬಿ.ಸುನಿತಾ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ತಹಶೀಲ್ದಾರ್ ಗೋವಿಂದರಾಜು ಇತರರು ಹಾಜರಿದ್ದರು.