ಸುಳ್ಯ : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೇ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಕಾಞಂಗಾಡ್- ಕಾಣಿಯೂರು ರೈಲ್ವೇ ಹಳಿ ನಿರ್ಮಾಣದ ಕುರಿತು ಪ್ರಸ್ತಾಪಿಸದೇ ಇರುವುದಕ್ಕೆ ಕಾಞಂಗಾಡ್- ಕಾಣಿಯೂರು ರೈಲ್ವೇ ಹಳಿ ನಿರ್ಮಾಣ ಕ್ರಿಯಾ ಸಮಿತಿ ನಿರಾಸೆ ವ್ಯಕ್ತಪಡಿಸಿದೆ.
ಸುಳ್ಯದ ಜನತೆ ಬಲು ನಿರೀಕ್ಷೆಯಿಂದ ಕಾಯುತ್ತಿರುವ ಕನಸಿನ ಯೋಜನೆಯ ಕುರಿತು ಸಂಸದರ ಬೇಡಿಕೆಯಲ್ಲಿ ಒಂದು ವಾಕ್ಯವನ್ನೂ ಉಲ್ಲೇಖ ಮಾಡದೇ ಇದ್ದುದು ತೀವ್ರ ನಿರಾಸೆ ತಂದಿದೆ ಎಂದು ಕಾಞಂಗಾಡ್-ಕಾಣಿಯೂರು ರೈಲ್ವೇ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಬಿ.ಸುಧಾಕರ ರೈ ಹೇಳಿದ್ದಾರೆ. ಈ ಹಿಂದೆ ಸಂಸದರ ನೇತೃತ್ವದಲ್ಲಿಯೇ ಕ್ರಿಯಾ ಸಮಿತಿಯು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಆದರೆ ಈಗ ಹೊಸ ಸರಕಾರದ ನೂತನ ರೈಲ್ವೇ ಸಚಿವರಿಗೆ ಜಿಲ್ಲೆಯ ರೈಲ್ವೇ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸುವಾಗ ಸಂಸದರು ಕಾಞಂಗಾಡ್-ಕಾಣಿಯೂರು ಹಳಿಯ ಬಗ್ಗೆ ಮರೆತರೇ ಎಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.
ಮನವಿಯಲ್ಲಿ ಈ ಯೋಜನೆಯ ಪ್ರಸ್ತಾಪವನ್ನು ಬಿಟ್ಟಿರುವ ಬಗ್ಗೆ ಸಂಸದರ ಗಮನಕ್ಕೆ ತರಲಾಗುವುದು. ಅಲ್ಲದೆ ಈ ವಿಷಯವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಗಮನಕ್ಕೆ ತರಲಾಗಿದ್ದು ಅದಕ್ಕೆ ಅವರು ತ್ವರಿತವಾಗಿ ಸ್ಪಂದಿಸಿದ್ದಾರೆ ಮತ್ತು ಕೇಂದ್ರ ರೈಲ್ವೇ ಸಚಿವರ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಸುಧಾಕರ ರೈ ಸುಳ್ಯನ್ಯೂಸ್.ಕಾಂ ಗೆ ತಿಳಿಸಿದ್ದಾರೆ