ಸುಳ್ಯ: ಒಂದಲ್ಲ, ಎರಡಲ್ಲ, ಹ್ಯಾಟ್ರಿಕ್ ಅಲ್ಲ… ಗೆಲುವಿನ ಡಬಲ್ ಹ್ಯಾಟ್ರಿಕ್ ಪಡೆದರೂ ಸಚಿವ ಸ್ಥಾನವಿಲ್ಲ…! ಸುಳ್ಯ ಶಾಸಕ ಎಸ್.ಅಂಗಾರರು ಮಂತ್ರಿಯಾಗಲು ಇನ್ನೆಷ್ಟು ಬಾರಿ ಗೆಲ್ಲಬೇಕು.. ಇದು ಬಿಜೆಪಿಯ ಭದ್ರಕೋಟೆ ಎಂದು ಕರೆಯುವ ಸುಳ್ಯ ಕ್ಷೇತ್ರದ ಮತದಾರರ ಪ್ರಶ್ನೆ.
ಹೌದು ಮತ್ತೊಮ್ಮೆ ಅಂಗಾರರಿಗೆ ಮಂತ್ರಿ ಸ್ಥಾನ ತಪ್ಪಿದೆ. ಇಂದು ಪ್ರಮಾಣ ವಚನ ಸ್ವೀಕರಿಸುವ ಯಡಿಯೂರಪ್ಪ ಮಂತ್ರಿ ಮಂಡಲದ ನೂತನ ಸಚಿವರ ಪಟ್ಟಿಯಲ್ಲಿ ಅಂಗಾರರ ಹೆಸರಿಲ್ಲ. ಈ ಮೂಲಕ ಸುಳ್ಯದ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಮತ್ತೊಮ್ಮೆ ನಿರಾಶೆಯ ಕಡಲಲ್ಲಿ ಮುಳುಗುವಂತಾಗಿದೆ. 1994 ರಿಂದ 2018ರವರೆಗೆ ನಡೆದ ಎಲ್ಲಾ ಚುನಾವಣೆಯಲ್ಲಿಯೂ ಗೆದ್ದು ಸತತ ಆರು ಭಾರಿ ಶಾಸಕರಾಗಿ ಆಯ್ಕೆಯಾದ ಅಂಗಾರರು ಈ ಬಾರಿ ಸಚಿವರಾಗುತ್ತಾರೆ ಎಂದೇ ನಂಬಲಾಗಿತ್ತು. ಸಂಭಾವ್ಯ ಸಚಿವರು ಎಂದು ಬಿಂಬಿಸಲಾದ ಎಲ್ಲಾ ಪಟ್ಟಿಯಲ್ಲಿಯೂ ಅಂಗಾರರ ಹೆಸರಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಮಾತ್ರ ಅವರ ಹೆಸರು ಸೇರ್ಪಡೆಯಾಗಲೇ ಇಲ್ಲ. ಆ ಮೂಲಕ ಅಂಗಾರರು ಸಚಿವರಾಗುವ ಅವಕಾಶದಿಂದ ಮತ್ತೊಮ್ಮೆ ವಂಚಿತರಾಗಿದ್ದಾರೆ.
ಇದೇ ಮೊದಲಲ್ಲ..! : ಎಸ್.ಅಂಗಾರ ಸಚಿವರಾಗುತ್ತಾತರೆ ಎಂದು ನಂಬಿ ಸಚಿವ ಸ್ಥಾನದಿಂದ ವಂಚಿತರಾಗುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಕಡೆಗಣಿಸಲ್ಪಟ್ಟಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅಂಗಾರರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಇತ್ತು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಬೇಡಿಕೆ ಇದ್ದರೂ ಅವಕಾಶ ಸಿಗಲಿಲ್ಲ. ಬಳಿಕ 2008 ರಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಅವಕಾಶ ನೀಡಲಿಲ್ಲ. ಬಳಿಕ ಸುಳ್ಯದವರೇ ಆದ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿ ಆದರೂ ಅಂಗಾರರನ್ನು ಸಚಿವರನ್ನಾಗಿ ಮಾಡಲಿಲ್ಲ. ಬಳಿಕ ಜಗದೀಶ್ ಶೆಟ್ಟರ್ ಅಧಿಕಾರ ಅವಧಿಯಲ್ಲೂ ಅಂಗಾರರಿಗೆ ಸಚಿವ ಗಿರಿ ಗಿಟ್ಟಿಸಲಾಗಲಿಲ್ಲ. ಆ ಸಂದರ್ಭದಲ್ಲಿ ಸುಳ್ಯದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಸಾರ್ವಜನಿಕವಾಗಿಯೇ ಪ್ರತಿಭಟನೆ ನಡೆದಿತ್ತು. ಬಿಜೆಪಿ ಸುಳ್ಯ ಮಂಡಲ ಸಮಿತಿಯ ಎಲ್ಲಾ ಪದಾಧಿಕಾರಿಗಳು ಕೂಡ ಅಂದುವರಾಜಿನಾಮೆ ನೀಡಿ ಒಂದು ತಿಂಗಳ ಕಾಲ ಬಿಜೆಪಿ ಕಚೇರಿಯೇ ಮುಚ್ಚಿದ ಪ್ರಸಂಗ ನಡೆದಿತ್ತು. 2018ರಲ್ಲಿ ಬಿಜೆಪಿ ಸರಕಾರ ಒಂದು ದಿವಸ ಮಾತ್ರ ಇದ್ದ ಕಾರಣ ಆಸೆ ಕಮರಿ ಹೋಗಿತ್ತು. ಆದರೆ ಈ ಬಾರಿ ಅಂಗಾರರಿಗೆ ಮಂತ್ರಿ ಸ್ಥಾನ ಖಚಿತ ಎಂದೇ ಹೇಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರನ್ನು ಕೈ ಬಿಡಲಾಗಿದೆ. ಸಾರ್ವಜನಿಕರ ಹಾರೈಕೆ, ಕಾರ್ಯಕರ್ತರ ಆಸೆ, ಬೇಡಿಕೆ ಯಾವುದೂ ಕೈಗೂಡಲೇ ಇಲ್ಲ.. ಇದೀಗ ಸುಳ್ಯದ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಸೆ, ಆಕ್ರೋಶ ಮಾತ್ರ ಉಳಿದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅವರ ಅಸಮಾಧಾನ ಹೊರ ಬೀಳುತಿದೆ. ತಮ್ಮ ಭಾವನೆಗಳಿಗೆ ಪಕ್ಷ ಬೆಲೆ ನೀಡಿಲ್ಲ ಎಂಬ ಮಾತನ್ನು ನಾಯಕರು, ಕಾರ್ಯಕರ್ತರು ಹೊರ ಹಾಕುತ್ತಿದ್ದಾರೆ.
ದ.ಕ.ಜಿಲ್ಲೆಗೆ ಶೂನ್ಯ: ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಸ್ಥಾನಗಳ ಪೈಕಿ ಏಳನ್ನು ಗೆದ್ದು ಬೀಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಗೆ ಸಚಿವರ ಸಂಖ್ಯೆಯಲ್ಲಿ ಮಾತ್ರ ಶೂನ್ಯ ಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯಾವೊಬ್ಬ ಶಾಸಕನೂ ನೂತನ ಸಚಿವರ ಪಟ್ಟಿಯಲ್ಲಿ ಇಲ್ಲ. ಏಳು ಮಂದಿ ಶಾಸಕರ ಪೈಕಿ ಆರು ಬಾರಿ ಗೆದ್ದಿರುವ ಸುಳ್ಯ ಶಾಸಕ ಅಂಗಾರರೇ ಹಿರಿಯ ಸದಸ್ಯ. ಆದುದರಿಂದ ಅಂಗಾರರಿಗೆ ಮಂತ್ರಿ ಗಿರಿ ಖಚಿತ ಎಂದೇ ನಂಬಲಾಗಿತ್ತು. ಆದರೆ ದ.ಕ.ಜಿಲ್ಲೆಯನ್ನು, ಮಲೆನಾಡಾದ ಸುಳ್ಯ ಕ್ಷೇತ್ರವನ್ನು ಬಿಜೆಪಿ ಮತ್ತೊಮ್ಮೆ ಕಡೆಗಣಿಸಿದೆ ಎಂಬುದು ಕಾರ್ಯಕರ್ತರ ಆಕ್ರೋಶ.
ಕಳೆದ ಬಾರಿ ಜಿಲ್ಲೆಯಲ್ಲಿ ಏಳು ಮಂದಿ ಕಾಂಗ್ರೆಸ್ ಶಾಸಕರು ಗೆದ್ದಾಗ ಇಲ್ಲಿನ ಮೂವರು ಶಾಸಕರು ಸೇರಿ ದ.ಕ. ಜಿಲ್ಲೆಯ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಲಾಗಿತ್ತು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿಯೂ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕನಿಗೆ ಸಚಿವ ಸ್ಥಾನ ನೀಡಿತ್ತು.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…