ಬೆಂಗಳೂರು: ಭಾರತೀಯತೆಯ, ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಹಸಿವು ಇಂದು ಸಮಾಜದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಸಮಾಜಕ್ಕೆ ಈ ಹಂತದಲ್ಲಿ ಸೂಕ್ತ ಮಾರ್ಗದರ್ಶನ ದೊರಕಿದಲ್ಲಿ ಮಾತ್ರ ಭಾರತ ವಿಶ್ವಗುರುವಾಗಬಲ್ಲದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಗಿರಿನಗರ ರಾಮಾಶ್ರಯದಲ್ಲಿ ಶನಿವಾರ ನಡೆದ ರಾಮಾಯಣ ಚಾತುರ್ಮಾಸ್ಯ ಸೀಮೋಲ್ಲಂಘನದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಈ ಬಾರಿಯ ಚಾತುರ್ಮಾಸ್ಯವನ್ನು ರಾಮಾಯಣ ಚಾತುರ್ಮಾಸ್ಯವಾಗಿ ಆಚರಿಸಲಾಗಿದ್ದು, ನಿರಂತರವಾಗಿ ಧಾರಾ ರಾಮಾಯಣ ಪ್ರವಚನ ನಡೆದಿದೆ. ರಾಮಾಯಣ ಸರ್ವವೇದಗಳ ಸಾರ; ಇದು ಗುರು-ಶಿಷ್ಯರ ನಡುವಿನ ಬಾಂಧವ್ಯ ಬೆಸೆಯಲು ಸಹಕಾರಿ. ಅರುವತ್ತು ದಿನಗಳ ಕಾಲ ನಿರಂತರವಾಗಿ ನಡೆದ ಧಾರಾ ರಾಮಾಯಣ, ಗುರು-ಶಿಷ್ಯರ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದಿದೆ ಎಂದು ಬಣ್ಣಿಸಿದರು. ಭಾರತದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದ ವಿಶ್ವವಿದ್ಯಾಪೀಠದ ಸ್ಥಾಪನೆಗೆ ಸಂಕಲ್ಪಿಸಿ ನಡೆಸಿದ ಈ ಧಾರಾ ರಾಮಾಯಣ ಸಾರ್ಥಕವಾಗುವುದು ಶ್ರೀಸಂಕಲ್ಪ ಕೈಗೂಡಿದಾಗ ಎಂದು ಅಭಿಪ್ರಾಯಪಟ್ಟರು.
ಚಾತುರ್ಮಾಸ್ಯ ಇರುವುದೇ ಚೈತನ್ಯ ಸಂಗ್ರಹಕ್ಕೆ; ಕೇವಲ ಸನ್ಯಾಸಿಗಳಿಗೆ ಮಾತ್ರವಲ್ಲದೇ ಗೃಹಸ್ಥರಿಗೂ ಇದು ಅನ್ವಯಿಸುತ್ತದೆ. ಶಕ್ತಿಸಂಚಯನಕ್ಕೆ ಚಾತುರ್ಮಾಸ್ಯ ಪ್ರಶಸ್ತ ಕಾಲ. ಈ ಬಾರಿಯಂತೂ ವೇದಗಳ ಸಾರವಾದ ರಾಮಾಯಣದ ಮೂಲಕ ಈ ಕಾರ್ಯ ಮತ್ತಷ್ಟು ಚೆನ್ನಾಗಿ ನಡೆದಿದೆ ಎಂದು ಹೇಳಿದರು. ಚಾರ್ತುಮಾಸ್ಯ ಸುವ್ಯವಸ್ಥಿತವಾಗಿ, ವೈಭವೋಪೇತವಾಗಿ ನಡೆದಿದೆ. ಶ್ರೀಮಠದ ಇತಿಹಾಸಲ್ಲೇ ಮೊದಲ ಬಾರಿಗೆ ಎರಡು ತಿಂಗಳ ಪರ್ಯಂತ ಶ್ರೀರಾಮದೇವರಿಗೆ ಸುವರ್ಣ ಮಂಟಪದಲ್ಲಿ ಪೂಜಾಸೇವೆ ನೆರವೇರಿತು. ಸಾವಿರಾರು ಶಿಷ್ಯಭಕ್ತರಿಗೆ ಸೇವೆ ಮಾಡುವ ಅವಕಾಶ ಲಭಿಸಿದೆ ಎಂದು ಬಣ್ಣಿಸಿದರು.
ರಾಮಚಂದ್ರ ಹೆಗಡೆ ನಿಸ್ರಾಣಿ ಅವರ ಪರವಾಗಿ ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಟಿ.ಮಡಿಯಾಳ್ ಚಾತುರ್ಮಾಸ್ಯ ಪ್ರಶಸ್ತಿ ಸ್ವೀಕರಿಸಿದರು.
ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ವಾದಿರಾಜ ಸಾಮಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಭಟ್, ಹಿರಿಯ ಪತ್ರಕರ್ತ ವಿನಾಯಕ ಭಟ್ ಮುರೂರು, ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ರಮೇಶ್ ಹೆಗಡೆ ಕೋರಮಂಗಲ, ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಕಾರ್ಯದರ್ಶಿ ನಾಗರಾಜ ಭಟ್, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…