ಸವಣೂರು : ಕರ್ನಾಟಕ ಸರಕಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಮತ್ತು ದ.ಕ.ಹಾಲು ಒಕ್ಕೂಟ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘ ಇವುಗಳ ಸಹಯೋಗದಿಂದ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಸವಣೂರು ಹಾಲು ಉತ್ಪಾದಕರ ಸಂಘದ ವ್ಯಾಪ್ತಿಯ ಕಾರ್ಯಕ್ರಮಕ್ಕೆ ಸುಬ್ಬಣ್ಣ ರೈ ಖಂಡಿಗ ಅವರ ಮನೆಯಲ್ಲಿ 16ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾಹಿತಿ ನೀಡಿ, ರಾಜ್ಯದಾದ್ಯಂತ ಅ.14ರಿಂದ ನ.4 ರವರೆಗೆ ಜಾನುವಾರುಗಳಿಗೆ ಪಲ್ಸ್ ಪೋಲಿಯೋ ಮಾದರಿಯಲ್ಲಿ ಕಾಲುಬಾಯಿ ಜ್ವರದ ವಿರುದ್ದ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರು-ಕಡಬ ತಾಲೂಕಿನಲ್ಲಿ ಹತ್ತು ತಂಡಗಳಲ್ಲಿ 60ಕ್ಕೂ ಹೆಚ್ಚು ಲಸಿಕೆದಾರರು 20 ದಿನಗಳ ಕಾಲ ಲಸಿಕಾ ಶಿಬಿರ ನಡೆಸುತ್ತಾರೆ. ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಒಕ್ಕೂಟದ ಸಿಬಂದಿಗಳು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಜಾನುವಾರುಗಳನ್ನು ರಕ್ಷಿಸುವುದರ ಜತೆಗೆ ಈ ರೋಗವನ್ನು ದೇಶದಿಂದ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಶ್ರೀನಿವಾಸ್ ಕೊಳ್ತಿಗೆ, ಪಶುವೈದ್ಯಕೇಂದ್ರದ ವೈದ್ಯಾಧಿಕಾರಿ ಡಾ.ಪುನೀತ್ ಎಸ್.ಕೆ, ಕೆದಂಬಾಡಿ ಪ್ರಾಥಮಿಕ ಪಶುವೈದ್ಯಕೇಂದ್ರದ ಪರೀಕ್ಷಕ ಎನ್.ಜಿ.ಕುಮಾರ್ , ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಸುಪ್ರಿತ್ ರೈ ಖಂಡಿಗ, ನಿರ್ದೇಶಕರಾದ ದೇವಪ್ಪ ಗೌಡ, ಪ್ರಜ್ವಲ ಕೆ.ಆರ್, ಆಶಾ ರೈ ಕಲಾಯಿ, ಮಾಜಿ ಅಧ್ಯಕ್ಷ ಸುಬ್ಬಣ್ಣ ರೈ ಖಂಡಿಗ, ಸಂತೋಷ್ ರೈ ಕಲಾಯಿ, ನವೀನ್ ಬಂಬಿಲ, ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ಹಾಜರಿದ್ದರು.