ಸುಳ್ಯ: ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಉತ್ತಮ ಗೆಲುವು ದಾಖಲಿಸಲಿದೆ ಎಂದು ಬಿಜೆಪಿ ಮಂಡಲ ಸಮಿತಿ ನಿಯೋಜಿತ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 23 ಸಹಕಾರಿ ಸಂಘಗಳ ಪೈಕಿ ಕಳೆದ ಬಾರಿ 17 ಸಹಕಾರಿ ಸಂಘಗಳಲ್ಲಿ ಆಡಳಿತ ಪಡೆದಿತ್ತು. ಈ ಬಾರಿ ಆ ಸಂಘಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹೆಚ್ಚಿನ ಸಂಘಗಳಲ್ಲಿ ಅಧಿಕಾರ ಪಡೆದುಕೊಳ್ಳಲಿದೆ. ಚುನಾವಣೆಯನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನೂ ಮಾಡಲಾಗಿದೆ. ಮರ್ಕಂಜ ಸಹಕಾರಿ ಸಂಘದಲ್ಲಿ ಈಗಾಗಲೆ ಸಹಕಾರ ಭಾರತಿಯ 10ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಪಾಜೆ ಸಂಘದಲ್ಲಿ ನಾಮಪತ್ರ ಸಲ್ಲಿಸಲು ಪಕ್ಷದ ಕಡೆಯಿಂದ ಸೂಚನೆ ನೀಡಲಾಗಿತ್ತು. ಆದರೆ ಅಲ್ಲಿ ಸಹಕಾರಿ ಸಂಘದಲ್ಲಿ ಬಿಜೆಪಿಗೆ ಮತದಾರರು ಕಡಿಮೆ ಇರುವ ಕಾರಣ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಗ್ರಾಮ ಸಮಿತಿ ಮನಸು ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರನ್ನು ಪತ್ತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ನಡೆಸಿದರೂ ಯಾರೆಲ್ಲ ಅಡ್ಡ ಮತದಾನ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎ.ವಿ.ತೀರ್ಥರಾಮ, ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಸಹಕಾರ ಭಾರತಿ ಸುಳ್ಯ ತಾಲೂಕು ಅಧ್ಯಕ್ಷ ಪ್ರವೀಣ್ ರಾವ್ ದೊಡ್ಡತೋಟ, ಬಿಜೆಪಿ ನಗರಾಧ್ಯಕ್ಷ ವಿನಯಕುಮಾರ್ ಕಂದಡ್ಕ ಉಪಸ್ಥಿತರಿದ್ದರು.