ಸುಳ್ಯ: ಚುನಾವಣೆಯ ಅಬ್ಬರ, ಫಲಿತಾಂಶದ ಕಾತರ ಕೊನೆಗೊಂಡ ಕೂಡಲೇ ಈಗ ನಗರ ಪಂಚಾಯತ್ ನ ಆಡಳಿತವನ್ನು ಯಾರು ಮುನ್ನಡೆಸುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
ಫಲಿತಾಂಶ, ಮೀಸಲಾತಿಗಳು ಘೋಷಣೆ ಆದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲ, ಚರ್ಚೆ ಎಲ್ಲಡೆ ಇದೆ. 20 ಸ್ಥಾನಗಳ ಪೈಕಿ 14ನ್ನು ಪಡೆದುಕೊಂಡಿರುವ ಬಿಜೆಪಿ ಮೂರನೇ ಎರಡು ಬಹುಮತದೊಂದಿಗೆ ಸತತ ನಾಲ್ಕನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಇದೀಗ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಯಾರ ಪಾಲಾಗುತ್ತದೆ ಎಂಬುದಷ್ಟೇ ಉಳಿದಿರುವ ಪ್ರಶ್ನೆ.
ಘೋಷಣೆಯಾಗಿರುವ ಮೀಸಲಾತಿ ಪ್ರಕಾರ ಬಿಜೆಪಿಯಲ್ಲಿ ಗೆದ್ದ ನಾಲ್ವರು ಸದಸ್ಯರು ಅರ್ಹರಾಗುತ್ತಾರೆ. ಒಂದನೇ ವಾರ್ಡ್ ದುಗಲಡ್ಕದಿಂದ ಗೆದ್ದ ಶಶಿಕಲಾ.ಎ, ಒಂಭತ್ತನೇ ವಾರ್ಡ್ ಕೇರ್ಪಳ ದಿಂದ ಗೆದ್ದ ಪೂಜಿತಾ, 14ನೇ ವಾರ್ಡ್ ಕಲ್ಲುಮುಟ್ಲು ವಿನಿಂದ ಗೆದ್ದ ಸುಶೀಲಾ ಮತ್ತು 16ನೇ ವಾರ್ಡ್ ಕಾಯರ್ತೋಡಿಯಿಂದ ಗೆಲುವು ಸಾಧಿಸಿದ ಪ್ರವಿತಾ ಪ್ರಶಾಂತ್. ಈ ನಾಲ್ವರಲ್ಲಿ ಓರ್ವರು ಮುಂದಿನ 20 ತಿಂಗಳು ನಗರ ಪಂಚಾಯತ್ ನ್ನು ಮುನ್ನಡೆಸಲಿದ್ದಾರೆ. ನಾಲ್ವರು ಕೂಡ ಪ್ರಥಮ ಬಾರಿಗೆ ಆಯ್ಕೆಯಾಗಿದ್ದಾರೆ. ಆದರೆ ಶಶಿಕಲಾ ಅವರು ಕಳೆದ ಅವಧಿಯಲ್ಲಿ ನಾಮನಿರ್ದೇಶಿತ ಸದಸ್ಯೆಯಾಗಿದ್ದರು. ಈ ನಾಲ್ವರಲ್ಲಿ ಒಬ್ಬರನ್ನು ಪಕ್ಷ ಘೋಷಿಸಲಿದೆ. ಅಳೆದು ತೂಗಿ ಎಲ್ಲಾ ಸಮೀಕರಣಗಳನ್ನೂ ಪರಿಗಣಿಸಿ ಅಧ್ಯಕ್ಷ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾಗಿದೆ. ಎಲ್ಲಾ 14 ಮಂದಿ ಸದಸ್ಯರೂ ಅರ್ಹರು. ಆದರೆ 10ನೇ ವಾರ್ಡ್ ನಿಂದ ಗೆಲುವು ಸಾಧಿಸಿದ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷರೂ ಆದ ವಿನಯಕುಮಾರ್ ಕಂದಡ್ಕ ಅವರನ್ನು ಆಯ್ಕೆ ಮಾಡುವ ಸಂಭವ ಹೆಚ್ಚಿದೆ. ಒಟ್ಟಿನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಅಧಿಸೂಚನೆ ಹೊರ ಬಂದ ಬಳಿಕ ಈ ಕುರಿತ ಚರ್ಚೆ ನಿರ್ಧಾರಕ್ಕೆ ವೇಗ ಸಿಗಲಿದೆ.