ಸುಳ್ಯ: ರಾಜ್ಯ ಸರ್ಕಾರ ಘೋಷಣೆ ಮಾಡಿದ ಒಂದು ಲಕ್ಷ ರೂ ತನಕದ ಸಾಲ ಮನ್ನಾ ಯೋಜನೆಯ ಅನುಷ್ಠಾನದಲ್ಲಿ ಪ್ರಾರಂಭಿಕ ಹಂತದಲ್ಲಿ ಸರ್ಕಾರದ ಆದೇಶಗಳಿಂದಾಗಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಶಾಸಕ ಎಸ್.ಅಂಗಾರ ರಾಜ್ಯ ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದಾಗಿ ಸಾಲಮನ್ನಾ ವಂಚಿತರಾಗಬಹುದಾದ ರೈತರ ಹಿತದೃಷ್ಠಿಯಿಂದ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಅವಕಾಶ ನೀಡಿ ಎಲ್ಲಾ ಅರ್ಹ ರೈತರಿಗೆ ಸಾಲ ಮನ್ನಾ ಸವಲತ್ತು ಸಿಗುವಂತೆ ತಂತ್ರಾಂಶದಲ್ಲಿ ಅವಕಾಶ ಮಾಡಬೇಕೆಂದು ಸಚಿವರಲ್ಲಿ ವಿನಂತಿಸಲಾಗಿದೆ. ಈ ಕುರಿತು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಶಾಸಕರಿಗೆ ಭರವಸೆ ನೀಡಿದ್ದಾರೆ. ಪ್ರಾಥಮಿಕ ಸಹಕಾರಿ ಸಂಘಗಳು ಸದಸ್ಯರ ರೂಪೇ ಕೆ.ಸಿ.ಸಿ ಖಾತೆಗಳ ಸಂಖ್ಯೆಯನ್ನು ನಮೂದಿಸದೇ ಇದ್ದುದರಿಂದ ಬಹಳಷ್ಟು ರೈತರ ಸಾಲ ಮನ್ನಾ ಮೊಬಲಗು ಜಮಾ ಆಗದೆ ಬಾಕಿ ಇರುತ್ತದೆ ಈ ಬಗ್ಗೆ ಮಾರ್ಚ್ ತನಕ ಸಾಲ ಮನ್ನಾ ಮೊತ್ತ ಬಿಡುಗಡೆಯಾದ ಖಾತೆಗಳಿಗೆ ಎಡಿಟಿಂಗ್ ಅವಕಾಶ ನೀಡುವುದರ ಮೂಲಕ ಸದಸ್ಯರ ರೂಪೇ ಖಾತೆ ಸಂಖ್ಯೆ ನಮೂದಿಸಲು ಅವಕಾಶ ನೀಡಿರುತ್ತಾರೆ.
ಮಾರ್ಚ್ 2019ರ ನಂತರ ಬಿಡುಗಡೆಯಾದ ಹಾಗು ಬಿಡುಗಡೆಯಾಗಲಿರುವ ಖಾತೆಗಳಿಗೂ ಎಡಿಟಿಂಗ್ ಅವಕಾಶ ನೀಡಬೇಕು, ಸದಸ್ಯರ ನಂಬ್ರದ ಕಾಲಂ ಸರಿಯಾಗಿ ಕಾಣುವಂತೆ ಮಾಡಲು ಕ್ರಮ ಕೈಗೊಳ್ಳಬೇಕು, ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿದರಿಂದ ಅದು ಹೊಸ ಪಡಿತರ ಚೀಟಿ ಎಂದು ನಮೂದಾಗುವ ಕಾರಣ ಹಲವು ಮಂದಿ ಕೃಷಿಕರು ಸಾಲಮನ್ನಾ ಸೌಲಭ್ಯ ಪಡೆಯುವುದರಿಂದ ವಂಚಿತರಾಗಿದ್ದಾರೆ. ಅರ್ಹರಿಗೆ ಸಾಲಮನ್ನಾ ಸೌಲಭ್ಯ ದೊರಕಿಸಲು ಕ್ರಮ ಕೈಗೊಳ್ಳಬೇಕು. ವಿವರ ನಮೂದಿಸುವಾಗ ತಪ್ಪುಗಳು ಉಂಟಾಗಿರುವುದನ್ನು ಸರಿಪಡಿಸಲು ಅವಕಾಶ ನೀಡಬೇಕು, ಎಫ್‍ಎಸ್‍ಡಿ ಇನ್ ಕಂಪ್ಲೀಟ್ ಮತ್ತು ಪ್ಯಾಕ್ಸ್ ಡಿಇಒ ಲಾಗಿನ್‍ನಲ್ಲಿ ವಿಲೇವಾರಿಗೆ ಬಾಕಿ ಇರುವ ಪ್ರಕರಣವನ್ನು ಇತ್ಯರ್ಥ ಪಡಿಸಲು ತಾಲೂಕು ಸಮಿತಿಗೆ ವರ್ಗಾಯಿಸಬೇಕು, ಹಿಂದಿನ ಆದೇಶದಂತೆ ಆದಾಯ ತರಿಗೆ, ಪಿಂಚಣಿ, ವೇತನ ಮಾಹಿತಿ ಅಪ್‍ಲೋಡ್ ಆಗಿದ್ದು ಇದರಿಂದ ಹಲವು ಮಂದಿ ಸೌಲಭ್ಯ ವಂಚಿತರಾಗಿದ್ದಾರೆ ಇದನ್ನು ತಿದ್ದುಪಡಿಗೆ ಅವಕಾಶ ನೀಡಬೇಕು, ಸಾಲಮನ್ನಾ ಸೌಲಭ್ಯವನ್ನು ಸಹಕಾರಿ ಸಂಘಗಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿರುವ ಖಾತೆಗೆ ಬಿಡುಗಡೆ ಮಾಡಿ ಸಹಕಾರಿ ಸಂಘಗಳ ಮೂಲಕ ರೈತರಿಗೆ ತಕ್ಷಣ ದೊರಕಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ಟಿ.ಎಲ್.ಸಿ ಸ್ಕ್ಯಾನ್ ಅಪ್‍ಲೋಡ್ ಪೆಂಡಿಂಗ್ ಪ್ರಕರಣವನ್ನು ತಾಲೂಕು ಸಮಿತಿಗೆ ವರ್ಗಾಯಿಸಬೇಕು, ಜಿ.ಪಿ.ಎ ನೀಡಿದ ಪ್ರಕರಣಗಳಿಗೆ ಸಾಲ ಮನ್ನಾ ಸವಲತ್ತು ಅವಕಾಶ ನೀಡಬೇಕು, ಸಾಲ ಪಡೆದ ಬಳಿಕ ಪಹಣಿ ಪೋಡಿ ದುರಸ್ತಿ, ಖಾತಾ ಬದಲಾವಣೆ, ಇತ್ಯಾದಿ ಕಾರಣಗಳಿಂದ ಪಹಣಿಯಲ್ಲಿ ಹೆಸರು ಬದಲಾಗಿದ್ದು ಇಂತಹಾ ಪ್ರಕರಣಗಳನ್ನು ತಾಲೂಕು ಸಮಿತಿಯಲ್ಲಿ ವಿಲೇವಾರಿಗೆ ಅವಕಾಶ ನೀಡಬೇಕು ಎಂದು ಮನವಿ ಆಗ್ರಹಿಸಲಾಗಿದೆ.