ಸುಳ್ಯ: ರಾಜ್ಯ ಸರಕಾರ ಘೋಷಿಸಿದ ಸಾಲಮನ್ನಾ ಯೋಜನೆಯಲ್ಲಿ ರೈತರ ಚಾಲ್ತಿ ಖಾತೆ ನಂಬರ್ ನಮೂದಿಸದ ಕಾರಣ ಹಣ ಹಿಂದಕ್ಕೆ ಹೋಗಿರುವ ಎಲ್ಲಾ ರೈತರ ಖಾತೆ ನಂಬರನ್ನು ನಮೂದಿಸಿ ಕೆಲವೇ ದಿನದಲ್ಲಿ ಹಣ ರೈತರ ಖಾತೆಗೆ ಜಮೆ ಆಗಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸಾಲ ಮನ್ನಾ ಹಣ ರೈತರ ಖಾತೆಗೆ ಜಮೆ ಆಗದೆ ಅನ್ಯಾಯ ಆಗಿದೆ ಎಂದು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಆಗಮಿಸಿ ಮಾಹಿತಿ ನೀಡಿದ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಮಂಜುನಾಥ್, ಸುಳ್ಯ ತಾಲೂಕಿಲ್ಲಿ ಸಾಲ ಮನ್ನಾಕ್ಕೆ ಒಟ್ಟು 14,114 ಮಂದಿ ರೈತರ 118.11 ಕೋಟಿ ರೂ ಬೇಡಿಕೆ ಇತ್ತು. ಇದರಲ್ಲಿ 10,856 ಮಂದಿಗೆ 83.72 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ ಖಾತೆ ಸಂಖ್ಯೆ ನಮೂದಿಸದ ಕಾರಣ 7,462 ರೈತರಿಗೆ 58.22 ಕೋಟಿ ಜಮೆ ಆಗಲು ಬಾಕಿ ಇತ್ತು. ಕಳೆದ ವಾರ ಮೂರು ದಿನಗಳ ಕಾಲ ಅಪ್‍ಲೋಡ್ ಮಾಡಲು ಅವಕಾಶ ನೀಡಿದಾಗ 2,953 ರೈತರ ಖಾತೆ ಸಂಖ್ಯೆ ಅಪಲೋಡ್ ಮಾಡಲಾಗಿದೆ. ಸೋಮವಾರದಿಂದ ಮತ್ತೆ ಅಪ್‍ಲೋಡ್ ಮಾಡಲು ಅವಕಾಶ ನೀಡಲಿದ್ದು 4,509 ರೈತರ ಖಾತೆ ಸಂಖ್ಯೆ ಅಪ್‍ಲೋಡ್ ಮಾಡಲಾಗುವುದು ಎಂದು ಹೇಳಿದರು. ಒಟ್ಟು 7,462 ರೈತರಿಗೆ 58.22 ಕೋಟಿ ಜಮೆ ಆಗಲಿದೆ ಎಂದು ವಿವರಿಸಿದರು. ವಿವಿಧ ಕಾರಣಗಳಿಂದ 3,148 ರೈತರ ಹೆಸರು ಗ್ರೀನ್ ಲಿಸ್ಟ್ ಗೆ ಸೇರ್ಪಡೆ ಆಗಲಿಲ್ಲ. ಇವರ ಖಾತೆಗೆ ಹಣ ಜಮೆ ಆಗಲು ಇರುವ ತಾಂತ್ರಿಕ ಕಾರಣಗಳನ್ನು ಸರಿಪಡಿಸಲು ಮುಂದೆ ಅವಕಾಶ ಇದೆ ಎಂದು ಅವರು ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 94,867 ರೈತರಿಗೆ 982 ಕೋಟಿ ಬೇಡಿಕೆ ಇದೆ. ಇದರಲ್ಲಿ 350.11 ಕೋಟಿ ಬಿಡುಗಡೆ ಆಗಿದೆ ಎಂದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರಾಧಾಕೃಷ್ಣ ಬೊಳ್ಳೂರು ಸಾಲ ಮನ್ನಾ ಹಣ ರೈತರ ಖಾತೆಗೆ ಬರಲು ವಿಳಂಬ ಆಗಲು ಸಹಕಾರ ಇಲಾಖೆಯೇ ಕಾರಣ ಎಂದು ದೂರಿದರು. ಎಲ್ಲವೂ ಸರಿ ಇದ್ದ ರೈತರಿಗೂ ಹಣ ಜಮೆ ಆಗದೆ ಅನ್ಯಾಯ ಆಗಿದೆ ಎಂದು ಸದಸ್ಯ ಅಬ್ದುಲ್ ಗಫೂರ್ ಹೇಳಿದರು. ಸಾಲ ಮನ್ನಾ ಹಣ ಬರಲು ಬಾಕಿ ಇದ್ದರೂ ರೈತರ ಸಾಲವನ್ನು ಪೂರ್ತಿಯಾಗಿ ಸಹಕಾರಿ ಸಂಘಗಳು ವಸೂಲಿ ಮಾಡಿದ್ದು ಯಾಕೆ ಎಂದು ಸದಸ್ಯ ಅಶೋಕ್ ನೆಕ್ರಾಜೆ ಪ್ರಶ್ನಿಸಿದರು. ಇಲಾಖೆಯಿಂದ ಅಂತಹಾ ಯಾವುದೇ ಸೂಚನೆಯನ್ನೂ ಸಹಕಾರಿ ಸಂಘಗಳಿಗೆ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದರು. ಈ ತಿಂಗಳ ಕೊನೆಯ ಒಳಗಾಗಿ ಸಾಲಮನ್ನಾ ಅರ್ಹರಾದ ಎಲ್ಲಾ ರೈತರಿಗೂ ದೊರಕಿಸಲು ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷರು ಸೂಚಿಸಿದರು.
ಅರಣ್ಯ ಇಲಾಖೆಯ ವತಿಯಿಂದ ಜಲಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು ಕಾಡಿನ ಒಳಗೆ ನೀರಿನ ಹರಿವು ಇರುವ ಕಡೆಗಳಲ್ಲಿ ಗಲ್ಲಿ ಚೆಕ್ಸ್ ಗಳನ್ನು ನಿರ್ಮಿಸಲಾಗುತ್ತದೆ. ಈ ಕುರಿತು ಪಟ್ಟಿ ತಯಾರಿಸಿ ಸಲ್ಲಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಹೇಳಿದರು. ಜಲಸಂರಕ್ಷಣೆಗೆ ಒತ್ತು ನೀಡಿ ಎಂದು ಸಭೆ ಸೂಚಿಸಿತು. ರಾಷ್ಟ್ರೀಕೃತ ಬ್ಯಾಂಕುಗಳು ಸರಿಯಾಗಿ ಸೇವೆ ಕೊಡ್ತಾ ಇಲ್ಲ. ಅರ್ಹ ಫಲಾನುಭವಿಗಳಿಗೆ, ಬಡವರಿಗೆ ಲೋನ್ ನೀಡಲು ಸತಾಯಿಸುತ್ತಾರೆ ಎಂದು ಸದಸ್ಯ ಅಶೋಕ್ ನೆಕ್ರಾಜೆ ಹೇಳಿದರು. ರಾಧಾಕೃಷ್ಣ ಬೊಳ್ಳೂರು ಕೂಡ ಇದಕ್ಕೆ ಧ್ವನಿಗೂಡಿಸಿದರು. ಈ ಕುರಿತು ಚರ್ಚೆ ನಡೆದು ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮತ್ತು ಓಂಬುಡ್ಸ್ ಮೆನ್ ಗಮನಕ್ಕೆ ತರಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸುಬ್ರಹ್ಮಣ್ಯದಲ್ಲಿ ವಸತಿಗೃಹಗಳಿಂದ ನೀರನ್ನು ಸಂಸ್ಕರಿಸದೆ ಹೊರಗೆ ಬಿಡುವ ಬಗ್ಗೆ ಈ ಸಭೆಯಲ್ಲಿಯೂ ಚರ್ಚೆ ನಡೆಯಿತು. ಈ ಕುರಿತು ಸಮೀಕ್ಷೆ ನಡೆಸಿ ವರದಿಯನ್ನು ಪಂಚಾಯತ್‍ಗಳಿಗೆ ಕ್ರಮಕ್ಕಾಗಿ ಸಲ್ಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸಭೆಗೆ ತಿಳಿಸಿತ್ತು. ಕೆಲವು ಲಾಡ್ಜ್ ಗಳು ಇಂಗುಗುಂಡಿ ಮಾಡಿ ನೀರು ಬಿಡುತ್ತಿದ್ದರೂ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಅಶೋಕ್ ನೆಕ್ರಾಜೆ ಹೇಳಿದರು. ಕೊಳಚೆ ನೀರು ಬಿಡಲು ಸರಿಯಾದ ವ್ಯವಸ್ಥೆ ಮಾಡದ ಲಾಡ್ಜ್ ಗಳ ಪರವಾನಗಿ ರದ್ದು ಮಾಡಲು ಕ್ರಮ ವಹಿಸಿ ಎಂದು ಅವರು ಒತ್ತಾಯಿಸಿದರು. ಇಷ್ಟು ಗಂಭೀರ ವಿಚಾರದ ಬಗ್ಗೆ ಆರೋಗ್ಯ ಇಲಾಖೆ ಏನು ಕ್ರಮ ಕೈಗೊಂಡಿದ್ದೀರಿ, ಪರವಾನಗಿ ನೀಡಲು ನಿರಾಕ್ಷೇಪಣಾ ಪತ್ರ ನೀಡಿದ್ದು ಯಾಕೆ ಎಂದು ರಾಧಾಕೃಷ್ಣ ಬೊಳ್ಳೂರು ಪ್ರಶ್ನಿಸಿದರು. 10 ದಿನಗಳಲ್ಲಿ ಸಹಾಯಕ ಕಮೀಷನರ್ ಅವರಲ್ಲಿ ಚರ್ಚಿಸಿ ಈ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಅಧ್ಯಕ್ಷ ಚನಿಯ ಕಲ್ತಡ್ಕ ಸೂಚಿಸಿದರು. ಸಣ್ಣ ಪುಟ್ಟ ದಾಖಲೆಗಳು ನೀಡುವ ಸಂದರ್ಭದಲ್ಲಿಯೂ ಕಂದಾಯ ಇಲಾಖೆ ಜನರನ್ನು ಸತಾಯಿಸುತ್ತಿದ್ದಾರೆ ಎಂದು ಸದಸ್ಯರು ದೂರಿದರು. ರಸಗೊಬ್ಬರ ಮಾರಾಟದ ಚೀಲದ ಮೇಲೆ ಎಂಆರ್ ಪಿ ದರ ಮತ್ತು ಸರ್ಕಾರ ನೀಡುವ ಸಬ್ಸಿಡಿ ಮೊತ್ತವನ್ನು ನಮೂದಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಉಪಸ್ಥಿತರಿದ್ದರು.