ಸುಳ್ಯ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಂದು ಲಕ್ಷ ರೂವರೆಗಿನ ಸಾಲಮನ್ನಾ ಎಲ್ಲಾ ರೈತರ ಖಾತೆಗೆ ಜಮೆ ಆಗುವುದಕ್ಕೆ ಇರುವ ಗೊಂದಲ ಪರಿಹಾರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಒತ್ತಾಯಿಸಲು ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರುಗಳು ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು. ಸೇರ್ಪಡೆಗೆ ಬಿಟ್ಟು ಹೋದ ರೈತರ ಚಾಲ್ತಿ ಖಾತೆ ಸಂಖ್ಯೆ ಮತ್ತಿತರ ಮಾಹಿತಿಗಳನ್ನು ಅಪ್‍ಲೋಡ್ ಮಾಡಲು ಮೂರು ದಿನಗಳ ವೆಬ್‍ಸೈಟ್ ತೆರೆಯಲಾಗಿದ್ದರೂ ಶೇ.25 ರಿಂದ ಶೇ.30 ರಷ್ಟು ಮಂದಿಯ ವಿವರಗಳನ್ನು ಮಾತ್ರ ಅಪ್‍ಲೋಡ್ ಮಾಡಲು ಸಾಧ್ಯವಾಗಿದೆ. ಸಾಲಮನ್ನಾ ರೈತರ ಪಟ್ಟಿ ತಯಾರಿಸಲಾಗಿದ್ದು 18 ಪಟ್ಟಿಗಳಲ್ಲಿ ಈಗ 14 ಪಟ್ಟಿವರೆಗಿನವರ ಮಾಹಿತಿ ಮಾತ್ರ ಅಪಲೋಡ್ ಮಾಡಲು ಅವಕಾಶ ನೀಡಲಾಗಿತ್ತು. ಉಳಿದ ಪಟ್ಟಿಯಲ್ಲಿ ಸುಳ್ಯ ತಾಲೂಕಿನ ಹೆಚ್ಚು ಮಂದಿ ರೈತರ ಹೆಸರಿದ್ದು ಶೇ.70 ಮಂದಿಯ ಮಾಹಿತಿ ಅಪ್‍ಲೋಡ್ ಮಾಡಲು ಬಾಕಿ ಇದೆ ಎಂದು ವಿವಿಧ ಸಹಕಾರಿ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು. ಅಲ್ಲದೆ ಇನ್ನಿತರ ಹಲವು ತಾಂತ್ರಿಕ ಸಮಸ್ಯೆಗಳಿಂದಲೂ ಅಪ್‍ಲೋಡ್ ಸಧ್ಯವಾಗದೆ ಸಾಲ ಮನ್ನಾ ಸೌಲಭ್ಯ ಪಡೆಯುವುದರಿಂದ ರೈತರು ವಂಚಿತರಾಗಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು.
ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು ಮಾತನಾಡಿದರು. ಸುಳ್ಯ ತಾಲೂಕಿನ ಸಹಕಾರಿ ಸಂಘಗಳ ಮೂಲಕ ರೈತರಿಗೆ ಸಾಲಮನ್ನಾ ಸೌಲಭ್ಯ ದೊರೆಯಲು ಯಾವುದೆಲ್ಲ ಅಡಚಣೆ ಇದೆ ಎಂದು ಪಟ್ಟಿ ಮಾಡಿ ಅದನ್ನು ಸರಿಪಡಿಸಿ ಅರ್ಹರಾದ ಎಲ್ಲಾ ರೈತರಿಗೂ ಸಾಲಮನ್ನಾ ಸೌಲಭ್ಯ ದೊರಕಿಸಿ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಹಕಾರಿ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ತಿಳಿಸಿದ್ದಾರೆ.